
ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಗುರುವಾರ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿರುವ ಕಾರಣ ಆತಿಥೇಯ ಬಾಂಗ್ಲಾದೇಶ ಎರಡನೇ ಪಂದ್ಯ ಗೆದ್ದು ಸರಣಿ ಸಮಬಲಗೊಳಿಸುವ ಪ್ರಯತ್ನ ನಡೆಸಲಿದೆ. ಇನ್ನು ಭಾರತ ತಂಡಕ್ಕೆ ಗಾಯದ ಸಮಸ್ಯೆಗಳು ಕಾಡುತ್ತಿದ್ದು ಹಂಗಾಮಿ ನಾಯಕ ಕೆಎಲ್ ರಾಹುಲ್ ಕೂಡ ಪಂದ್ಯದ ಮುನ್ನಾದಿನ ಬೆರಳಿನ ಗಾಯಕ್ಕೆ ತುತ್ತಾಗಿದ್ದಾರೆ. ಆದರೆ ಗಾಯ ಗಂಭೀತವಲ್ಲದ ಕಾರಣ ಪಂದ್ಯಕ್ಕೆ ಲಭ್ಯವಾಗುವ ನಿರೀಕ್ಷೆಯಿದೆ.
ಇನ್ನು ಈ ಪಂದ್ಯದ ಆರಂಭಕ್ಕೂ ಮುನ್ನದಿನ ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್ ಪ್ರತಿಕ್ರಿಯೆ ನೀಡಿದ್ದು ಈ ಪಂದ್ಯದ ಬಗ್ಗೆ ಕುತೂಹಲಕಾರಿ ಭವಿಷ್ಯ ನುಡಿದಿದ್ದಾರೆ. ಈ ಪಂದ್ಯ ನಡೆಯಲಿರುವ ಶೇರ್ ಎ ಬಾಂಗ್ಲಾ ಕ್ರೀಡಾಂಗಣ ಬೌಲರ್‌ಗಳಿಗೆ ಹೆಚ್ಚು ನೆರವಾಗಲಿದೆ ಎಂದಿರುವ ಜಾಫರ್ ಪಂದ್ಯ ಐದು ದಿನಗಳಿಗಿಂತ ಮುಂಚೆಯೇ ಅಂತ್ಯವಾಗಲಿದೆ ಎಂದಿದ್ದಾರೆ.
"ಮೀರ್ಪುರದಲ್ಲಿ ನಡೆಯಲಿರುವ ಈ ಪಂದ್ಯ ಐದು ದಿನಗಳಕಾಲ ನಡೆಯಲಿದೆ ಎಂದು ನನಗೆ ಅನಿಸುತ್ತಿಲ್ಲ. ಚಿತ್ತಗಾಂಗ್ ಹೋಲಿಸಿದರೆ ಈ ಪಿಚ್ ಹೆಚ್ಚು ಬೌಲರ್‌ಗಳಿಗೆ ಸ್ನೇಹಿಯಾಗಿರಲಿದೆ. ಇಲ್ಲಿ ಭಾರತ ತಂಡ ಇಬ್ಬರು ವೇಗಿಗಳು ಹಾಗೂ ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುವುದು ಉತ್ತಮ" ಎಂದಿದ್ದಾರೆ ವಾಸಿಂ ಜಾಫರ್.
ಇನ್ನು ಇದೇ ಸಂದರ್ಭದಲ್ಲಿ ಭಾರತದ ಆಡುವ ಬಳಗದ ಬಗ್ಗೆಯೂ ವಾಸಿಮ್ ಜಾಫರ್ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಪಂದ್ಯಕ್ಕೆ ಟೀಮ್ ಇಂಡಿಯಾ ಯಾವುದೇ ಬದಲಾವನೆ ಮಾಡಿಕೊಳ್ಳದೆ ಕಣಕ್ಕಿಳಿಯುವುದು ಉತ್ತಮ ಎಂದಿದ್ದಾರೆ ವಾಸಿಂ ಜಾಫರ್.
ಟೀಮ್ ಇಂಡಿಯಾ ಸಂಭಾವ್ಯ ಆಡುವ ಬಳಗ: ಕೆಎಲ್ ರಾಹುಲ್, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್
ಬಾಂಗ್ಲಾದೇಶ ಸಂಭಾವ್ಯ ಆಡುವ ಬಳಗ: ನಜ್ಮುಲ್ ಹುಸೇನ್ ಶಾಂಟೋ, ಅನಾಮುಲ್ ಹಕ್, ಜಾಕಿರ್ ಹುಸೇನ್, ಶಾಕಿಬ್ ಅಲ್ ಹಸನ್, ಮುಶ್ಫಿಕರ್ ರಹೀಮ್, ಲಿಟನ್ ದಾಸ್, ಮೆಹಿದಿ ಹಸನ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಖಲೇಲ್ ಮಹಮೂದ್, ತೈಜುಲ್ ಇಸ್ಲಾಂ