ಭಾರತ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಮಾಜಿ ಆರಂಭಿಕ ಬ್ಯಾಟರ್ ಗೌತಮ್ ಗಂಭೀರ್ ಶೀಘ್ರದಲ್ಲೇ ನೇಮಕಗೊಳ್ಳುವುದು ಖಚಿತವಾಗಿದೆ.
ಪ್ರಸ್ತುತ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಒಪ್ಪಂದ ಸದ್ಯ ನಡೆಯುತ್ತಿರುವ 2024ರ ಐಸಿಸಿ ಟಿ20 ವಿಶ್ವಕಪ್‌ನ ನಂತರ ಮುಕ್ತಾಯಗೊಳ್ಳಲಿದೆ. ಕಳೆದ ಒಂದು ತಿಂಗಳಿನಿಂದ ಗೌತಮ್ ಗಂಭೀರ್ ಹೆಸರು ಭಾರತ ತಂಡದ ಕೋಚ್ ಹುದ್ದೆಗೆ ಲಿಂಕ್ ಆಗಿದೆ.

ದೈನಿಕ್ ಭಾಸ್ಕರ್ ವರದಿ ಪ್ರಕಾರ, ಕೆಲವೇ ದಿನಗಳಲ್ಲಿ ಗೌತಮ್ ಗಂಭೀರ್ ಅವರ ನೇಮಕವನ್ನು ಬಿಸಿಸಿಐ ಅಧಿಕೃತಗೊಳಿಸಲಿದೆ. ಬಿಸಿಸಿಐನಿಂದ ಸಂಪರ್ಕಿಸಿದ ನಂತರ, ಗೌತಮ್ ಗಂಭೀರ್ ಈ ಪ್ರಸ್ತಾಪವನ್ನು ಒಪ್ಪಿಕೊಂಡರು. ಆದರೆ ಕೆಲವು ಬೇಡಿಕೆಗಳನ್ನು ಇಟ್ಟಿದ್ದರು. ಅದನ್ನು ಬಿಸಿಸಿಐ ಒಪ್ಪಿಕೊಂಡಿದೆ ಎನ್ನಲಾಗಿದೆ.
"ಭಾರತ ತಂಡದ ಮುಖ್ಯ ಕೋಚ್ ಆಗಲು ಗೌತಮ್ ಗಂಭೀರ್ ಜತೆ ಮಾತುಕತೆ ನಡೆಸಿದ್ದೇವೆ. ಅವರು ಟಿ20 ವಿಶ್ವಕಪ್ ನಂತರ ನಿರ್ಗಮಿಸುತ್ತಿರುವ ರಾಹುಲ್ ದ್ರಾವಿಡ್ ಅವರನ್ನು ಬದಲಾಯಿಸಲಿದ್ದಾರೆ," ಎಂದು ಬಿಸಿಸಿಐ ಮೂಲಗಳು ದೈನಿಕ್ ಭಾಸ್ಕರ್‌ಗೆ ತಿಳಿಸಿವೆ.
ಸಹಾಯಕ ಸಿಬ್ಬಂದಿಯನ್ನು ಬದಲಾಯಿಸಲು ನಿರ್ಧರಿಸಿದರೆ ಮುಖ್ಯ ಕೋಚ್ ಹುದ್ದೆಯನ್ನು ಒಪ್ಪಿಕೊಳ್ಳುವುದಾಗಿ ಮಾಜಿ ಎಡಗೈ ಬ್ಯಾಟರ್ ಗೌತಮ್ ಗಂಭೀರ್ ಅವರು ಬಿಸಿಸಿಐಗೆ ತಿಳಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಗೌತಮ್ ಗಂಭೀರ್ ಅವರ ಬೇಡಿಕೆಯನ್ನು ಅಂಗೀಕರಿಸಲಾಗಿದ್ದು, ಈ ತಿಂಗಳ ಕೊನೆಯಲ್ಲಿ ಅವರನ್ನು ಭಾರತ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡುವ ಕುರಿತು ಬಿಸಿಸಿಐ ಅಧಿಕೃತ ಘೋಷಣೆ ಮಾಡಲಿದೆ.
ಈ ಹಿಂದೆ ರವಿಶಾಸ್ತ್ರಿ ಮುಖ್ಯ ಕೋಚ್ ಆಗಿದ್ದಾಗ ಸಂಜಯ್ ಬಂಗಾರ್ ಬದಲಿಗೆ ವಿಕ್ರಮ್ ರಾಥೋರ್ ಅವರನ್ನು ಬ್ಯಾಟಿಂಗ್ ಕೋಚ್ ಆಗಿ ನೇಮಿಸಿಕೊಳ್ಳಲಾಗಿತ್ತು.

ರಾಹುಲ್ ದ್ರಾವಿಡ್ ಅವರು ಮುಖ್ಯ ಕೋಚ್ ಆದ ನಂತರವೂ ವಿಕ್ರಮ್ ರಾಥೋರ್ ಅವರು ಸಹಾಯಕ ಸಿಬ್ಬಂದಿಯಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದರು. ಪ್ರಸ್ತುತ, ಪಾರಸ್ ಮಾಂಬ್ರೆ ಮತ್ತು ಟಿ ದಿಲೀಪ್ ಕ್ರಮವಾಗಿ ಬೌಲಿಂಗ್ ಮತ್ತು ಫೀಲ್ಡಿಂಗ್ ಕೋಚ್ ಆಗಿದ್ದಾರೆ.
ಗೌತಮ್ ಗಂಭೀರ್ ಅವರು ಸಹಾಯಕ ಸಿಬ್ಬಂದಿ ಮಾತ್ರವಲ್ಲದೆ, ಭಾರತ ತಂಡದಲ್ಲಿಯೂ ಬದಲಾವಣೆಗಳನ್ನು ಮಾಡಲಿದ್ದಾರೆ ಎಂದು ವರದಿ ಬಹಿರಂಗಪಡಿಸಿದೆ.
ಮಾಜಿ ಕ್ರಿಕೆಟಿಗ ಗಂಭೀರ್ ಅವರ ಮಾರ್ಗದರ್ಶನದಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಐಪಿಎಲ್ 2024ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಕೆಕೆಆರ್ ತಂಡದಲ್ಲಿ ಗೌತಮ್ ಗಂಭೀರ್ ಅವರ ನಾಯಕತ್ವವು ವ್ಯಾಪಕವಾಗಿ ಪ್ರಶಂಸಿಸಲ್ಪಟ್ಟಿದೆ. ಇದು ಉನ್ನತ ಕೋಚಿಂಗ್ ಅಭ್ಯರ್ಥಿಯಾಗಿ ಅವರ ಹೆಚ್ಚುತ್ತಿರುವ ಪ್ರೊಫೈಲ್‌ಗೆ ಕೊಡುಗೆ ನೀಡಿದೆ.
ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ, "ರಾಷ್ಟ್ರೀಯ ತಂಡಕ್ಕೆ ಕೋಚ್ ಆಗುವುದಕ್ಕಿಂತ ದೊಡ್ಡ ಗೌರವ ಇನ್ನೊಂದಿಲ್ಲ. ನಾನು ಭಾರತ ತಂಡಕ್ಕೆ ಕೋಚ್ ಆಗಲು ಇಷ್ಟಪಡುತ್ತೇನೆ. ನೀವು ಜಗತ್ತಿನಾದ್ಯಂತ 140 ಕೋಟಿ ಭಾರತೀಯರನ್ನು ಪ್ರತಿನಿಧಿಸುವುದು ಗೌರವ ವಿಷಯ,"ಎಂದು 42 ವರ್ಷದ ಗೌತಮ್ ಗಂಭೀರ್ ಹೇಳಿದ್ದಾರೆ.
ಗೌತಮ್ ಗಂಭೀರ್ ಅವರು 2007ರಲ್ಲಿ ಟಿ20 ವಿಶ್ವಕಪ್ ವಿಜೇತ ಭಾರತದ ತಂಡ ಮತ್ತು 2011ರ ಏಕದಿನ ವಿಶ್ವಕಪ್ ತಂಡದ ಭಾಗವಾಗಿದ್ದರು.