Asia Cup 2023: ಸೂಪರ್ 4ಗೆ ಮುನ್ನ ಬಾಂಗ್ಲಾದೇಶಕ್ಕೆ ಭಾರೀ ಹಿನ್ನಡೆ; ಟೂರ್ನಿಯಿಂದ ಸ್ಟಾರ್ ಬ್ಯಾಟರ್ ಔಟ್!
ಸದ್ಯ ನಡೆಯುತ್ತಿರುವ 2023ರ ಏಷ್ಯಾ ಕಪ್ ಪಂದ್ಯಾವಳಿಯ ಲೀಗ್ ಹಂತದ ಪಂದ್ಯಗಳು ಮಂಗಳವಾರ, ಸೆಪ್ಟೆಂಬರ್ 5ರಂದು ಮುಕ್ತಾಯಗೊಳ್ಳಲಿವೆ. ಸೆಪ್ಟೆಂಬರ್ 6ರಿಂದ ಸೂಪರ್ 4 ಹಂತದ ಪಂದ್ಯಗಳು ಆರಂಭವಾಗಲಿವೆ.
ಇದೇ ವೇಳೆ ಬಾಂಗ್ಲಾದೇಶ ತಂಡಕ್ಕೆ ಭಾರೀ ಹಿನ್ನಡೆಯಾಗಿದ್ದು, ತಂಡದ ಸ್ಟಾರ್ ಬ್ಯಾಟ್ಸ್‌ಮನ್ ನಜ್ಮುಲ್ ಹೊಸೈನ್ ಶಾಂಟೊ ಅವರು ತೀವ್ರವಾದ ಮಂಡಿರಜ್ಜು ಗಾಯದಿಂದಾಗಿ 2023ರ ಏಷ್ಯಾ ಕಪ್‌ನಿಂದ ಹೊರಬಿದ್ದಿದ್ದಾರೆ.
ಏಷ್ಯಾ ಕಪ್ ಪಂದ್ಯಾವಳಿಯುದ್ದಕ್ಕೂ ಗಮನಾರ್ಹ ಫಾರ್ಮ್‌ನಲ್ಲಿದ್ದ ನಜ್ಮುಲ್ ಹೊಸೈನ್ ಶಾಂಟೊ ಭಾನುವಾರದಂದು ಅಫ್ಘಾನಿಸ್ತಾನ ವಿರುದ್ಧದ ಅಮೋಘ ಶತಕದ ವೇಳೆ ಗಾಯಗೊಂಡರು.

ಎಂಆರ್ಐ ಸ್ಕ್ಯಾನ್ ಅವರ ಎಡಗಾಲಿನ ಮಂಡಿರಜ್ಜು ಸ್ನಾಯು ಸೆಳೆತ ಬಹಿರಂಗಗೊಂಡ ನಂತರ ನಜ್ಮುಲ್ ಹೊಸೈನ್ ಶಾಂಟೊ ಅವರ ಗಾಯದ ಸುದ್ದಿಯನ್ನು ಮರುದಿನ ಖಚಿತಪಡಿಸಲಾಯಿತು.
ಬಾಂಗ್ಲಾದೇಶ ರಾಷ್ಟ್ರೀಯ ತಂಡದ ಫಿಸಿಯೋ ಬೇಜೆದುಲ್ ಇಸ್ಲಾಂ ಖಾನ್ ನೇತೃತ್ವದ ವೈದ್ಯಕೀಯ ತಂಡವು ನಜ್ಮುಲ್ ಶಾಂಟೊ ಅವರನ್ನು ಮುಂಬರುವ 2023ರ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಸಂರಕ್ಷಿಸಲು ವಿಶ್ರಾಂತಿ ಪಡೆಯುವಂತೆ ಶಿಫಾರಸು ಮಾಡಲಾಗಿದೆ.
ವಿಶ್ವಕಪ್‌ಗೆ ತಯಾರಿಗಾಗಿ ಪುನರ್ವಸತಿ
ಈ ಕುರಿತು ಬೇಜೆದುಲ್ ಇಸ್ಲಾಂ ಖಾನ್ ಮಾತನಾಡಿ, "ನಜ್ಮುಲ್ ಶಾಂಟೊ ಬ್ಯಾಟಿಂಗ್ ಸಮಯದಲ್ಲಿ ಮಂಡಿರಜ್ಜು ನೋವಿನಿಂದ ಬಳಲುತ್ತಿದ್ದರು ಮತ್ತು ಫೀಲ್ಡಿಂಗ್ ಮಾಡಲು ಸಾಧ್ಯವಾಗಲಿಲ್ಲ. ನಾವು ಸ್ನಾಯು ಮುರಿದಿರುವುದನ್ನು ದೃಢೀಕರಿಸಲು ಎಂಆರ್ಐ ಸ್ಕ್ಯಾನ್ ಮಾಡಿದ್ದೇವೆ. ಮುನ್ನೆಚ್ಚರಿಕೆಯಾಗಿ, ನಜ್ಮುಲ್ ಶಾಂಟೊ ಪಂದ್ಯಾವಳಿಯ ಉಳಿದ ಪಂದ್ಯಗಳಲ್ಲಿ ಭಾಗವಹಿಸುವುದಿಲ್ಲ ಮತ್ತು ತವರಿಗೆ ಹಿಂತಿರುಗಲಿದ್ದಾರೆ. ವಿಶ್ವಕಪ್‌ಗೆ ತಯಾರಿಗಾಗಿ ಪುನರ್ವಸತಿ ಆರಂಭಿಸಲಿದ್ದಾರೆ," ಎಂದರು.

ಏಷ್ಯಾ ಕಪ್‌ನಲ್ಲಿ ನಜ್ಮುಲ್ ಶಾಂಟೊ ಬ್ಯಾಟಿಂಗ್ ಪ್ರದರ್ಶನ
2023ರ ಏಷ್ಯಾ ಕಪ್‌ನಲ್ಲಿ ನಜ್ಮುಲ್ ಹೊಸೈನ್ ಶಾಂಟೊ ಬಾಂಗ್ಲಾದೇಶ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಶ್ರೀಲಂಕಾ ವಿರುದ್ಧ ತಾಳ್ಮೆಯ 89 ರನ್‌ಗಳೊಂದಿಗೆ ಪಂದ್ಯಾವಳಿಯನ್ನು ಪ್ರಾರಂಭಿಸಿದರೆ, ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿದರು ಮತ್ತು ಅದ್ಭುತ ಶತಕವನ್ನು ಸಿಡಿಸಿದರು.
ನಜ್ಮುಲ್ ಹೊಸೈನ್ ಶಾಂಟೊ ಸ್ಥಾನಕ್ಕೆ ಲಿಟ್ಟನ್ ದಾಸ್ ವಾಪಸ್
ನಜ್ಮುಲ್ ಹೊಸೈನ್ ಶಾಂಟೊ ಅವರ ಹೊರಗುಳಿಯುವಿಕೆಯಿಂದ ಆ ಕೊರತೆಯನ್ನು ತುಂಬಲು ಅನಾರೋಗ್ಯದ ಕಾರಣದಿಂದ ಬಾಂಗ್ಲಾದೇಶ ತಂಡದಿಂದ ಹೊರಗುಳಿದಿದ್ದ ಮತ್ತೊಬ್ಬ ಸ್ಟಾರ್ ಬ್ಯಾಟ್ಸ್‌ಮನ್ ಲಿಟ್ಟನ್ ದಾಸ್ ಅವರು ತಂಡವನ್ನು ಕೂಡಿಕೊಳ್ಳಲು ಲಾಹೋರ್‌ಗೆ ಪ್ರಯಾಣಿಸಲಿದ್ದಾರೆ.
ಜ್ವರದಿಂದ ಚೇತರಿಸಿಕೊಂಡ ನಂತರ ಲಿಟ್ಟನ್ ದಾಸ್ ಹಿಂದಿರುಗಿರುವುದು ಬಾಂಗ್ಲಾದೇಶ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಬಲ ತಂದುಕೊಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications