
ನವದೆಹಲಿ, ಜನವರಿ 10: ಆಸ್ಟ್ರೇಲಿಯಾ ಪ್ರವಾಸ ಮುಕ್ತಾಯದ ಬಳಿಕ ಭಾರತ, ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ತವರಿಗೆ ಆಹ್ವಾನಿಸಲಿದೆ. ಭಾರತದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಸರಣಿಗೆ ಸಂಬಂಧಿಸಿ ಬಿಸಿಸಿಐ ಗುರುವಾರ (ಜನವರಿ 10) ವೇಳಾಪಟ್ಟಿ ಪ್ರಕಟಿಸಿದೆ (ಚಿತ್ರ ಕೃಪೆ: ಬಿಸಿಸಿಐ).
'ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ಮತ್ತು ಆಸ್ಟ್ರೇಲಿಯಾವು ಭಾರತದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧ ಸರಣಿಯ ವೇಳಾಪಟ್ಟಿ ಪ್ರಕಟಿಸಿದೆ. ಫೆಬ್ರವರಿ 24ರಂದು ಆರಂಭಗೊಳ್ಳುವ ಸರಣಿ ಮಾರ್ಚ್ 13ರಂದು ಕೊನೆಗೊಳ್ಳಲಿದೆ' ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.
ಏರಡು ಪಂದ್ಯಗಳ ಟಿ20 ಸರಣಿ ಫೆಬ್ರವರಿ 24ರಂದು ಬೆಂಗಳೂರಿನಲ್ಲಿ ಮತ್ತು ಫೆಬ್ರವರಿ 27ರಂದು ವಿಶಾಖಪಟ್ನಂನಲ್ಲಿ ನಡೆಯಲಿದೆ. ಮಾರ್ಚ್ 2ರಂದು ಮೊದಲ ಏಕದಿನ ಪಂದ್ಯ ಹೈದರಾಬಾದ್‌ನಲ್ಲಿ ನಡೆಯಲಿದೆ. ಏಕದಿನ ಸರಣಿಯು ಒಟ್ಟು ಐದು ಪಂದ್ಯಗಳನ್ನು ಒಳಗೊಂಡಿರಲಿದೆ.
ಎರಡನೇ ಏಕದಿನ ಪಂದ್ಯ ಮಾರ್ಚ್ 5ಕ್ಕೆ ನಾಗ್ಪುರದಲ್ಲಿ, 3ನೇ ಪಂದ್ಯ ಮಾರ್ಚ್ 8ಕ್ಕೆ ರಾಂಚಿಯಲ್ಲಿ, 4ನೇ ಪಂದ್ಯ ಮಾರ್ಚ್ 10ಕ್ಕೆ ಮೊಹಾಲಿಯಲ್ಲಿ ಮತ್ತು ಅಂತಿಮ ಪಂದ್ಯ ಮಾರ್ಚ್ 13ಕ್ಕೆ ನವದೆಹಲಿಯಲ್ಲಿ ನಡೆಯಲಿದೆ. ಟಿ20 ಪಂದ್ಯಗಳು 7pmಗೆ ಆರಂಭಗೊಂಡರೆ, ಏಕದಿನ ಪಂದ್ಯಗಳು 1.30 pmಗೆ ಆರಂಭಗೊಳ್ಳಲಿವೆ ಎಂದು ಬಿಸಿಸಿಐ ಮಾಹಿತಿ ನೀಡಿದೆ.