
ಢಾಕಾ, ಆಗಸ್ಟ್ 27: ಬಾಂಗ್ಲಾದೇಶಿ ಕ್ರಿಕೆಟರ್ ಮೊಸಡೆಕ್ ಹುಸೇನ್ ಸೈಕತ್ ಅವರ ವಿರುದ್ಧ ಅವರ ಪತ್ನಿ ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಮೊಸೆಡೆಕ್ (22) ತಮ್ಮ ಕಸಿನ್ ಶರ್ಮಿನ್ ಸಮಿರಾ ಉಷಾ ಅವರನ್ನು ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದರು. ಸೆಪ್ಟೆಂಬರ್ 13 ರಿಂದ 28ರ ತನಕ ಯುಎಇನಲ್ಲಿ ನಡೆಯಲಿರುವ 50 ಓವರ್ ಗಳ ಏಷ್ಯಾಕಪ್ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಪಾಲ್ಗೊಳ್ಳಲಿರುವ ಬಾಂಗ್ಲಾದೇಶ ತಂಡಕ್ಕೆ ಮೊಸೆಡೆಕ್ ಆಯ್ಕೆಯಾಗಿದ್ದಾರೆ.
ಬಾಂಗ್ಲಾದೇಶದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ವಿರುದ್ಧ ಹೆಚ್ಚುವರಿ ಮುಖ್ಯ ಮ್ಯಾಜಿಸ್ಟ್ರೇಟ್ ರೊಸಿನಾ ಖಾನ್ ಅವರು ಉಷಾ ಅವರು ನೀಡಿದ ದೂರನ್ನು ಸ್ವೀಕರಿಸಿ, ಸದಾರ್ ಉಪಜಿಲ್ಲಾ ಕಾರ್ಯಕಾರಿ ಅಧಿಕಾರಿಗೆ ತನಿಖೆ ನಡೆಸುವಂತೆ ಸೂಚಿಸಿದೆ.
ಆಗಸ್ಟ್ 15ರಂದು 1 ಮಿಲಿಯನ್ ಟಾಕಾ(ಯುಎಸ್ ಡಿ 12,003) ನೀಡುವಂತೆ ಪೀಡಿಸಿ ಪತ್ನಿಯನ್ನು ಮನೆಯಿಂದ ಹೊರಕ್ಕೆ ಹಾಕಿದ್ದಾರೆ ಎಂದು ಉಷಾ ಪರ ವಕೀಲ ರೆಜುಲ್ ಕರೀಂ ದುಲಾಲ್ ಅವರು ಆರೋಪಿಸಿದ್ದಾರೆ.
ಉಷಾ ಜತೆ ವಿವಾಹ ವಿಚ್ಛೇದನ ಪಡೆಯಲು ಮೊಸೆಡೆಕ್ ಮುಂದಾಗಿದ್ದರು.ಆದರೆ, ಆತನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗಿದೆ ಎಂದು ಕ್ರಿಕೆಟರ್ ಮೊಸೆಡೆಕ್ ಅವರ ಸೋದದ ಮೊಸಬರ್ ಹುಸೇನ್ ಅವರು ಪ್ರತಿಕ್ರಿಯಿಸಿದ್ದಾರೆ.