ಶನಿವಾರ, ಜೂನ್ 29ರಂದು ಬಾರ್ಬಡೋಸ್‌ನಲ್ಲಿ ನಡೆದ 2024ರ ಐಸಿಸಿ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್‌ಗಳ ಗೆಲುವು ಸಾಧಿಸಿದ ಭಾರತ ತಂಡ 17 ವರ್ಷಗಳ ನಂತರ ಎರಡನೇ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿತು.
2024ರ ಟಿ20 ವಿಶ್ವಕಪ್ ವಿಜೇತ ಭಾರತ ತಂಡ ಮತ್ತು ಸಹಾಯಕ ಸಿಬ್ಬಂದಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರು ಬರೋಬ್ಬರಿ 125 ಕೋಟಿ ರೂಪಾಯಿ ಬಹುಮಾನ ಮೊತ್ತವನ್ನು ಘೋಷಿಸಿದ್ದಾರೆ.

ಭಾರತೀಯ ಕ್ರಿಕೆಟ್ ತಂಡ ಕೆನಡಾ ವಿರುದ್ಧದ ರದ್ದುಗೊಂಡ ಪಂದ್ಯ ಹೊರತುಪಡಿಸಿ ಆಡಿದ ಎಲ್ಲಾ 8 ಪಂದ್ಯಗಳನ್ನು ಗೆದ್ದು, ಟಿ20 ವಿಶ್ವಕಪ್ ಅಭಿಯಾನವನ್ನು ಅಜೇಯವಾಗಿ ಮುಗಿಸಿತು. ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 7 ರನ್‌ಗಳಿಂದ ಸೋಲಿಸುವ ಮೂಲಕ ಭಾರತದ 11 ವರ್ಷಗಳ ಸುದೀರ್ಘ ಐಸಿಸಿ ಟ್ರೋಫಿ ಬರವನ್ನು ಕೊನೆಗೊಳಿಸಿತು.
ಈ ಐತಿಹಾಸಿಕ ವಿಜಯದ ನಂತರ, ಬಿಸಿಸಿಐ ಭಾರತ ತಂಡಕ್ಕೆ 125 ಕೋಟಿ ರೂಪಾಯಿ ದಾಖಲೆಯ ಬಹುಮಾನ ಮೊತ್ತವನ್ನು ಬಿಡುಗಡೆ ಮಾಡಿದೆ. ಈ ಕುರಿತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡಕ್ಕೆ ವಿಶೇಷ ಸಂದೇಶವನ್ನು ಟ್ವೀಟ್ ಮಾಡಿದ್ದಾರೆ.
ಇಡೀ ಭಾರತ ತಂಡವನ್ನು ಅಭಿನಂದಿಸುತ್ತಾ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ 125 ಕೋಟಿ ರೂಪಾಯಿಗಳ ಬೃಹತ್ ಮೊತ್ತದ ಬಹುಮಾನವನ್ನು ಘೋಷಿಸಿದರು.
ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿಂದ 2024ರ ಟಿ20 ವಿಶ್ವಕಪ್ ಚಾಂಪಿಯನ್ ಭಾರತ ತಂಡವು 2.45 ಮಿಲಿಯನ್ ಯುಎಸ್ ಡಾಲರ್ (ಅಂದಾಜು 20.42 ಕೋಟಿ ರೂಪಾಯಿ) ಬಹುಮಾನ ಮೊತ್ತವನ್ನು ಬಾಚಿಕೊಂಡಿದೆ.
ಇನ್ನು ಭಾರತ ವಿರುದ್ಧದ ಫೈನಲ್ ಹಣಾಹಣಿಯಲ್ಲಿ ಕಡಿಮೆ ಅಂತರದಿಂದ ಸೋತ ದಕ್ಷಿಣ ಆಫ್ರಿಕಾ, 1.28 ಮಿಲಿಯನ್ ಯುಎಸ್ ಡಾಲರ್ (ಅಂದಾಜು 10.67 ಕೋಟಿ ರೂಪಾಯಿ) ಮೊತ್ತವನ್ನು ಪಡೆದುಕೊಂಡಿತು.
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡಕ್ಕೆ ಆರಂಭಿಕ ಬ್ಯಾಟರ್ ವಿರಾಟ್ ಕೊಹ್ಲಿ 76 (59) ಮತ್ತು ಆಲ್‌ರೌಂಡರ್ ಅಕ್ಷರ್ ಪಟೇಲ್ 47(31) ರನ್ ಗಳಿಸಿ ಭಾರತ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು ಮತ್ತು 176 ರನ್‌ಗಳ ಸವಾಲಿನ ಮೊತ್ತ ಕಲೆಹಾಕಲು ನರವಾದರು.
ನಂತರ ಬೌಲಿಂಗ್‌ನಲ್ಲ, ಹಾರ್ದಿಕ್ ಪಾಂಡ್ಯ ಡೆತ್ ಓವರ್‌ಗಳಲ್ಲಿ ಫೈನಲ್ ಪಂದ್ಯದ ಗೆಲುವಿನ ಸ್ಪೆಲ್‌ನಲ್ಲಿ 3 ಪ್ರಮುಖ ವಿಕೆಟ್‌ಗಳನ್ನು ಪಡೆದರು ಮತ್ತು ಜಸ್ಪ್ರೀತ್ ಬುಮ್ರಾ ಮತ್ತು ಅರ್ಶ್‌ದೀಪ್ ಸಿಂಗ್ ತಲಾ ಎರಡು ವಿಕೆಟ್ ಪಡೆದರು.
ಕೇವಲ 4.17ರ ಎಕಾನಮಿ ದರದಲ್ಲಿ 15 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಭಾರತ ತಂಡಕ್ಕೆ ದೊಡ್ಡ ಕೊಡುಗೆ ನೀಡಿದ ಜಸ್ಪ್ರೀತ್ ಬುಮ್ರಾ ಪಂದ್ಯಾವಳಿ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರು.
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಇಡೀ ಪಂದ್ಯಾವಳಿಯಲ್ಲಿ 257 ರನ್‌ಗಳೊಂದಿಗೆ ತಂಡವನ್ನು ಮುನ್ನಡೆಸಿದರು. ಅಫ್ಘಾನಿಸ್ತಾನದ ರಹಮಾನುಲ್ಲಾ ಗುರ್ಬಾಜ್ ಅವರ 281 ರನ್‌ಗಳ ನಂತರ ಎರಡನೇ ಸ್ಥಾನದಲ್ಲಿದ್ದರೆ, ಅರ್ಶ್‌ದೀಪ್ 17 ವಿಕೆಟ್‌ಗಳೊಂದಿಗೆ ಫಜಲ್‌ಹಕ್ ಫಾರೂಕಿ ಅವರೊಂದಿಗೆ ಜಂಟಿ-ಅತಿ ಹೆಚ್ಚು ರನ್ ಗಳಿಸಿದರು.