ಭಾನುವಾರ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯ ನಡೆಯಲಿದೆ. ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿ ಇತಿಹಾಸ ಬರೆಯುವ ಕನಸಿನಲ್ಲಿ ಟೀಮ್ ಇಂಡಿಯಾ ಇದೆ. ಈ ಟ್ರೋಫಿಯ ಫೈನಲ್ ಪಂದ್ಯಕ್ಕೂ ಮುನ್ನವೇ ಬಾಂಗ್ಲಾದೇಶದ ಸ್ಟಾರ್ ಪ್ಲೇಯರ್ ಒಬ್ಬರು ನಿವೃತ್ತಿ ಘೋಷಿಸಿದ್ದಾರೆ. ಬಾಂಗ್ಲಾದೇಶದ ಪರ ದಶಕಗಳ ಕಾಲ ಆಡಿರುವ ಸ್ಟಾರ್ ಪ್ಲೇಯರ್ ವಿದಾಯ ಹೇಳಿರುವುದು ನಿಜಕ್ಕೂ ಅಭಿಮಾನಿಗಳಲ್ಲಿ ತೀಬ್ರ ಬೇಸರ ತಂದಿದೆ.
ಭಾರತದ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಸೋತ ಬಳಿಕ ಆಸ್ಟ್ರೇಲಿಯಾದ ಖ್ಯಾತ ಆಟಗಾರ ಸ್ಟೀವನ್ ಸ್ಮಿತ್ ನಿವೃತ್ತಿ ಘೋಷಿಸಿದ್ದರು. ಇವರ ಬೆನ್ನಲ್ಲೆ ಈಗ ಬಾಂಗ್ಲಾದೇಶದ ಸ್ಟಾರ್ ಆಟಗಾರ ಮುಷ್ಫೀಕರ್ ರಹೀಮ್ ಅವರು ನಿವೃತ್ತಿ ಘೋಷಿಸಿದ್ದಾರೆ. ಮುಷ್ಫಿಕರ್ ರಹೀಮ್ ಸಾಮಾಜಿಕ ಮಾಧ್ಯಮದಲ್ಲಿ ದೀರ್ಘ ಪೋಸ್ಟ್ ಬರೆಯುವ ಮೂಲಕ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ನಿವೃತ್ತಿ ಬಗ್ಗೆ ಮುಷ್ಫೀಕರ್ ರಹೀಮ್ ಘೋಷಿಸಿದ್ದಾರೆ. ದೇಶಕ್ಕಾಗಿ ಇಷ್ಟು ವರ್ಷಗಳ ಕಾಲ ಆಡಿದ ತೃಪ್ತಿ ಇದೆ. ಮೈದಾನಕ್ಕೆ ಇಳಿದಾಗಲೆಲ್ಲಾ 100 ಪ್ರತಿಷತ ಯಫರ್ಟ್ ಹಾಕುತ್ತಿದ್ದೆ. ಕಳೆದ ಕೆಲವು ವಾರಗಳು ನನಗೆ ತುಂಬ ಸವಾಲುದಾಯಕವಾಗಿದ್ದವು. ತಮ್ಮ ನಿವೃತ್ತಿಯನ್ನು ಘೋಷಿಸುವ ವೇಳೆ ಮುಷ್ಫೀಕರ್ ರಹೀಮ್ ಖುರಾನ್‌ನ ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ. ಕಳೆದ 19 ವರ್ಷಗಳಿಂದ ಕ್ರಿಕೆಟ್ ಆಡುತ್ತಿದ್ದು, ತಮ್ಮ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಅವರು ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ರಹೀಮ್ ತಿಳಿಸಿದ್ದಾರೆ.
37 ವರ್ಷದ ಮುಷ್ಫೀಕರ್ ರಹೀಮ್ ಬಾಂಗ್ಲಾದೇಶದ ಪರ ಹಲವು ಸ್ಮರಣೀಯ ಇನಿಂಗ್ಸ್‌ಗಳನ್ನು ಆಡಿದ್ದಾರೆ. ಇವರು 274 ಏಕದಿನ ಪಂದ್ಯಗಳನ್ನು ದೇಶಕ್ಕಾಗಿ ಆಡಿದ್ದು, 36ರ ಸರಾಸರಿಯಲ್ಲಿ 7795 ರನ್ ಸಿಡಿಸಿದ್ದಾರೆ. ಈ ವೇಳೆ 9 ಶತಕ ಹಾಗೂ 49 ಅರ್ಧಶತಕಗಳು ಸೇರಿವೆ. ಮುಷ್ಫೀಕರ್ ರಹೀಮ್ ಅವರು 2006 ಫೆಬ್ರವರಿ 24 ರಂದು ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಇದೇ ಚಾಂಪಿಯನ್ಸ್ ಟ್ರೋಫಿಯಲ್ಲಿ ಇವರು ತಮ್ಮ ವೃತ್ತಿ ಜೀವನದ ಕೊನೆಯ ಏಕದಿನ ಪಂದ್ಯವನ್ನು ಆಡಿದರು. ಬಾಂಗ್ಲಾ ಪರ ಅತಿ ಹೆಚ್ಚು ರನ್ ಬಾರಿಸಿದ ಸಾಧಕರ ಪಟ್ಟಿಯಲ್ಲಿ ಇವರಿಗೆ ಎರಡನೇ ಸ್ಥಾನ.

ವಿಕೆಟ್ ಕೀಪರ್ ಆಗಿ 250ಕ್ಕೂ ಹೆಚ್ಚು ಪಂದ್ಯವನ್ನು ಆಡಿರುವ ಐದನೇ ಆಟಗಾರ ಎಂಬ ಹೆಗ್ಗಳಿಕೆ ಇವರದ್ದಾಗಿತ್ತು. ಅಲ್ಲದೆ ವಿಕೆಟ್ ಕೀಪರ್ ಆಗಿ 7 ಶತಕ ಬಾರಿಸಿದ ವಿಶ್ವದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆ ಇವರದ್ದಾಗಿದೆ. ಇವರಿಗೂ ಮೊದಲು ಕುಮಾರ್ ಸಂಗಾಕ್ಕರ್, ಆಡಂ ಗಿಲ್‌ಕ್ರಿಸ್ಟ್, ಎಂಎಸ್ ಧೋನಿ ಈ ಸಾಧನೆ ಮಾಡಿದ್ದರು.
ಮುಷ್ಫೀಕರ್ ರಹೀಮ್ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಸ್ಥಾನ ಪಡೆದಿದ್ದರು. ಈ ವೇಳೆ ಇವರು ಕೇವಲ 2 ರನ್ ಬಾರಿಸುವಲ್ಲಿ ಮಾತ್ರ ಸಫಲರಾದರು. ಭಾರತದ ವಿರುದ್ಧದ ಪಂದ್ಯದಲ್ಲಿ ಇವರು ಸೊನ್ನೆ ಸುತ್ತಿದ್ದರೆ, ಕಿವೀಸ್ ವಿರುದ್ಧ 2 ರನ್ ಬಾರಿಸಿದ್ದರು. ಮಳೆಯಿಂದಾಗಿ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ನಡೆಸಲು ಸಾಧ್ಯವಾಗಲಿಲ್ಲ.