ಭಾರತಕ್ಕೆ ಬಾಂಗ್ಲಾದೇಶ ಟಿ20 ವಿಶ್ವಕಪ್ ಆಡಲು ಪ್ರಯಾಣ ಬೆಳೆಸುತ್ತದೋ ಇಲ್ಲವೋ ಎಂಬ ಗೊಂದಲ್ಲಕ್ಕೆ ಇಂದು (ಜ.21) ತೆರೆ ಬೀಳಲಿದೆ. ಬಾಂಗ್ಲಾದೇಶ ತನ್ನ ನಿಲುವಿಗೆ ಬದ್ಧವಾಗಿದ್ದಂತೆ ಕಾಣುತ್ತಿದೆ. ಬಾಂಗ್ಲಾದೇಶದ ಕ್ರೀಡಾ ಸಲಹೆಗಾರ ಆಸಿಫ್ ನಜ್ರುಲ್ ಅವರು ಈ ಬಗ್ಗೆ ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಹೇರುವ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಭಾರತಕ್ಕೆ ಪ್ರವಸ ಬೆಳೆಸಲು ಹಿಂದೇಟು ಹಾಕಿದಲ್ಲಿ ಸ್ಕಾಟ್ಲೆಂಡ್ ತಂಡ ಟಿ20 ವಿಶ್ವಕಪ್‌ನಲ್ಲಿ ಆಡುವ ಅರ್ಹತೆ ಒಡೆಯಲಿದೆ ಎಂದು ತಿಳಿದು ಬಂದಿದೆ. ಬಾಂಗ್ಲಾದೇಶ ರಾಷ್ಟ್ರೀಯ ತಂಡ ಟಿ20 ವಿಶ್ವಕಪ್‌ನಲ್ಲಿ ಆಡಲು ಭಾರತಕ್ಕೆ ಪ್ರಯಾಣಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಐಸಿಸಿ ಜನವರಿ 21 ರೊಳಗೆ ಬಿಸಿಬಿ ತನ್ನ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು ಎಂದು ತಿಳಿಸಿದ ಹಿನ್ನೆಲೆ ಈ ಸೂಚನೆ ಬಂದಿದೆ.

ಐಸಿಸಿ, ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಒತ್ತಡಕ್ಕೆ ಮಣಿದು, ನಮ್ಮ ಮೇಲೆ ಷರತ್ತುಗಳನ್ನು ಹಾಕಲು ಮುಂದಾದರೆ ನಾವು ಒಪ್ಪುದಿಲ್ಲ ಎಂದು ನಜ್ರುಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪಾಕಿಸ್ತಾನ ಸಹ ಈ ಹಿಂದೆ ನಾವು ಭಾರತಕ್ಕೆ ಪ್ರಯಾಣಿಸುವುದಿಲ್ಲ ಎಂದು ಐಸಿಸಿಗೆ ತಿಳಿಸಿತ್ತು. ಆಗ ಐಸಿಸಿ ಸ್ಥಳ ಬದಲಾವಣೆ ಮಾಡಿಕೊಟ್ಟಿತ್ತು. ನಾವು ಸಹ ಅಂತಹದ್ದೇ ಬೇಡಿಕೆ ಇಟ್ಟಿದ್ದೇವೆ. ನಮಗೆ ಭಾರತದಲ್ಲೇ ಆಡುವಂತೆ ಒತ್ತಡ ಹೇರುವುದನ್ನು ನಾವು ಸಹಿಸುವುದಿಲ್ಲ ಎಂದು ನಜ್ರುಲ್ ಹೇಳಿದ್ದಾರೆ.
ಈ ಬಿಕ್ಕಟ್ಟು ಬಾಂಗ್ಲಾದೇಶದ ಸ್ಟಾರ್ ವೇಗದ ಬೌಲರ್ ಮುಸ್ತಾಫಿಜುರ್ ರಹಮಾನ್ ಅವರನ್ನು ಐಪಿಎಲ್ ತಂಡದಿಂದ ಕೈ ಬಿಟ್ಟ ಮೇಲೆ ನಡೆದಿದೆ. ಮುಸ್ತಾಫಿಜುರ್ ರಹಮಾನ್ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ 9.2 ಕೋಟಿ ನೀಡಿ ಖರೀದಿಸಿತ್ತು. ಬಿಸಿಸಿಐ ಸೂಚನೆಯ ಬಳಿಕ ಅವರನ್ನು ತಂಡದಿಂದ ಕೈ ಬಿಟ್ಟಿದೆ. ಅಲ್ಲದೆ ಬಿಸಿಸಿಐ ಇವರ ಬದಲಗೆ ಬೇರೆ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುವ ಅವಕಾಶವನ್ನು ನೀಡಿದೆ.
ಬಿಸಿಬಿ ಭಾರತದಲ್ಲಿ ಭದ್ರತಾ ಕಾರಣಗಳನ್ನು ನೀಡಿ ಟಿ20 ವಿಶ್ವಕಪ್‌ಗೆ ಪ್ರಯಾಣಿಸದಿರು ನಿರ್ಧಾರವನ್ನು ಕೈಗೊಂಡಿತು. ಅಲ್ಲದೆ ಬಿಸಿಬಿ, ಐಸಿಸಿ ಬಳಿ ಸ್ಥಳ ಬದಲಾವಣೆ, ಗುಂಪು ಬದಲಿಸುವಂತೆಯೂ ಬೇಡಿಕೆ ಸಹ ಇಟ್ಟಿತ್ತು. ಆದರೆ ಇದಕ್ಕೆಲ್ಲಾ ಸೊಪ್ಪು ಹಾಕದ ಐಸಿಸಿ ತನ್ನ ವೇಳಾಪಟ್ಟಿಗೆ ತಾನು ಬದ್ಧವಾಗಿರಲಿದೆ ಎಂದು ಸೂಚಿಸಿತ್ತು. ಸದ್ಯ ಬಾಂಗ್ಲಾದೇಶ ಸಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಇದೇ ತಂಡದಲ್ಲಿ ಇಟಲಿ, ವೆಸ್ಟ್ ಇಂಡೀಸ್, ಇಂಗ್ಲೆಂಡ್ ತಂಡಗಳು ಸಹ ಸ್ಥಾನ ಪಡೆದಿವೆ.
ಬಾಂಗ್ಲಾದೇಶ ತನ್ನ ಲೀಗ್ ಹಂತದ ಮೂರು ಪಂದ್ಯಗಳನ್ನು ಕೋಲ್ಕತ್ತಾದಲ್ಲಿ ಹಾಗೂ ಒಂದು ಪಂದ್ಯವನ್ನು ಮುಂಬೈನಲ್ಲಿ ಆಡಲಿದೆ. ಬಾಂಗ್ಲಾದೇಶ ಭಾರತಕ್ಕೆ ಪ್ರವಾಸ ಬೆಳೆಸುತ್ತದೋ ಇಲ್ಲವೋ ಎಂಬ ಪ್ರಶ್ನೆಗೆ ಬುಧವಾರ ಉತ್ತರ ಸಿಗುವ ಸಾಧ್ಯತೆ ಇದೆ..