
ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ ನ್ಯೂಜಿಲೆಂಡ್ ಎ ತಂಡದ ವಿರುದ್ಧ ನಾಲ್ಕು ದಿನಗಳ ಅನಧಿಕೃತ ಟೆಸ್ಟ್ ಸರಣಿ ನಡೆಯಲಿದ್ದು ಈ ಸರಣಿಗೆ ಭಾರತ ಎ ತಂಡವನ್ನು ಬುಧವಾರ ಪ್ರಕಟಿಸಲಾಗಿದೆ. ಐಪಿಎಲ್‌ನಲ್ಲಿ ಮಿಂಚಿರುವ ಯುವ ಪ್ರತಿಭೆಗಳಾದ ಉಮ್ರಾನ್ ಮಲಿಕ್, ಯಶ್ ದಯಾಳ್ ಮತ್ತು ರಜತ್ ಪಾಟಿದಾರ್ ಈ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿರುವ ಪ್ರಮುಖ ಆಟಗಾರರಾಗಿದ್ದಾರೆ. ಈ ಸರಣಿಯಲ್ಲಿ ನ್ಯೂಜಿಲೆಂಡ್ ಎ ಹಾಗೂ ಭಾರತ ಎ ತಂಡಗಳು ನಾಲ್ಕು ದಿನಗಳ ಮೂರು ಟೆಸ್ಟ್ ಪಂದ್ಯದಲ್ಲಿ ಆಡಲಿದೆ. ಬಳಿಕ ಮೂರು ಲಿಸ್ಟ್ ಎ ಪಂದ್ಯಗಳಲ್ಲಿಯೂ ಈ ತಂಡಗಳು ಮುಖಾಮುಖಿಯಾಗಲಿದೆ.
ಈ ಸರಣಿಗೆ ಆಯ್ಕೆಯಾಗಿರುವ ತಂಡದಲ್ಲಿ ಭವಿಷ್ಯದ ತಾರೆಗಳೆನಿಸಿದ ಆಟಗಾರರು ಅವಕಾಶವನ್ನು ಪಡೆದುಕೊಂಡಿದ್ದಾರೆ. ಹೈದರಾಬಾದ್‌ನ ತಿಲಕ್ ವರ್ಮಾ, ಜಮ್ಮು ಮತ್ತು ಕಾಶ್ಮೀರದ ಉಮ್ರಾನ್ ಮಲಿಕ್ ಸೇರಿ 1 ಆಟಗಾರರ ತಂಡವನ್ನು ಪ್ರಕಟಿಸಲಾಗಿದೆ.
ಬಿಸಿಸಿಐ ಮಾಧ್ಯಮ ಪ್ರಕಟಣೆಯನ್ನು ಹೊರಡಿಸಿದ್ದು ತಂಡದ ಘೋಷಣೆ ಬಗ್ಗೆ ಮಾಹಿತಿ ನೀಡಿದೆ. "ಆಲ್ ಇಂಡಿಯಾ ಸೀನಿಯರ್ ಸೆಲೆಕ್ಷನ್ ಕಮಿಟಿ ಮುಂದಿನ ತಿಂಗಳು ಆರಂಭವಾಗಲಿರುವ ನಾಲ್ಕು ದಿನಗಳ ಟೆಸ್ಟ್ ಸರಣಿಗೆ ತಂಡವನ್ನು ಆಯ್ಕೆ ಮಾಡಿದೆ. ನ್ಯೂಜಿಲೆಂಡ್ ತಂಡ ಭಾರತಕ್ಕೆ ಪ್ರವಾಸವನ್ನು ಕೈಗೊಳ್ಳಲಿದ್ದು ಮೂರು ನಾಲ್ಕು ದಿನಗಳ ಪಂದ್ಯ ಹಾಗೂ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲಿದೆ. ರೆಡ್ ಬಾಲ್ ಸರಣಿ ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ನಡೆಯಲಿದೆ. ವೈಟ್ ಬಾಲ್ ಪಂದ್ಯಗಳು ಚೆನ್ನೈನಲ್ಲಿ ನಡೆಯಲಿದ್ದು ಕೆಲ ಸಮಯಗಳ ಬಳಿಕ ತಂಡವನ್ನು ಪ್ರಕಟಿಸಲಾಗುತ್ತದೆ" ಎಂದು ಮಾಹಿತಿ ನೀಡಿದೆ.
ಸೆಪ್ಟೆಂಬರ್‌ನಲ್ಲಿ ಭಾರತ ಎ ತಂಡ ಫುಲ್ ಬ್ಯುಸಿ: ಮೊದಲ ಪಂದ್ಯ ಸೆಪ್ಟೆಂಬರ್ 1 ರಿಂದ ಸೆಪ್ಟೆಂಬರ್ 4ರವರೆಗೆ ನಡೆಯಲಿದ್ದು ಎರಡನೇ ಪಂದ್ಯ ಸೆಪ್ಟೆಂಬರ್ 8 ರಿಂದ ಸೆಪ್ಟೆಂಬರ್ 11 ರವರೆಗೆ ಆಯೋಜಿಸಲಾಗಿದೆ. ಮೂರನೇ ಮತ್ತು ಅಂತಿಮ ಪಂದ್ಯ ಸೆಪ್ಟೆಂಬರ್ 15 ರಿಂದ ಸೆಪ್ಟೆಂಬರ್ 18 ರವರೆಗೆ ನಡೆಯಲಿದೆ. ಮೊದಲ ಮತ್ತು ಕೊನೆಯ ಪಂದ್ಯಗಳು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು ಎರಡನೇ ಪಂದ್ಯ ಹುಬ್ಬಳ್ಳಿಯ ಕೆಎಸ್‌ಸಿಎ ರಾಜ್‌ನಗರ ಕ್ರೀಡಾಂಗಣದಲ್ಲಿ ಆಯೋಜನೆಯಾಗಲಿದೆ.
ಮೂರು ಏಕದಿನ ಪಂದ್ಯಗಳನ್ನು ಕ್ರಮವಾಗಿ ಸೆಪ್ಟೆಂಬರ್ 22, 25 ಮತ್ತು 27 ರಂದು ಆಯೋಜನೆಯಾಗಲಿದ್ದು ಎಲ್ಲಾ ಪಂದ್ಯಗಳಿಗೂ ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ವೈಟ್-ಬಾಲ್ ಸರಣಿಗೆ ಇನ್ನಷ್ಟೇ ತಂಡವನ್ನು ಪ್ರಕಟಿಸಬೇಕಿದೆ. ರೆಡ್ ಬಾಲ್ ಸರಣಿಗೆ ಪ್ರಿಯಾಂಕ್ ಪಾಂಚಾಲ್ ಅವರನ್ನು ಭಾರತ ಎ ತಂಡದ ನಾಯಕನನ್ನಾಗಿ ನೇಮಿಸಲಾಗಿದೆ.
ಭಾರತ ಎ ತಂಡ: ಪ್ರಿಯಾಂಕ್ ಪಾಂಚಾಲ್ (ನಾಯಕ), ಅಭಿಮನ್ಯು ಈಶ್ವರನ್, ಋತುರಾಜ್ ಗಾಯಕ್ವಾಡ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ತಿಲಕ್ ವರ್ಮಾ, ಕೆಎಸ್ ಭರತ್ (ವಿಕೆಟ್ ಕೀಪರ್), ಉಪೇಂದ್ರ ಯಾದವ್ (ವಿಕೆಟ್ ಕೀಪರ್), ಕುಲದೀಪ್ ಯಾದವ್, ಸೌರಭ್ ಕುಮಾರ್, ರಾಹುಲ್ ಚಹಾರ್ , ಪ್ರಸಿದ್ಧ್ ಕೃಷ್ಣ, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್, ಯಶ್ ದಯಾಳ್, ಅರ್ಜನ್ ನಾಗವಾಸ್ವಾಲ್ಲಾ