ಭಾರತ ತಂಡದ ಸ್ಪೋಟಕ ಎಡಗೈ ಬ್ಯಾಟರ್ ಶಿಖರ್ ಧವನ್ ನಂತರ ಮತ್ತೊಬ್ಬ ಕ್ರಿಕೆಟಿಗ ನಿವೃತ್ತಿ ಘೋಷಿಸಿದ್ದಾರೆ. ಟೀಮ್ ಇಂಡಿಯಾದ ವೇಗದ ಬೌಲರ್ ಬರೀಂದರ್ ಸ್ರಾನ್ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
ಬರೀಂದರ್ ಅವರಿಗೆ ಬಹಳ ವರ್ಷಗಳಿಂದ ಟೀಮ್ ಇಂಡಿಯಾದಲ್ಲಿ ಆಡಲು ಅವಕಾಶ ಸಿಗದೆ ಹೊರಗುಳಿದಿದ್ದರು. ಅವರು 2016ರಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಚೊಚ್ಚಲ ಟಿ20ಯಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಅವರು ದಾಖಲೆ ಬರೆದಿದ್ದರು.

ತಮ್ಮ ನಿವೃತ್ತಿ ಬಗ್ಗೆ ಮಾಹಿತಿ ನೀಡಿರುವ ಸ್ರಾನ್, 'ನಾನು ಅಧಿಕೃತವಾಗಿ ಕ್ರಿಕೆಟ್‌ನಿಂದ ನಿವೃತ್ತಿಯಾಗುತ್ತಿದ್ದೇನೆ. ಈ ಪ್ರಯಾಣಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. 2009 ರಲ್ಲಿ ಬಾಕ್ಸಿಂಗ್‌ನಿಂದ ನನ್ನ ಬದುಕನ್ನು ಕ್ರಿಕೆಟ್ ಕಡೆ ತಿರುಗಿಸಿದ ನಂತರ, ಕ್ರಿಕೆಟ್ ನನಗೆ ಲೆಕ್ಕವಿಲ್ಲದಷ್ಟು ಮತ್ತು ನಂಬಲಾಗದ ಅನುಭವಗಳನ್ನು ನೀಡಿದೆ. ವೇಗದ ಬೌಲಿಂಗ್ ಶೀಘ್ರದಲ್ಲೇ ನನ್ನ ಅದೃಷ್ಟವನ್ನು ಬದಲಾಯಿಸಿದೆ. ಇದಾದ ಬಳಿಕ ನನಗೆ ಐಪಿಎಲ್ ಫ್ರಾಂಚೈಸಿಗಳನ್ನು ಪ್ರತಿನಿಧಿಸಲು ಬಾಗಿಲು ತೆರೆಯಿತು. ಅಂತಿಮವಾಗಿ 2016 ರಲ್ಲಿ ಭಾರತವನ್ನು ಪ್ರತಿನಿಧಿಸುವ ಅತ್ಯುನ್ನತ ಗೌರವ ಸಿಕ್ಕಿತ್ತು.
ನನ್ನ ಅಂತರರಾಷ್ಟ್ರೀಯ ವೃತ್ತಿಜೀವನವು ಚಿಕ್ಕದಾಗಿದ್ದರೂ, ಅಲ್ಲಿ ಸಿಕ್ಕ ನೆನಪುಗಳು ಯಾವಾಗಲೂ ಸ್ಮರನೀಯವಾಗಿರುತ್ತದೆ. ನನ್ನ ಪ್ರಯಾಣದುದ್ದಕ್ಕೂ ನನಗೆ ಬೆಂಬಲ ನೀಡಿದ ತರಬೇತುದಾರರು ಮತ್ತು ದೇವರಿಗೆ ನಾನು ಯಾವಾಗಲೂ ಕೃತಜ್ಞರಾಗಿರುತ್ತೇನೆ. ನಾನು ಈ ಹೊಸ ಅಧ್ಯಾಯವನ್ನು ಆರಂಭಿಸುತ್ತಿದ್ದಂತೆ, ಕ್ರಿಕೆಟ್ ನನಗೆ ನೀಡಿದ ಅವಕಾಶಗಳಿಗಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
2016ರಲ್ಲಿ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಿದ ಸ್ರಾನ್ ಚೊಚ್ಚಲ ಪಂದ್ಯದಲ್ಲಿ 4 ಓವರ್‌ಗಳಲ್ಲಿ 10 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದ್ದರು. ಇದು ಚೊಚ್ಚಲ ಪಂದ್ಯದಲ್ಲಿ ಭಾರತದ ಯಾವ ಬೌಲರ್ ಕೂಡ ಮಾಡದ ದಾಖಲೆಯಾಗಿದೆ. ಅವರು ಒಂದೇ ವರ್ಷದಲ್ಲಿ ಭಾರತ ಪರ 6 ಏಕದಿನ ಮತ್ತು 2 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 13 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಐಪಿಎಲ್‌ನಲ್ಲಿ ಸ್ರಾನ್ ಪಂಜಾಬ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್, ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಅವರು 24 ಪಂದ್ಯಗಳಲ್ಲಿ 18 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ಆರಂಭದಲ್ಲಿ ಭಿವಾನಿ ಬಾಕ್ಸಿಂಗ್ ಕ್ಲಬ್‌ನಲ್ಲಿ ಬಾಕ್ಸರ್ ಆಗಿದ್ದರು. ಈ ಕ್ಲಬ್ 2008ರ ಬೀಜಿಂಗ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ವಿಜೇಂದರ್ ಸಿಂಗ್ ಅವರನ್ನು ತಯಾರು ಮಾಡಿತ್ತು.