ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಗುರುವಾರ ಬಾಂಗ್ಲಾದೇಶ ವಿರುದ್ಧದ ಪಂದ್ಯದೊಂದಿಗೆ 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇತ್ತೀಚೆಗೆ ಹೊರಡಿಸಿದ್ದ 10 ನಿಯಮಗಳಲ್ಲಿ ಒಂದನ್ನು ಸಡಿಲಿಕೆ ಮಾಡಿದೆ. ಇದು ಟೀಮ್ ಇಂಡಿಯಾ ಆಟಗಾರರಿಗೆ ಸಂತರ ತರಿಸಿದೆ. ವರದಿಗಳ ಪ್ರಕಾರ, ಬಿಸಿಸಿಐ ಕ್ರಿಕೆಟಿಗರ ಕುಟುಂಬದವರು ದುಬೈನಲ್ಲಿ ಯಾವುದಾದರೂ ಒಂದು ಪಂದ್ಯವನ್ನು ವೀಕ್ಷಿಸಲು ಅವಕಾಶ ನೀಡಲಿದೆ. ಇದಕ್ಕಾಗಿ ಪ್ರತಿಯೊಬ್ಬ ಕ್ರಿಕೆಟಿಗನು ಬಿಸಿಸಿಐ ಅಂತಿಮ ಅನುಮೋದನೆಯನ್ನು ಪಡೆಯಬೇಕಾಗುತ್ತದೆ.
ಬಿಸಿಸಿಐ ಕ್ರಿಕೆಟಿಗರಿಗೆ ತಮ್ಮ ಪತ್ನಿಯರು ಮತ್ತು ಕುಟುಂಬಗಳೊಂದಿಗೆ ಇರಲು ಅವಕಾಶ ನೀಡಿರುವುದು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ. ಆದರೆ ಇದಕ್ಕಾಗಿ ಬಿಸಿಸಿಐ ಕಟ್ಟುನಿಟ್ಟಿನ ಷರತ್ತು ವಿಧಿಸಿದೆ.

ಚಾಂಪಿಯನ್ಸ್ ಟ್ರೋಫಿಯ ಒಂದು ಪಂದ್ಯಕ್ಕೆ ಕ್ರಿಕೆಟಿಗರ ಪತ್ನಿಯರು ಅಥವಾ ಇತರ ಕುಟುಂಬ ಸದಸ್ಯರಿಗೆ ಅವಕಾಶ ನೀಡಲು ಬಿಸಿಸಿಐ ಈಗಾಗಲೇ ನಿರ್ಧರಿಸಿದೆ. ಈ ವಿಷಯದಲ್ಲಿ ಕ್ರಿಕೆಟಿಗರು ಮಂಡಳಿಯಿಂದ ಅಂತಿಮ ಅನುಮತಿ ಪಡೆಯಬೇಕಾಗುತ್ತದೆ. ಕ್ರಿಕೆಟಿಗರು ತಮ್ಮ ಪತ್ನಿಯರು ಮತ್ತು ಕುಟುಂಬಗಳು ಯಾವ ಪಂದ್ಯಗಳಲ್ಲಿ ಭಾಗವಹಿಸಲು ಬಯಸುತ್ತಾರೆ ಎಂಬುದರ ಕುರಿತು ಬಿಸಿಸಿಐ ತಿಳಿಸಬೇಕು. ಆಟಗಾರರ ಕೋರಿಕೆಯ ಮೇರೆಗೆ ಅನುಮತಿ ನೀಡಲಾಗುವುದು.
ಬಿಸಿಸಿಐಯ ಹೊಸ ನಿಯಮಗಳ ಪ್ರಕಾರ, ಕ್ರಿಕೆಟಿಗರು ತಮ್ಮ ಹೆಂಡತಿ ಮತ್ತು ಮಕ್ಕಳೊಂದಿಗೆ (18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು) 45 ದಿನಗಳಿಗಿಂತ ಕಡಿಮೆ ಅವಧಿಯ ಪ್ರವಾಸಗಳಿಗೆ ಹೋಗಲು ಅವಕಾಶವಿರುವುದಿಲ್ಲ. ಆ ಷರತ್ತುಗಳಿಗೆ ಅನುಸಾರವಾಗಿ, ಬಿಸಿಸಿಐ ಆರಂಭದಲ್ಲಿ ಕ್ರಿಕೆಟಿಗರ ಪತ್ನಿಯರು, ಕುಟುಂಬ ಸದಸ್ಯರು ಮತ್ತು ಕೋಚಿಂಗ್ ಸಿಬ್ಬಂದಿಗೆ ಚಾಂಪಿಯನ್ಸ್ ಟ್ರೋಫಿಗಾಗಿ ದುಬೈಗೆ ಪ್ರಯಾಣಿಸಲು ಅವಕಾಶ ನೀಡಿರಲಿಲ್ಲ. ಇದು ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಕೊನೆಗೊಳ್ಳಲಿದೆ.
ಈ ನಿರ್ಧಾರದ ಬಗ್ಗೆ ಕ್ರಿಕೆಟಿಗರು ಮತ್ತು ಕೋಚಿಂಗ್ ಸಿಬ್ಬಂದಿಯಲ್ಲಿ ಭಾರಿ ಅಸಮಾಧಾನ ವ್ಯಕ್ತವಾಗಿತ್ತು. ಈ ಅಸಮಾಧಾನ ಬಿಸಿಸಿಐ ಕಿವಿಗಳನ್ನು ಎಷ್ಟರ ಮಟ್ಟಿಗೆ ತಲುಪಿತ್ತೋ ತಿಳಿದಿಲ್ಲ. ಆದರೆ ಚಾಂಪಿಯನ್ಸ್ ಟ್ರೋಫಿ ಮುನ್ನ ಬಿಸಿಸಿಐ ಟೀಮ್ ಇಂಡಿಯಾ ಆಟಗಾರರಿಗೆ ಗುಡ್‌ನ್ಯೂಸ್ ಕೊಟ್ಟಿದೆ.
ಭಾರತ ತಂಡವು ದುಬೈನಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ತನ್ನ ಪಂದ್ಯಗಳನ್ನು ಆಡಲಿದೆ. ಫೆಬ್ರವರಿ 20 ರಂದು ಬಾಂಗ್ಲಾದೇಶ ವಿರುದ್ಧದ ಪಂದ್ಯದೊಂದಿಗೆ ಭಾರತದ ಅಭಿಯಾನ ಆರಂಭವಾಗಲಿದೆ. ಭಾರತ ತಂಡವು ಫೆಬ್ರವರಿ 23 ಮತ್ತು ಮಾರ್ಚ್ 2 ರಂದು ಕ್ರಮವಾಗಿ ತನ್ನ ಉಳಿದೆರಡು ಪಂದ್ಯಗಳನ್ನು ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಆಡಲಿದೆ.