ಅನುಭವಿ ಬ್ಯಾಟರ್ ರೋಹಿತ್ ಶರ್ಮಾ ಸಮಯ ಸಿಕ್ಕಾಗಲೆಲ್ಲಾ, ಅಭಿಮಾನಿಗಳನ್ನು ಮನೋರಂಜಿಸುತ್ತಲೇ ಇರುತ್ತಾರೆ. ಅದು ಬ್ಯಾಟಿಂಗ್‌ನಿಂದ ಸಿಕ್ಸರ್‌ಗಳನ್ನು ಬಾರಿಸುವುದರ ಮೂಲಕವೇ ಆಗಲಿ, ಇಲ್ಲ ಆಟೋಗ್ರಾಫ್ ನೀಡಿ ಖುಷಿ ಪಡಿಸುತ್ತಾರೆ. ಶನಿವಾರ ಮುಂಬೈ ಇಂಡಿಯನ್ಸ್ ತಂಡ ಒಂದು ವಿಡಿಯೋ ಹಂಚಿಕೊಂಡಿದೆ. ಈ ವಿಡಿಯೊದಲ್ಲಿ ರೋಹಿತ್ ಶರ್ಮಾ ಡ್ಯಾನ್ಸ್ ಮಾಡುವುದನ್ನು ನೋಡಬಹುದಾಗಿದೆ.
ಮುಂಬೈ ಇಂಡಿಯನ್ಸ್ ಮಾರ್ಚ್ 21 ರಂದು ಅಭಿಮಾನಿಗಳಿಗಾಗಿ ಒಂದು ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆಟಗಾರರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ ಸೇರಿದಂತೆ ಹಲವು ಸ್ಟಾರ್ ಆಟಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ರೋಹಿತ್ ಶರ್ಮಾ ಸಹ ಉಪಸ್ಥಿತರಿದ್ದರು. ಈ ಸಮಾರಂಭಕ್ಕೆ ರೋಹಿತ್ ತಮ್ಮ ಕುಟುಂಬದೊಂದಿಗೆ ಆಗಮಿಸಿದ್ದರು ಮತ್ತು ಅವರ ಮಗಳೊಂದಿಗೆ ಆಟವಾಡುವುದು ಕಂಡು ಬಂದಿತು.

ರೋಹಿತ್ ಶರ್ಮಾ ರ‍್ಯಾಪರ್ ಡಿವೈನ್ ಅವರ ಹಾಡಿಗೆ ನೃತ್ಯ ಮಾಡಿ ಗಮನ ಸೆಳೆದರು. ರ‍್ಯಾಪರ್ ಡಿವೈನ್ ಅವರ ಪ್ರಸಿದ್ಧ ಹಾಡು ಏಕ್ ಖೋಕಾ, ದೋ ಖೋಕಾ ಚಾರ್ ಖೋಕಾ ಹಾಡನ್ನು ಆರಂಭಿಸಿದ ತಕ್ಷಣ, ರೋಹಿತ್ ಶರ್ಮಾ ನೃತ್ಯ ಮಾಡಲು ಆರಂಭಿಸಿದರು. ಆರಂಭದಲ್ಲಿ ತಿಲಕ್ ವರ್ಮಾ ರೋಹಿತ್ ಶರ್ಮಾ ಅವರ ಮಗಳನ್ನು ಹೊತ್ತುಕೊಂಡಿದ್ದರು. ಹಾಡು ಪ್ಲೇ ಆಗುತ್ತಿದ್ದಂತೆ, ರೋಹಿತ್ ಡ್ಯಾನ್ಸ್ ಮಾಡಿದ ವಿಡಿಯೊ ಈಗ ಸಾಮಾಜಿಕ ತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಕಳೆದ ಆವೃತ್ತಿಯ ಐಪಿಎಲ್ ರೋಹಿತ್ ಶರ್ಮಾ ಅವರಿಗೆ ವಿಶೇಷವಾಗಿರಲಿಲ್ಲ. ಕಳೆದ ಆವೃತ್ತಿಯಲ್ಲಿ ಇವರು ಹೆಚ್ಚಾಗಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಾಣಿಸಿಕೊಂಡಿದ್ದರು. ಈ ಬಾರಿ ಮುಂಬೈ ಇಂಡಿಯನ್ಸ್ ಮತ್ತೊಮ್ಮೆ ಟ್ರೋಫಿ ಎತ್ತುವ ಕನಸು ಕಾಣುತ್ತಿದೆ. ಈ ವೇಳೆ ರೋಹಿತ್ ಶರ್ಮಾ ಅವರ ಫಾರ್ಮ್ ತುಂಬಾ ಇಂಪಾರ್ಟೆಂಟ್. ಮುಂಬೈ ಇಂಡಿಯನ್ಸ್ ತನ್ನ ಮೊದಲ ಪಂದ್ಯವನ್ನು ತವರು ಮೈದಾನ ವಾಂಖೆಡೆಯಲ್ಲಿ ಆಡಲಿದೆ. ಮಾರ್ಚ್ 29 ರಂದು ನಡೆಯಲಿರುವ ಪಂದ್ಯದಲ್ಲಿ ಮುಂಬೈ, ಮಾಜಿ ಚಾಂಪಿಯನ್ ಕೆಕೆಆರ್ ತಂಡಕ್ಕೆ ಸವಾಲು ಎಸೆಯಲಿದೆ.
ರೋಹಿತ್ ಶರ್ಮಾ ಈಗಾಗಲೇ ಅಂತಾರಾಷ್ಟ್ರೀಯ ಟಿ20 ಹಾಗೂ ಟೆಸ್ಟ್ ಪಂದ್ಯಗಳಿಗೆ ನಿವೃತ್ತಿ ಹೊಂದಿದ್ದಾರೆ. ಈಗ ಅವರು ಬರೀ ಏಕದಿನ ಫಾರ್ಮೆಟ್‌ನಲ್ಲಿ ಮಾತ್ರ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇನ್ನು ಅವರು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡುತ್ತಿದ್ದು ಭರವಸೆ ಮೂಡಿಸಿದ್ದಾರೆ. ಈಗ ಅವರ ದೃಷ್ಟಿ ಮುಂದಿನ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಮೇಲೆ ನೆಟ್ಟಿದೆ. ರೋಹಿತ್ ಶರ್ಮಾ ಐಪಿಎಲ್‌ನಲ್ಲಿ 2 ತಂಡಗಳ ಪರ ಆಡಿದ್ದಾರೆ. ಈ ವೇಳೆ ಆಡಿದ 272 ಪಂದ್ಯಗಳಲ್ಲಿ 29ರ ಸರಾಸರಿಯಲ್ಲಿ 7046 ರನ್ ಸಿಡಿಸಿದ್ದಾರೆ. ಇದರಲ್ಲಿ 2 ಶತಕ ಹಾಗೂ 47 ಅರ್ಧಶತಕಗಳು ಸೇರಿವೆ. ಕಳೆದ ಆವೃತ್ತಿಯಲ್ಲಿ ಇವರು ಆಡಿದ 15 ಪಂದ್ಯಗಳಲ್ಲಿ 418 ರನ್ ಕಲೆ ಹಾಕಿದ್ದರು. ಇದರಲ್ಲಿ 4 ಅರ್ಧಶತಕಗಳು ಸೇರಿವೆ.