ಕಳೆದ ಕೆಲವು ದಿನಗಳಿಂದ ಕುತೂಹಲಕ್ಕೆ ಕಾರಣವಾಗಿದ್ದ ಬಾಂಗ್ಲಾದೇಶ ಟಿ20 ವಿಶ್ವಕಪ್‌ನಲ್ಲಿ ಆಡುತ್ತದೋ ಇಲ್ಲವೋ ಎಂಬ ಪ್ರಶ್ನೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಂತಿಮ ನಿರ್ಧಾರ ಪ್ರಕಟಿಸಿದೆ. ಬಾಂಗ್ಲಾದೇಶ ತಂಡವು 2026ರ ಟಿ20 ವಿಶ್ವಕಪ್‌ನಿಂದ ಹೊರ ನಡೆದಿದೆ. ಈ ಬಗ್ಗೆ ಐಸಿಸಿ ತನ್ನ ನಿರ್ಧಾರವನ್ನು ಶನಿವಾರ ಪ್ರಕಟಿಸಿದೆ. ಬಾಂಗ್ಲಾದೇಶ ಬದಲಿಗೆ ಸ್ಕಾಟ್ಲೆಂಡ್ ಆಡಲಿದೆ ಎಂದು ಐಸಿಸಿ ಖಚಿತ ಪಡಿಸಿದೆ. ಫೆಬ್ರವರಿ 7 ರಂದು, ಸ್ಕಾಟ್ಲೆಂಡ್ ತಂಡವು ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ಸ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತನ್ನ ಅಭಿಯಾನವನ್ನು ಆರಂಭಿಸಲಿದೆ.
ಮುಂಬರುವ ಟಿ20 ವಿಶ್ವಕಪ್‌ನಲ್ಲಿ ತಾನು ಭಾರತಕ್ಕೆ ಪ್ರಯಾಣ ಬೆಳೆಸುವುದಿಲ್ಲ ಎಂಬ ಬಾಂಗ್ಲಾದೇಶ ನಿರ್ಧಾರಕ್ಕೆ ಅಂಟಿಕೊಂಡಿದೆ. ಹೀಗಾಗಿ ಐಸಿಸಿ ಶನಿವಾರ ಬಾಂಗ್ಲಾದೇಶ ತಂಡವನ್ನು ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ನಿಂದ ಹೊರಗಿಡುವುದಾಗಿ ಐಸಿಸಿ ತಿಳಿಸಿದೆ. ಬಾಂಗ್ಲಾದೇಶಕ್ಕೆ ಐಸಿಸಿ 2 ದಿನಗಳ ಹಿಂದೆ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವ ಬಗ್ಗೆ ಸ್ಪಷ್ಟನೇ ಕೇಳಿ ಗಡುವು ನೀಡಿತ್ತು. ಆದರೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ತನ್ನ ನಿಲುವಿಗೆ ಬದ್ಧವಾಗಿದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ಐಸುದು ತಿಳಿಸಿದೆ.

ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ತಂಡವನ್ನು ಸ್ಕಾಟ್ಲೆಂಡ್ ಬದಲಿಸಿದೆ ಎಂದು ಐಸಿಸಿ ಸ್ಪಷ್ಟಪಡಿಸಿದೆ. ಬಾಂಗ್ಲಾದೇಶ ತಂಡವನ್ನು ಸ್ಕಾಟ್ಲೆಂಡ್ ಬದಲಿಸುತ್ತಿದ್ದಂತೆ ವೇಳಾಪಟ್ಟಿಯಲ್ಲೂ ಬದಲಾವಣೆ ಆಗಲಿದೆ. ಇನ್ನು ಬಾಂಗ್ಲಾದೇಶ ತಂಡ ಆಡುವ ಪಂದ್ಯಗಳ ಬದಲಿಗೆ ಸ್ಕಾಟ್ಲೆಂಡ್ ಆಡುವುದನ್ನು ನೋಡಬಹುದಾಗಿದೆ. ಸ್ಕಾಟ್ಲೆಂಡ್ ಸಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಸ್ಕಾಟ್ಲೆಂಡ್ ಲೀಗ್ ಹಂತದ ಮೂರು ಪಂದ್ಯಗಳನ್ನು ಕೋಲ್ಕತ್ತಾದಲ್ಲಿ ಇನ್ನು ಒಂದು ಪಂದ್ಯವನ್ನು ಮುಂಬೈನಲ್ಲಿ ಆಡಲಿದೆ.
ಬಾಂಗ್ಲಾದೇಶ ತಂಡ ಟಿ20 ವಿಶ್ವಕಪ್‌ನಲ್ಲಿ ಭಾರತ ಪ್ರಯಾಣ ಬೆಳೆಸುವುದಿಲ್ಲ ಎಂದು ಐಸಿಸಿಗೆ ಸ್ಪಷ್ಟಪಡಿಸಿತ್ತು. ಅಲ್ಲದೆ ಇತ್ತೀಚಿಗೆ ನಡೆದ ಐಸಿಸಿ ಸಭೆಯಲ್ಲಿ ಬಾಂಗ್ಲಾದೇಶ ತಾನಾಡುವ ಪಂದ್ಯಗಳ ಸ್ಥಳಗಳನ್ನು ಬದಲಿಸುವಂತೆ ಮನವಿಯನ್ನು ಮಾಡಿಕೊಂಡಿತ್ತು. ಆದರೆ ಈ ಮನವಿಗೆ ಐಸಿಸಿ ಸ್ಪಂದನೆ ನೀಡಿರಲಿಲ್ಲ. ಅಲ್ಲದೆ ಬಾಂಗ್ಲಾದೇಶ ತನ್ನ ಗುಂಪನ್ನು ಬದಲಿಸುವಂತೆಯೂ ಮನವಿಯನ್ನು ಮಾಡಿಕೊಂಡಿತ್ತು. ಆದರೆ ಈ ಮನವಿಗೂ ಐಸಿಸಿ ಸೊಪ್ಪು ಹಾಕಿರಲಿಲ್ಲ. ಬಾಂಗ್ಲಾದೇಶ ಭಾರತಕ್ಕೆ ಪ್ರವಾಸ ಬೆಳೆಸಬೇಕೋ ಬೇಡವೋ ಎಂಬ ಬಗ್ಗೆ ಐಸಿಸಿ ಸಭೆಯಲ್ಲಿ ಮತಕ್ಕೆ ಹಾಕಲಾಯಿತು. ಈ ವೇಳೆ ಉಪಸ್ಥಿತರಿದ್ದ 16 ಸದಸ್ಯರ ಪೈಕಿ ಬಾಂಗ್ಲಾ ವಿರುದ್ಧವಾಗಿ 14 ಮತಗಳು ಬಿದ್ದರೆ, 2 ಮತಗಳು ಬಾಂಗ್ಲಾಪರ ಬಿದ್ದಿವೆ.
ಸ್ಕಾಟ್ಲೆಂಡ್ ತನ್ನ ಮೊದಲ ಪಂದ್ಯವನ್ನು ಕೋಲ್ಕತ್ತಾದ ಐಕಾನಿಕ್ ಈಡನ್ ಗಾರ್ಡನ್‌ನಲ್ಲಿ ಫೆಬ್ರವರಿ 7 ರಂದು ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ. ಫೆಬ್ರವರಿ 9 ರಂದು ಇದೇ ಅಂಗಳದಲ್ಲಿ ಇಟಲಿ ವಿರುದ್ಧ, ಫೆಬ್ರವರಿ 14 ರಂದು ಇಂಗ್ಲೆಂಡ್ ವಿರುದ್ಧ ಪಂದ್ಯವನ್ನು ಆಡಲಿದೆ. ಇನ್ನು ಸ್ಕಾಟ್ಲೆಂಡ್ ಲೀಗ್ ಹಂತದ ಕೊನೆಯ ಪಂದ್ಯವನ್ನು ಫೆಬ್ರವರಿ 17 ರಂದು ಮುಂಬೈನಲ್ಲಿ ನೇಪಾಳ ವಿರುದ್ಧ ಆಡಲಿದೆ.