ವೆಂಕಟೇಶ್ ಪ್ರಸಾದ್‌ರನ್ನು ತಿರಸ್ಕರಿಸಿದ ಬಿಸಿಸಿಐ ಮತ್ತು ಸಿಎಸಿ: ಚೇತನ್ ಶರ್ಮಾ ಆಯ್ಕೆ ಸಮಿತಿಯ ಹೊಸ ಅಧ್ಯಕ್ಷ

ಆಯ್ಕೆದಾರರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದ, ಕನ್ನಡಿಗ ವೆಂಕಟೇಶ್ ಪ್ರಸಾದ್‌ರನ್ನು ಬಿಸಿಸಿಐ ಮತ್ತು ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ತಿರಸ್ಕರಿಸಿದೆ. ಭಾರತ ತಂಡದ ಮಾಜಿ ವೇಗಿ ದಕ್ಷಿಣ ವಲಯದಿಂದ ಅರ್ಜಿ ಸಲ್ಲಿಸಿದ್ದರು.
ವೆಂಕಟೇಶ್ ಪ್ರಸಾದ್ ಆಯ್ಕೆಯಾಗುವುದು ಖಚಿತ ಎಂದು ಭಾವಿಸಲಾಗಿತ್ತು, ಆದರೆ ಅಂತಿಮ ಕ್ಷಣದಲ್ಲಿ ಈ ಅಚ್ಚರಿಯ ನಿರ್ಧಾರ ಹೊರಬಿದ್ದಿದೆ. ವಜಾಗೊಂಡಿದ್ದ ಚೇತನ್ ಶರ್ಮಾ ಮತ್ತೆ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇನ್ನೂ ಎರಡು ವರ್ಷಗಳ ಕಾಲ ಚೇತನ್ ಶರ್ಮಾ ಅಧಿಕಾರದಲ್ಲಿ ಮುಂದುವರೆಯಲಿದ್ದಾರೆ. ಇದೇ ವಾರ ಹೊಸ ಆಯ್ಕೆಗಾರರ ಹೆಸರನ್ನು ಪ್ರಕಟಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ.
ಆಯ್ಕೆ ಸಮಿತಿಗಾಗಿ ಬಿಸಿಸಿಐ ಮತ್ತು ಸಿಎಸಿ ಅರ್ಜಿದಾರ ಹೆಸರನ್ನು ಶಾರ್ಟ್‌ಲಿಸ್ಟ್ ಮಾಡಿದೆ. ಚೇತನ್ ಶರ್ಮಾ, ಹರ್ವಿಂದರ್ ಸಿಂಗ್, ಅಮಯ್ ಖುರಾಸಿಯಾ, ಅಜಯ್ ರಾತ್ರಾ, ಎಸ್ ಎಸ್ ದಾಸ್, ಶ್ರೀಧರನ್ ಶರತ್, ಕಾನರ್ ವಿಲಿಯಮ್ಸ್, ಸಲೀಲ್ ಅಂಕೋಲಾ ಹೆಸರನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ.
"ವೆಂಕಟೇಶ್ ಪ್ರಸಾದ್ ಹೆಸರು ಶಾರ್ಟ್‌ಲಿಸ್ಟ್‌ನಲ್ಲಿ ಇಲ್ಲ,ಇದನ್ನು ನಿರ್ಧರಿಸುವ ಜವಾಬ್ದಾರಿ ಸಂಪೂರ್ಣವಾಗಿ ಸಿಎಸಿಗೆ ಬಿಟ್ಟದ್ದು," ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಇನ್ಸೈಡ್‌ಸ್ಪೋರ್ಟ್ಸ್ ವರದಿ ಮಾಡಿದೆ.

200 ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದ್ದ ಬಿಸಿಸಿಐ
ಖಾಲಿ ಇರುವ 5 ಹುದ್ದೆಗಳಿಗೆ ಬಿಸಿಸಿಐ 200ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿತ್ತು. 2022ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಸೆಮಿಫೈನಲ್‌ನಲ್ಲಿ ಸೋತ ಬಳಿಕ ಬಿಸಿಸಿಐ ಚೇತನ್ ಶರ್ಮಾ ಒಳಗೊಂಡ 4 ಸದಸ್ಯರ ಆಯ್ಕೆ ಸಮಿತಿಯನ್ನು ವಜಾಗೊಳಿಸಿತ್ತು. ಹೊಸಬರನ್ನು ಆಯ್ಕೆ ಮಾಡುವ ಉತ್ಸಾಹ ತೋರಿದ್ದ ಬಿಸಿಸಿಐ ಯು-ಟರ್ನ್ ತೆಗೆದುಕೊಂಡಿದ್ದು, ಚೇತನ್ ಶರ್ಮಾ ಮತ್ತು ಹರ್ವಿಂದರ್ ಸಿಂಗ್‌ಗೆ ಮತ್ತೊಂದು ಅವಕಾಶ ನೀಡಲು ನಿರ್ಧರಿಸಿದೆ.
ಚೇತನ್ ಶರ್ಮಾ ಮತ್ತು ಹರ್ವಿಂದರ್ ಸಿಂಗ್ ಮತ್ತೊಂದು ಅವಧಿಗೆ ಮುಂದುವರೆಯುವುದರಿಂದ, ಇನ್ನೂ ಮೂವರು ಮಾತ್ರ ಹೊಸ ಆಯ್ಕೆಗಾರರಾಗಿ ನೇಮಕಗೊಳ್ಳಲಿದ್ದಾರೆ. ಶಾರ್ಟ್‌ಲಿಸ್ಟ್ ಮಾಡಿರುವ ಅಭ್ಯರ್ಥಿಗಳಲ್ಲಿ ಅಜಯ್ ರಾತ್ರಾ 6 ಟೆಸ್ಟ್, 12 ಏಕದಿನ ಮತ್ತು 99 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, ಆಯ್ಕೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಮುಖ್ಯವಾಗಿ ಅವರು ಹರಿಯಾಣ ಪರವಾಗಿ 17 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. 41 ವರ್ಷದ ಅಜಯ್ ರಾತ್ರಾ ಆಯ್ಕೆಯಾದರೆ, ಅವರು ಆಯ್ಕೆ ಸಮಿತಿಯ ಕಿರಿಯ ಸದಸ್ಯ ಎನಿಸಿಕೊಳ್ಳಲಿದ್ದಾರೆ.
"2ನೇ ಅವಕಾಶ ನೀಡುವ ಬಗ್ಗೆಯಲ್ಲ, ಯಾರು ಅರ್ಹರು ಎನ್ನುವುದು ಮುಖ್ಯವಾಗುತ್ತದೆ. ಸಿಎಸಿ ತನ್ನ ಶಿಫಾರಸ್ಸುಗಳನ್ನು ಸಲ್ಲಿಸಿದೆ. ಬಿಸಿಸಿಐ ಅದನ್ನು ಪರಿಶೀಲನೆ ಮಾಡಲಿದ್ದು, ಈ ವಾರ ಅಂತಿಮವಾಗಿ ಘೋಷಣೆ ಮಾಡಲಿದೆ. ಚೇತನ್ ಶರ್ಮಾ ಅನುಭವಿಯಾಗಿದ್ದಾರೆ, 2023ರ ಏಕದಿನ ವಿಶ್ವಕಪ್‌ಗಾಗಿ ತಯಾರಿ ಬಗ್ಗೆ ಅವರಿಗೆ ಹೆಚ್ಚಿನ ತಿಳುವಳಿಕೆ ಇರುವುದರಿಂದ, ಅವರನ್ನು ಮುಂದುವರೆಸುವುದು ನ್ಯಾಯೋಚಿತವಾಗಿದೆ" ಎಂದು ಬಿಸಿಸಿಐ ಅಧಿಕಾರಿ ಚೇತನ್ ಶರ್ಮಾ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ತಮಿಳುನಾಡಿನ ಶ್ರೀಧರನ್ ಶರತ್ ಜೂನಿಯರ್ ಆಯ್ಕೆ ಸಮಿತಿಯಲ್ಲಿದ್ದಾರೆ. ಆದರೂ ಹಿರಿಯ ಆಯ್ಕೆ ಸಮಿತಿಗೆ ಅರ್ಜಿ ಸಲ್ಲಿಸುವಂತೆ ಬಿಸಿಸಿಐ ಕೇಳಿದೆ. ಕಿರಿಯ ಆಟಗಾರರ ಬಗ್ಗೆ ಹೆಚ್ಚಿನ ಅನುಭವ ಇರುವ ಕಾರಣ ಅವರನ್ನು ಪರಿಗಣಿಸುವ ಸಾಧ್ಯತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications