
ಚೆನ್ನೈ, ಸೆ. 16: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕಾಡಿದ್ದ ಸ್ಪಾಟ್ ಫಿಕ್ಸಿಂಗ್, ಮ್ಯಾಚ್ ಫಿಕ್ಸಿಂಗ್ ಭೂತ ಈಗ ತಮಿಳುನಾಡು ಕ್ರಿಕೆಟ್ ಪ್ರೀಮಿಯರ್ ಲೀಗ್ ಗೂ ಆವರಿಸಿದೆ.
ತಮಿಳುನಾಡು ಪ್ರೀಮಿಯರ್ ಲೀಗ್ (ಟಿಎನ್ಪಿಎಲ್) ಟಿ-20 ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಆಡಿದ ಪ್ರಮುಖ ಆಟಗಾರರನ್ನು ಬುಕ್ಕಿಗಳು ವಾಟ್ಸಾಪ್ ಮೂಲಕ ಸಂಪರ್ಕಿಸಲು ಯತ್ನಿಸಿದ್ದರು ಎಂಬ ಸುದ್ದಿ ಹೊರಬಂದಿದೆ. ಈ ಕುರಿತಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ತಮಿಳುನಾಡು ಪ್ರೀಮಿಯರ್ ಲೀಗ್ನ ಪ್ರಮುಖ ಆಟಗಾರರ ಸ್ಮಾರ್ಟ್ ಫೋನಿಗೆ ಅನಾಮಿಕ ವ್ಯಕ್ತಿಗಳಿಂದ ವಾಟ್ಸಾಪ್ ಸಂದೇಶ ಬಂದಿದೆ. ಆಟಗಾರರು ಈ ವಿಷಯವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ತಿಳಿಸಿದ್ದಾರೆ.
"ಕೆಲ ಆಟಗಾರರು ವಾಟ್ಸಾಪ್ ಸಂದೇಶ ಬಂದಿದ್ದರ ಬಗ್ಗೆ ದೂರು ನೀಡಿದ್ದು, ಅಪರಿಚಿತ ವ್ಯಕ್ತಿಗಳಿಂದ ವಾಟ್ಸಪ್ ಸಂದೇಶಗಳನ್ನು ಸ್ವೀಕರಿಸಿದ್ದಾರೆ. ಈ ಕುರಿತಂತೆ ತನಿಖೆ ಪ್ರಾರಂಭಿಸಿದ್ದೇವೆ, ಆಟಗಾರರ ಹೇಳಿಕೆ ಪಡೆಯಲಾಗಿದೆ" ಎಂದು ಬಿಸಿಸಿಐ ಎಸಿಯು ಮುಖ್ಯಸ್ಥ ಅಜೀತ್ ಸಿಂಗ್ ಹೇಳಿದ್ದಾರೆ.
ತಮಿಳುನಾಡು ಕ್ರಿಕೆಟ್ ಮಂಡಳಿ(ಟಿಎನ್ ಸಿಎ) ಆಯೋಜನೆಯ ಪ್ರೀಮಿಯರ್ ಲೀಗ್ ಟಿ20 ಪಂದ್ಯಾವಳಿಯಲ್ಲಿ ದಿನೇಶ್ ಕಾರ್ತಿಕ್, ಮುರಳಿ ವಿಜಯ್, ಆರ್ ಅಶ್ವಿನ್, ವಿಜಯ್ ಶಂಕರ್ ಹಾಗೂ ವಾಷಿಂಗ್ಟನ್ ಸುಂದರ್ ಮುಂತಾದವರು ಆಡಿದ್ದರು. ಸ್ಟಾರ್ ಸ್ಫೋರ್ಟ್ಸ್ ನೆಟ್ವರ್ಕ್ ನಲ್ಲಿ ನೇರ ಪ್ರಸಾರ ಮಾಡಲಾಗಿತ್ತು.