ಬೆಂಗಳೂರು, ಸೆ. 08: ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವರಿಗೆ ಮತ್ತೊಮ್ಮೆ ಪರೀಕ್ಷೆ ಶುರುವಾಗಿದೆ. ಪ್ರವಾಸಿ ಬಾಂಗ್ಲಾದೇಶ 'ಎ' ತಂಡದ ವಿರುದ್ಧ ಭಾರತ 'ಎ' ತಂಡವನ್ನು ಅಣಿಗೊಳಿಸಬೇಕಿದೆ. ಸೆಪ್ಟೆಂಬರ್ 16 ರಿಂದ ಸೆ. 29ರವರೆಗೂ ಪಂದ್ಯಾವಳಿಗಳು ನಡೆಯಲಿವೆ. ಲಭ್ಯ ಮಾಹಿತಿ ಪ್ರಕಾರ ನಾಯಕ ಧೋನಿ ಕೂಡಾ ದ್ರಾವಿಡ್ ಕೋಚಿಂಗ್ ನಲ್ಲಿ ಆಡುವ ಸಾಧ್ಯತೆಯೂ ಇದೆ.
ಬಾಂಗ್ಲಾದೇಶ 'ಎ' ತಂಡ ಬೆಂಗಳೂರಿನಲ್ಲಿ ಮೂರು ಏಕದಿನ ಹಾಗೂ ಏಕೈಕ ತ್ರಿದಿನ ಪಂದ್ಯವನ್ನಾಡಲಿದೆ. ಸೆ.22ರಿಂದ 24ರವರೆಗೆ ರಣಜಿ ಚಾಂಪಿಯನ್ ಕರ್ನಾಟಕ ವಿರುದ್ಧ ಮೂರು ದಿನಗಳ ಅಭ್ಯಾಸ ಪಂದ್ಯ ಆಡಲಿದೆ.
ಅಕ್ಟೋಬರ್ 2 ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಅಭ್ಯಾಸ ನಡೆಸುವ ದೃಷ್ಟಿಯಿಂದ ಭಾರತ ತಂಡದ ಬಹುತೇಕ ಆಟಗಾರರು ಬಾಂಗ್ಲಾದೇಶ ಎ ತಂಡದ ವಿರುದ್ಧ ಕಣಕ್ಕಿಳಿಯುವ ಸಾಧ್ಯತೆಗಳಿವೆ.

ಬಾಂಗ್ಲಾ 'ಎ' ತಂಡದ ಪ್ರವಾಸದ ವೇಳಾಪಟ್ಟಿ
ದಿನಾಂಕ/ದಿನ ಪಂದ್ಯ ಸ್ಥಳ
* ಸೆಪ್ಟೆಂಬರ್ 16 : ಬುಧವಾರ, ಮೊದಲ ಏಕದಿನ ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು
* ಸೆಪ್ಟೆಂಬರ್ 18 : ಶುಕ್ರವಾರ, 2ನೇ ಏಕದಿನ ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು
* ಸೆಪ್ಟೆಂಬರ್ 20 : ಭಾನುವಾರ, 3ನೇ ಏಕದಿನ ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು
*ಸೆಪ್ಟೆಂಬರ್ 22-24 :ಮಂಗಳವಾರ- ಗುರುವಾರ ಮೂರು ದಿನಗಳ ಪಂದ್ಯ, ರಣಜಿ ಚಾಂಪಿಯನ್ ಕರ್ನಾಟಕ ತಂಡದ ವಿರುದ್ಧ, ಮೈಸೂರು,
* ಸೆಪ್ಟೆಂಬರ್ 27-29 : ಭಾನುವಾರ-ಮಂಗಳವಾರ, ಮೂರು ದಿನಗಳ ಪಂದ್ಯ, ಚಿನ್ನಸ್ವಾಮಿ ಸ್ಟೇಡಿಯಂ.
ಏಕದಿನ ಸರಣಿಗೆ ಸಜ್ಜುಗೊಳ್ಳುವ ದೃಷ್ಟಿಯಿಂದ ಸುರೇಶ್ ರೈನಾ, ಅಂಬಟಿ ರಾಯುಡು, ಬಹುದಿನಗಳಿಂದ ಕ್ರಿಕೆಟ್ ದೂರ ಉಳಿದಿರುವ ಏಕದಿನ ತಂಡದ ನಾಯಕ ಎಂಎಸ್ ಧೋನಿ ಕೂಡ ಆಡುವ ಸಾಧ್ಯತೆಗಳಿವೆ. ಶ್ರೀಲಂಕಾ ಪ್ರವಾಸಕ್ಕೆ ತೆರಳುವುದಕ್ಕೂ ಮುನ್ನ ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಚೆನ್ನೈನಲ್ಲಿ ಆಸ್ಟ್ರೇಲಿಯಾ 'ಎ' ತಂಡದ ವಿರುದ್ಧ ಅಭ್ಯಾಸ ಪಂದ್ಯವನ್ನಾಡಿದ್ದನ್ನು ಇಲ್ಲಿ ಸ್ಮರಿಸಬಹುದು.