
ಇತ್ತೀಚೆಗಷ್ಟೇ ತನ್ನ ಹೆಣ್ಣು ಮಗುವನ್ನು ಕಳೆದುಕೊಂಡ ನೋವಿನಲ್ಲೂ ಕ್ರಿಕೆಟ್ ಆಡಿ ಸುದ್ದಿಯಾಗಿದ್ದ ಬರೋಡಾ ತಂಡದ ಆಟಗಾರ ವಿಷ್ಣು ಸೋಲಂಕಿಗೆ ಮತ್ತೊಂದು ಆಘಾತ ಉಂಟಾಗಿದೆ. ಮಗುವನ್ನು ಕಳೆದುಕೊಂಡ ನಂತರ ವಿಷ್ಣು ಸೋಲಂಕಿ ಈಗ ತನ್ನ ತಂದೆಯನ್ನು ಕೂಡ ಕಳೆದುಕೊಂಡಿದ್ದಾರೆ. ದೀರ್ಘಕಾಲದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಬರೋಡಾ ಕ್ರಿಕೆಟಿಗನ ತಂದೆ ಅವರ ತಂದೆ ಎರಡು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬರೋಡಾ ಕ್ರಿಕೆಟ್ ತಂಡದ ಮ್ಯಾನೇಜರ್ ಧರ್ಮೇಂದ್ರ ಅರೋಥೆ ಈ ಮಾಹಿತಿ ನೀಡಿದ್ದಾರೆ.
ಇನ್ನು ವಿಷ್ಣು ಸೋಲಂಕಿ ತಂದೆಯ ಅಗಲಿಕೆಯ ಸುದ್ದಿ ಬಂದ ನಂತರವೂ ರಣಜಿಯಲ್ಲಿ ಮುಂದುವರಿಯುವ ನಿರ್ಧಾರವನ್ನು ತೆಗೆದುಕೊಂಡಿದ್ದರು. ಭಾನುವಾರ ಚಂಡೀಗಢ ವಿರುದ್ಧಧ ಪಂದ್ಯದ ಬಳಿಕ ತಮಗೆ ಈ ವಿಚಾರ ಅರಿವಿಗೆ ಬಂತು ಎಂದು ಬರೋಡಾ ತಂಡದ ನಾಯಕ ಕೇದಾರ್ ಧೇವಧರ್ ಈ ಬಗ್ಗೆ ವಿವರಿಸಿದ್ದಾರೆ. "ಆತನ ತಂದೆ ಅಗಲಿದ್ದಾರೆ ಎಂಬ ವಿಚಾರ ನಮಗೆ ತಡವಾಗಿ ತಿಳಿಯಿತು. ಡ್ರೆಸ್ಸಿಂಗ್‌ರೂಮ್‌ನ ಮೂಲೆಯಲ್ಲಿ ಕುಳಿತು ವಿಷ್ಣು ತಂದೆಯ ಅಂತಿಮ ವಿಧಿವಿಧಾನವನ್ನು ವಿಡಿಯೋ ಕಾಲ್ ಮೂಲಕ ನೋಡುತ್ತಿದ್ದರು. ಅದು ನಿಜಕ್ಕೂ ಆತನ ಪಾಳಿಗೆ ಅತ್ಯಂತ ಕಠಿಣ ಕ್ಷಣ. ಆದರೆ ಇಂತಾ ಸಂದರ್ಭದಲ್ಲಿಯೂ ಆತ ತೋರಿದ ಧೈರ್ಯಕ್ಕೆ ನಮ್ಮಲ್ಲಿ ಪದಗಳಿಲ್ಲ" ಎಂದು ಬರೋಡಾ ತಂಡದ ನಾಯಕ ಕೇದಾರ್ ದೇವಧರ್ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಬರೋಡಾ ಕ್ರಿಕೆಟ್ ಅಸೋಸಿಯೇಶನ್‌ನ ಕಾರ್ಯದರ್ಶಿ ಅಜಿತ್ ಲೀಲೆ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದು ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ನಾವು ತಂಡೆದ ಮ್ಯಾನೇಜರ್‌ಗೆ ಮಾಹಿತಿ ನೀಡಿ ಸೋಲಂಕಿ ಅವರಿಗೆ ಮನೆಗೆ ತೆರಳಲು ಅವಕಾಶವನ್ನು ನೀಡಿದ್ದೆವು. ಆದರೆ ಅವರು ತಂಡದಲ್ಲಿಯೇ ಮುಂದುವರಿಯಲು ಬಯಸುವುದಾಗಿ ತಿಳಿಸಿದ್ದಾರೆ. ಇದು ತಂಡದ ಮೇಲೆ ಹಾಗೂ ಆಟದ ಮೇಲೆ ಅವರಿಗಿರುವ ಬದ್ಧತೆಯನ್ನು ವ್ಯಕ್ತಪಡಿಸುತ್ತದೆ" ಎಂದು ಅಜಿತ್ ಲೀಲೆ ಹೇಳಿದ್ದಾರೆ.
"ವಿಷ್ಣು ಸೋಲಂಕಿ ಅವರ ತಂದೆ ಕಳೆದ ಎರಡು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಅವರು ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಎರಡು ತಿಂಗಳಿನಿಂದ ಅವರು ವೈದ್ಯಕೀಯ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದ್ದರು. ಇನ್ನು ವಿಚಾರ ಗೊತ್ತಾದ ಬಳಿಕ ವಿಷ್ಣು ಪ್ರಯತ್ನಪಟ್ಟರೂ ಸಮಯಕ್ಕೆ ಸರಿಯಾಗಿ ಮನೆಗೆ ತಲುಪಲು ಸಾಧ್ಯವಾಗುತ್ತಿರಲಿಲ್ಲ. ಆದರೆ ದುಃಖದ ಹೊರೆಯನ್ನು ಹೊತ್ತುಕೊಂಡು ಕ್ರಿಕೆಟ್ ಆಡಿ ಮಿಂಚಿದ್ದಕ್ಕೆ ಅವರಿಗೆ ಹ್ಯಾಟ್ಸ್ ಆಫ್" ಎಂದು ಬರೋಡಾ ತಮಡದ ನಾಯಕ ಕೇದಾರ್ ದೇವಧರ್ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ವಿಷ್ಣು ಸೋಲಂಕಿ ಅವರ ಕೆಲವೇ ದಿನಗಳ ಹಿಂದೆಯಷ್ಟೇ ತಮ್ಮ ಮಗುವನ್ನು ಕಳೆದುಕೊಂಡಿದ್ದರು. ಮಗು ಜನಿಸಿದ ಕೆಲವೇ ದಿನಗಳಲ್ಲಿ ಮೃತಪಟ್ಟಿತ್ತು. ಮಗುವಿನ ಅಂತ್ಯಕ್ರಿಯೆ ಮುಗಿಸಿದ ವಿಷ್ಣು ನಂತರ ತಂಡವನ್ನು ಸೇರಿಕೊಂಡಿದ್ದರು. ಅಲ್ಲದೆ ತಂಡದ ಪರವಾಗಿ ಅಮೋಘ ಶತಕವನ್ನು ಕೂಡ ಸಿಡಿಸಿದ್ದಾರೆ. ಇದೇ ಅವಧಿಯಲ್ಲಿ ಕ್ರಿಕೆಟಿಗ ಮತ್ತೊಂದು ದೊಡ್ಡ ಆಘಾತವನ್ನು ಎದುರಿಸಬೇಕಾಯಿತು ಎಂಬುದು ದುರಂತ.