IND vs BAN T20: ಬಾಂಗ್ಲಾದೇಶದಲ್ಲಿ ನಡೆದ ಭಾರತ ವಿರೋಧಿ ಚಟುವಟಿಕೆಗಳು ಕ್ರಿಕೆಟ್ ಮೇಲೆ ಪರಿಣಾಮ ಬೀರಿವೆ. ಇದೇ ವಿಚಾರವಾಗಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಐಪಿಎಲ್ 2026 ಮಿನಿ ಹರಾಜಿನಲ್ಲಿ ಖರೀದಿಸಿದ್ದ ಮುಸ್ತಫಿಜೂರು ರಹಮಾನ್ ಅವರನ್ನು ಶಾರುಖ್ ಖಾನ್ ಮಾಲಿಕತ್ವದ ಕೆಕೆಆರ್ ಬಿಡುಗಡೆ ಮಾಡಿತು. ಇದರ ಬೆನ್ನಲ್ಲೇ ಇದೀಗ ಮುಂಬರುವ ಟಿ-20 ವಿಶ್ವಕಪ್‌ಗೆ ಬಾಂಗ್ಲಾದ ಆಟಗಾರರು ಭಾರತಕ್ಕೆ ಬರಲು ನಿರಾಕರಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದ್ರೆ, ಇದರಿಂದ ಏನೆಲ್ಲಾ ಬೆಳವಣಿಗಗಳು ಆಗುವ ಸಾಧ್ಯತೆಯಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
2024ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಭಾರತ ವಿರೋಧಿ ಪ್ರತಿಭಟನೆಗಳು, ಕೋಮು ಹಿಂಸಾಚಾರದ ನಂತರ ಭಾರತ-ಬಾಂಗ್ಲಾದೇಶ ಸಂಬಂಧಗಳು ಅಷ್ಟಕಷ್ಟೇ ಎಂಬಂತೆ ಆಗಿದೆ. ಇದರ ಬಿಸಿ ಈಗ ಕ್ರಿಕೆಟ್‌ಗೂ ತಟ್ಟಿದೆ. ಏಕೆಂದರೆ ರಾಜಕಾರಣಿಗಳು, ಧಾರ್ಮಿಕ ಮುಖಂಡರು ಮತ್ತು ಅಭಿಮಾನಿಗಳಿಂದ ತೀವ್ರ ವಿರೋಧದ ನಂತರ ಐಪಿಎಲ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಬಿಸಿಸಿಐ ಸೂಚನೆಯ ಮೇರೆಗೆ ಬಾಂಗ್ಲಾ ದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಬಿಡುಗಡೆ ಮಾಡಿತು.

ಕೆಕೆಆರ್ ವಿರುದ್ಧ ಆಕ್ರೋಶ: ಕೆಕೆಆರ್ ತಂಡವು 2025ರ ಡಿಸೆಂಬರ್‌ನಲ್ಲಿ ನಡೆದ ಐಪಿಎಲ್ 2026 ಮಿನಿ ಹರಾಜಿನಲ್ಲಿ ಮುಸ್ತಫಿಜೂರು ರಹಮಾನ್ ಅವರನ್ನು 9.20 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಆದರೆ, ಬಾಂಗ್ಲಾದೇಶದಲ್ಲಿನ ಉದ್ವಿಗ್ನ ಪರಿಸ್ಥಿತಿಯ ನಡುವೆಯೇ ಅವರನ್ನು ತಂಡದಲ್ಲಿ ಉಳಿಸಿಕೊಂಡಿರುವ ವಿಚಾರ ವಿವಾದಕ್ಕೆ ಕಾರಣವಾಗಿ ಆಕ್ರೋಶಗಳು ವ್ಯಕ್ತವಾದವು. ಕೆಕೆಆರ್ ಮಾಲೀಕ ಶಾರುಖ್ ಖಾನ್ ವಿರುದ್ಧ ಎಲ್ಲೆಡೆ ಆಕ್ರೋಶಗಳು ಭುಗಿಲೆದ್ದವು.
ಬಿಸಿಸಿಐ ಭರವಸೆ ಏನು?: "ಮುಂಬರುವ ಐಪಿಎಲ್ ಆರಂಭಕ್ಕೂ ಮುಂಚಿತವಾಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಂಡದಿಂದ ಬಿಡುಗಡೆ ಮಾಡುವಂತೆ ಬಿಸಿಸಿಐ ಸೂಚನೆ ನೀಡಿತ್ತು. ಇದರಿಂದ ಅವರನ್ನು ಕೈಬಿಡಲಾಗಿದೆ," ಎಂದು ಕೋಲ್ಕತಾ ನೈಟ್ ರೈಡರ್ಸ್ ದೃಢಪಡಿಸಿದೆ. "ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಸೂಚನೆಯಂತೆ ಸೂಕ್ತ ಪ್ರಕ್ರಿಯೆ ಮತ್ತು ಚರ್ಚೆಯ ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ" ಎಂದು ಕೆಕೆಆರ್ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಮತ್ತೊಂದೆಡೆ, ಐಪಿಎಲ್ ನಿಯಮಾವಳಿಯ ಪ್ರಕಾರ, ಬದಲಿ ಆಟಗಾರನನ್ನು ಒದಗಿಸಲಾಗುತ್ತದೆ ಎಂದು ಬಿಸಿಸಿಐ ಕೆಕೆಆರ್‌ಗೆ ಭರವಸೆ ನೀಡಿದೆ.
ಬಿಸಿಸಿಐ ನಿರ್ಧಾರ ಸ್ವಾಗತಿಸಿದ ಬಿಜೆಪಿ ನಾಯಕ: ಬಿಜೆಪಿ ನಾಯಕ ಸಂಗೀತ್ ಸೋಮ್ ಅವರು ಇದನ್ನು "ಇಡೀ ದೇಶದ ಹಿಂದೂಗಳ ಜಯ" ಎಂದು ಕರೆದರು. ಅಲ್ಲದೆ, 100 ಕೋಟಿ ಜನರ ಭಾವನೆಗಳನ್ನು ಗೌರವಿಸಿದಕ್ಕಾಗಿ ಬಿಸಿಸಿಐಗೆ ಧನ್ಯವಾದ," ಎಂದು ಹೇಳಿದರು. ಮೊದಲಿಗೆ ಕೆಕೆಆರ್ ವಿರುದ್ಧ ದೇಶದಾದ್ಯಂತ ಆಕ್ರೋಶಗಳು ವ್ಯಕ್ತವಾಗಿದ್ದವು.
"ಇತ್ತೀಚೆಗೆ ಎಲ್ಲೆಡೆ ನಡೆಯುತ್ತಿರುವ ಬೆಳವಣಿಗೆಗಳಿಂದಾಗಿ, ಬಿಸಿಸಿಐ ಕೆಕೆಆರ್ ಫ್ರಾಂಚೈಸಿಗೆ ಬಾಂಗ್ಲಾದೇಶದ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಂಡದಿಂದ ಬಿಡುಗಡೆ ಮಾಡುವಂತೆ ಸೂಚಿಸಿತ್ತು. ಅವರು ಯಾವುದೇ ಬದಲಿ ಆಟಗಾರನನ್ನು ಕೇಳಿದರೆ, ಆ ಬದಲಿ ಆಟಗಾರನಿಗೆ ಅವಕಾಶ ನೀಡಲಿದೆ" ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದೂ ಯುವಕರ ಮೇಲೆ ದಾಳಿ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಮತ್ತೊಂದೆಡೆ, ಕ್ರೀಡೆಯಿಂದ ರಾಜಕೀಯವನ್ನು ಬೇರ್ಪಡಿಸಬೇಕೆಂಬ ಕೂಗುಗಳು ಮತ್ತಷ್ಟು ಜೋರಾಗಿವೆ.
ಬಾಂಗ್ಲಾದೇಶದ ಕ್ರೀಡಾ ಸಚಿವ ಹೇಳಿದ್ದೇನು?: ಇವೆಲ್ಲದರ ಪರಿಣಾಮ ಇದೀಗ ಮುಂಬರುವ ಟಿ-20 ವಿಶ್ವಕಪ್‌ಗೆ ಬಾಂಗ್ಲಾದೇಶ ಭಾರತಕ್ಕೆ ಬರಲು ನಿರಾಕರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಫೆಬ್ರವರಿ 7ರಿಂದ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿದ್ದು, ಈ ಟೂರ್ನಿಯಲ್ಲಿ ಬಾಂಗ್ಲಾದೇಶದ ಪಂದ್ಯಗಳನ್ನು ಕೋಲ್ಕತ್ತಾದಲ್ಲಿ ನಿಗದಿಪಡಿಸಲಾಗಿದೆ. ಆದರೆ, ಅವರು ಭಾರತದ ನೆಲದಲ್ಲಿ ಆಡಲು ಸಿದ್ಧರಿಲ್ಲ ಎಂಬುದು ತಿಳಿದುಬಂದಿದೆ. ಬಾಂಗ್ಲಾದೇಶದ ಕ್ರೀಡಾ ಸಚಿವ ಆಸಿಫ್ ನಜ್ರುಲ್ ಈಗಾಗಲೇ ಐಸಿಸಿಗೆ ತಮ್ಮ ಪಂದ್ಯಗಳನ್ನು ಭಾರತದಿಂದ ಸ್ಥಳಾಂತರಿಸುವಂತೆ ಕೇಳಿಕೊಂಡಿದ್ದಾರೆ ಎಂದು ವರದಿ ಆಗಿದೆ.
ಆಯೋಜಕರ ಮುಂದಿರುವ ಸವಾಲೇನು?: ಬಾಂಗ್ಲಾದೇಶವು ಭಾರತ ಬಿಟ್ಟು ಬೇರೆಡೆ ಪಂದ್ಯ ಆಡುವ ನಿರ್ಧಾರ ಕೈಗೊಂಡರೆ, ಅವರ ಮನವಿ ಸಂಪೂರ್ಣವಾಗಿ ಐಸಿಸಿಯ ಅನುಮೋದನೆಯ ಮೇಲೆ ಅವಲಂಬಿತವಾಗಿರುತ್ತದೆ. ಒಂದು ವೇಳೆ ಐಸಿಸಿ ಅವರ ಬೇಡಿಕೆಯನ್ನು ತಿರಸ್ಕರಿಸಿದರೆ ಹಾಗೂ ಬಾಂಗ್ಲಾದೇಶ ಭಾರತಕ್ಕೆ ಬರದೆ ಇದ್ದರೆ, ಅವರು ಸ್ವಯಂಪ್ರೇರಿತರಾಗಿ ಟೂರ್ನಿಯಿಂದ ಹೊರಗುಳಿದಂತೆ ಪರಿಗಣಿಸಲಾಗುತ್ತದೆ.
ಆದರೆ, ಐಸಿಸಿ ಬೇರೆ ಮೈದಾನಕ್ಕೆ ಸ್ಥಳಾಂತರ ಮಾಡಲು ಅನುಮತಿ ನೀಡಿದರೆ, ಬಾಂಗ್ಲಾದೇಶದ ಪಂದ್ಯಗಳು ಶ್ರೀಲಂಕಾದ ವಿವಿಧ ಮೈದಾನಗಳಲ್ಲಿ ನಡೆಯುವ ಸಾಧ್ಯತೆಯಿದೆ. ಆದರೆ, ಬಾಂಗ್ಲಾದೇಶ ಇರುವ ಗುಂಪಿನ ಉಳಿದ ತಂಡಗಳ ಪಂದ್ಯಗಳು ಭಾರತದಲ್ಲೇ ನಿಗದಿ ಆಗಿರುವುದರಿಂದ, ಇದು ಆಯೋಜಕರಿಗೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ ಎಂದು ಹೇಳಲಾಗುತ್ತದೆ.