ರಣಜಿ ಟ್ರೋಫಿ: ಮತ್ತೆ ಎಲೈಟ್-ಪ್ಲೇಟ್ ಪದ್ಧತಿಗೆ ಬಿಸಿಸಿಐ ಒಲವು?
ಬೆಂಗಳೂರು, ಜೂನ್ 27: ಪ್ರಸಕ್ತ ಸಾಲಿನ ರಣಜಿ ಟ್ರೋಫಿ ವೇಳಾಪಟ್ಟಿಯಲ್ಲಿ ರಚನಾತ್ಮಕ ಬದಲಾವಣೆ ಮಾಡಲು ಬಿಸಿಸಿಐ ಒಲವು ತೋರಿಸಿದೆ.
ಶುಕ್ರವಾರ ನಡೆದ ಬಿಸಿಸಿಐನ ವಿಶೇಷ ಸಾಮಾನ್ಯ ಸಭೆಯಲ್ಲಿ 2018-19ನೇ ಸಾಲಿನ ಪಂದ್ಯಗಳಲ್ಲಿ ಬದಲಾವಣೆ ತರಲು ನಿರ್ಧರಿಸಲಾಗಿದೆ.
ಈ ಹಿಂದೆ ಇದ್ದ ಎಲೈಟ್ ಮತ್ತು ಪ್ಲೇಟ್ ಗ್ರೂಪ್ ಪದ್ಧತಿಯನ್ನು ಮರಳಿ ತರಲು ಅದು ಚಿಂತನೆ ನಡೆಸಿದೆ.
ಈ ಬಾರಿ ಬಿಹಾರ ಮತ್ತು ಈಶಾನ್ಯ ರಾಜ್ಯಗಳ ತಂಡಗಳು ರಣಜಿಯಲ್ಲಿ ಆಡಲು ಅರ್ಹತೆ ಗಿಟ್ಟಿಸಿಕೊಂಡಿರುವುದರಿಂದ ಪ್ಲೇಟ್ ಗ್ರೂಪ್ಅನ್ನು ಅಳವಡಿಸಲಾಗುತ್ತಿದೆ.
ಈಗ ಅಸ್ತಿತ್ವದಲ್ಲಿರುವ ಎಲ್ಲ ರಣಜಿ ತಂಡಗಳು ಎಲೈಟ್ ಗ್ರೂಪ್‌ನಲ್ಲಿ ಇರಲಿವೆ. ಹೊಸ ತಂಡಗಳಿಗಾಗಿ ಪ್ಲೇಟ್ ಗ್ರೂಪ್‌ಅನ್ನು ರಚಿಸಲಾಗುವುದು ಎಂದು ದೆಹಲಿಯಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ.

ಎಲೈಟ್ ಮತ್ತು ಪ್ಲೇಟ್ ಗ್ರೂಪ್
ಎಲೈಟ್ ಗ್ರೂಪ್‌ನ ಕೊನೆಯ ಎರಡು ತಂಡಗಳು ಮತ್ತು ಪ್ಲೇಟ್ ಗ್ರೂಪ್‌ನ ಮೊದಲ ಎರಡು ತಂಡಗಳಿಗೆ ಹಿಂಬಡ್ತಿ ಹಾಗೂ ಬಡ್ತಿ ನೀಡುವ ಕುರಿತು ಸಹ ಚರ್ಚಿಸಲಾಗಿದೆ. ಈ ತಂಡಗಳಿಗೆ ಸೂಪರ್‌ಲೀಗ್ ಪಂದ್ಯಗಳನ್ನು ಆಡಿಸಲಾಗುತ್ತದೆ. ಇದರಲ್ಲಿ ಮೊದಲ ಎರಡು ತಂಡಗಳು ಎಲೈಟ್ ಗ್ರೂಪ್‌ನಲ್ಲಿ ಆಡಿದರೆ, ಕೊನೆಯ ಎರಡು ತಂಡಗಳು ಪ್ಲೇಟ್ ಗ್ರೂಪ್‌ನಲ್ಲಿ ಆಡಲಿವೆ.
ಈ ಯೋಜನೆ ಯಾವ ರೀತಿ ಕಾರ್ಯಾನುಷ್ಠಾನಕ್ಕೆ ಬರುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಅಲ್ಲದೆ, ಇದಕ್ಕೆ ಆಡಳಿತ ಸಮಿತಿಯ ಅನುಮೋದನೆ ದೊರಕಬೇಕಿರುವುದರಿಂದ ಈ ಸಾಲಿನಿಂದ ಅದು ಜಾರಿಯಾಗುವುದು ಅನುಮಾನವಾಗಿದೆ.
ಛತ್ತೀಸಗಡದ ಸೇರ್ಪಡೆಯೊಂದಿಗೆ ಕಳೆದ ಎರಡು ಆವೃತ್ತಿಗಳಿಂದ ರಣಜಿಯಲ್ಲಿ 28 ತಂಡಗಳು ಆಡುತ್ತಿವೆ.

ಆಟಗಾರರ ಮೇಲೆ ಒತ್ತಡ ಹೆಚ್ಚಳ
2016-17ರವರೆಗೂ ಎಲೈಟ್ ಪ್ಲೇಟ್ ಪದ್ಧತಿ ಚಾಲ್ತಿಯಲ್ಲಿತ್ತು. ಮೂರು ಗುಂಪುಗಳಾಗಿ ತಂಡಗಳನ್ನು ವಿಂಗಡಿಸಲಾಗಿತ್ತು. ಎ ಮತ್ತು ಬಿ ಗುಂಪಿನಲ್ಲಿ ಎಲೈಟ್ ತಂಡಗಳು ಇದ್ದರೆ, ಸಿ ಗುಂಪಿನಲ್ಲಿ ಪ್ಲೇಟ್ ಗುಂಪಿನ ತಂಡಗಳು ಇದ್ದವು.
ಬಿಸಿಸಿಐ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡಿಸಲು ಪ್ರಯತ್ನಿಸಿದ್ದರಿಂದ ಆಟಗಾರರ ಮೇಲೆ ಪ್ರಯಾಣದ ಒತ್ತಡ ಹೆಚ್ಚುತ್ತಿತ್ತು.
ಪ್ರಯಾಣ ಮತ್ತು ಪಂದ್ಯದ ನಡುವೆ ಒಂದು ದಿನದ ಬಿಡುವು ಮಾತ್ರ ಸಿಗುತ್ತಿತ್ತು. 2017-18ನೇ ಆವೃತ್ತಿಯಲ್ಲಿ ಎಲೈಟ್-ಪ್ಲೇಟ್ ಪದ್ಧತಿ ಹಾಗೂ ತಟಸ್ಥ ಸ್ಥಳದ ಪ್ರಯೋಗವನ್ನು ಕೈಬಿಡಲಾಗಿತ್ತು. ಏಳು ತಂಡಗಳಿರುವ ನಾಲ್ಕು ಗ್ರೂಪ್‌ಗಳನ್ನು ಮಾಡಲಾಗಿತ್ತು.

ರಾಜ್ಯ ಸಂಸ್ಥೆಗಳ ಮೇಲೂ ಕಣ್ಣು
ರಣಜಿ ಟ್ರೋಫಿಯಲ್ಲಿನ ರಚನಾತ್ಮಕ ಬದಲಾವಣೆ ಹೊರತಾಗಿ ಸಾಮಾನ್ಯ ಸಭೆಯಲ್ಲಿ, ರಾಜ್ಯ ಮಟ್ಟದ ಕ್ರಿಕೆಟ್ ಸಂಸ್ಥೆಗಳು ನಡೆಸುವ ಟಿ20 ಪಂದ್ಯಾವಳಿಗಳನ್ನು ಸಹ ಪರಿಗಣಿಸಲು ಮತ್ತು ಅವುಗಳ ಕುರಿತು ನಿರ್ಧಾರ ಕೈಗೊಳ್ಳಲು ನಿರ್ಣಯ ಅಂಗೀಕರಿಸಲಾಗಿದೆ.
ಐಪಿಎಲ್ ಒಪ್ಪಂದಗಳನ್ನು ಹೊಂದಿರದ, ಹೊರ ರಾಜ್ಯಗಳ ಆಟಗಾರರು ಕರ್ನಾಟಕ ಪ್ರೀಮಿಯರ್ ಲೀಗ್, ತಮಿಳುನಾಡು ಪ್ರೀಮಿಯರ್ ಲೀಗ್, ಮುಂಬೈ ಕ್ರಿಕೆಟ್ ಲೀಗ್‌ನಂತಹ ಸ್ಥಳೀಯ ಲೀಗ್‌ಗಳಲ್ಲಿ ಆಡಬಹುದೇ ಎಂಬ ಬಗ್ಗೆ ನಿರ್ಧರಿಸಬೇಕಿದೆ.

ಗಂಗೂಲಿ ನೇತೃತ್ವದಲ್ಲಿ ಸಮಿತಿ
ಬಿಸಿಸಿಐ ತಾಂತ್ರಿಕ ಸಮಿತಿಯ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಬಿಸಿಸಿಐನ ಕಚೇರಿ ಅಧಿಕಾರಿಗಳನ್ನು ಒಳಗೊಂಡ ಸಮಿತಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಿದೆ.
ಐಪಿಎಲ್‌ನಲ್ಲಿ 'ಅಲ್ಪ ಕಾಲ' ಆಡಿರುವ ಆಟಗಾರರೂ ಈ ಲೀಗ್‌ಗಳಲ್ಲಿ ಆಡಬಹುದೇ ಎಂಬ ಕುರಿತು ಸಹ ನಿರ್ಣಯ ತೆಗೆದುಕೊಳ್ಳುವುದಾಗಿ ಹೇಳಲಾಗಿದೆ. ಆದರೆ, 'ಅಲ್ಪ ಕಾಲ' ಎನ್ನುವುದು ಎಷ್ಟು ಪಂದ್ಯ ಅಥವಾ ಎಷ್ಟು ಅವಧಿ ಎಂಬ ಬಗ್ಗೆ ನಿರ್ದಿಷ್ಟವಾಗಿ ಹೇಳಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications