ಮುಂಬೈ, ಜುಲೈ 7: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಅಳವಡಿಸಿಕೊಂಡಿರುವ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಅಕ್ಟೋಬರ್ 16ರಿಂದ ಪ್ರಾರಂಭವಾಗುವ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ ಬಳಸಲು ಬಿಸಿಸಿಐ ಅನುಮೋದನೆ ನೀಡಿದೆ.
ಶುಕ್ರವಾರ, ಜುಲೈ 7ರಂದು ಮುಂಬೈನಲ್ಲಿ ನಡೆದ ಬಿಸಿಸಿಐನ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಎರಡು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ಮೊದಲನೆಯದು ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಬಳಕೆ, ಮತ್ತೊಂದು 2023ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತಂಡದ ಭಾಗವಹಿಸುವಿಕೆ ಕುರಿತು.

"ಇಂಪ್ಯಾಕ್ಟ್ ಪ್ಲೇಯರ್' ನಿಯಮವನ್ನು ಕಳೆದ ಋತುವಿನಲ್ಲಿ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ ಪರಿಚಯಿಸಲಾಗಿತ್ತು. ಆದರೆ ಅದನ್ನು 14ನೇ ಓವರ್‌ಗಿಂತ ಮೊದಲು ತರಬೇಕಾಗಿತ್ತು ಮತ್ತು ಟಾಸ್‌ಗೆ ಮೊದಲು ಹೆಸರಿಸಬೇಕಾಗಿತ್ತು.
ಆದರೆ, ಐಪಿಎಲ್‌ನಂತೆ ಮುಂದಿನ ಋತುವಿನಿಂದ ಇದು ಬದಲಾಗಲಿದೆ. ಟಾಸ್‌ಗೆ ಮೊದಲು ಆಡುವ 11ರ ಬಳಗವನ್ನು ಹೊರತುಪಡಿಸಿ 4 ಬದಲಿ ಆಟಗಾರರನ್ನು ಹೆಸರಿಸಲು ತಂಡಗಳಿಗೆ ಅವಕಾಶ ನೀಡಲಾಗುತ್ತದೆ. 4 ಬದಲಿ ಆಟಗಾರರಲ್ಲಿ ಒಬ್ಬರನ್ನು ಮಾತ್ರ ಯಾವುದೇ ತಂಡವು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಬಹುದಾಗಿದೆ.
"ಪ್ರತಿ ಪಂದ್ಯದಲ್ಲಿ ಎರಡೂ ತಂಡಗಳು ಒಬ್ಬ ಇಂಪ್ಯಾಕ್ಟ್ ಪ್ಲೇಯರ್ ಅನ್ನು ಬಳಸಲು ಅನುಮತಿಸಲಾಗಿದೆ. ಆದಾಗ್ಯೂ, ಇದು ಕಡ್ಡಾಯವಲ್ಲ," ಎಂದು ನಿಯಮದ ಮಾರ್ಗಸೂಚಿಗಳಲ್ಲಿ ತಿಳಿಸಲಾಗಿದೆ.

ಇಂಪ್ಯಾಕ್ಟ್ ಪ್ಲೇಯರ್ ಅವಕಾಶವನ್ನು 10 ಐಪಿಎಲ್ ತಂಡಗಳು ಹೆಚ್ಚಿನ ಬಾರಿ ಬಳಸಿದವು. ಆದರೆ ಅದರ ಬಗ್ಗೆ ಹಲವು ಅಭಿಪ್ರಾಯಗಳು ವ್ಯಕ್ತವಾದವು. ಆಸ್ಟ್ರೇಲಿಯಾ ಮಾಜಿ ನಾಯಕ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಅವರು ತಂಡದಲ್ಲಿ ಆಲ್‌ರೌಂಡರ್ ಪಾತ್ರವನ್ನು ಬಹುತೇಕ ನಿರಾಕರಿಸಿದಂತಿದೆ ಎಂದು ಹೇಳಿದ್ದಾರೆ.
ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯಲಿರುವ 2023ರ ಏಷ್ಯನ್ ಗೇಮ್ಸ್‌ಗಾಗಿ ಪುರುಷ ಮತ್ತು ಮಹಿಳಾ ಕ್ರಿಕೆಟ್ ತಂಡಗಳ ಭಾಗವಹಿಸುವಿಕೆಯನ್ನು ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯು ಅನುಮೋದಿಸಿದೆ.
ಸೆಪ್ಟೆಂಬರ್ 28ರಿಂದ ಪ್ರಾರಂಭವಾಗುವ ಪುರುಷರ ಪಂದ್ಯಾವಳಿಯಲ್ಲಿ ಎರಡನೇ ಶ್ರೇಣಿಯ ಭಾರತೀಯ ತಂಡ ಭಾಗವಹಿಸಲಿದೆ ಮತ್ತು ಸೆಪ್ಟೆಂಬರ್ 19ರಿಂದ ಪ್ರಾರಂಭವಾಗುವ ಮಹಿಳೆಯರ ಟೂರ್ನಿಗೆ ಪೂರ್ಣ ಸಾಮರ್ಥ್ಯದ ತಂಡವನ್ನು ಆಯ್ಕೆ ಮಾಡಲಾಗುತ್ತದೆ.
ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಕೇವಲ ಮೂರು ಬಾರಿ ಕ್ರಿಕೆಟ್ ಆಡಲಾಗಿದೆ. ಕೊನೆಯ ಬಾರಿಗೆ 2014ರಲ್ಲಿ ಇಂಚಿಯಾನ್‌ನಲ್ಲಿ ನಡೆದ ಪಂದ್ಯಾವಳಿಯಲ್ಲಿ ಭಾರತ ಭಾಗವಹಿಸಿರಲಿಲ್ಲ. ಅಕ್ಟೋಬರ್ 5ರಿಂದ ಭಾರತವು ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯನ್ನು ಆಯೋಜಿಸುವುದರಿಂದ ಭಾರತ ಪುರುಷರ ತಂಡಕ್ಕೆ ನಿರ್ಣಾಯಕ ಸಮಯದಲ್ಲಿ ಏಷ್ಯನ್ ಗೇಮ್ಸ್ ಸೇರಿಕೊಳ್ಳಲಿದೆ.
ಭಾರತ ತಂಡದ ಸತತ ಅಂತಾರಾಷ್ಟ್ರೀಯ ಸರಣಿ ವೇಳಾಪಟ್ಟಿಯನ್ನು ಪರಿಗಣಿಸಿ, ಏಷ್ಯನ್ ಗೇಮ್ಸ್‌ನಲ್ಲಿ ತಂಡವನ್ನು ಕಣಕ್ಕಿಳಿಸುವುದು ಬಿಸಿಸಿಐಗೆ ಸವಾಲಾಗಿದೆ. ಆದರೆ ರಾಷ್ಟ್ರದ ಭಾಗವಹಿಸುವಿಕೆಯು ಸಹ ಮುಖ್ಯವಾಗಿದೆ. ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಭಾರತ ಚಿನ್ನ ಗೆಲ್ಲುವ ನೆಚ್ಚಿನ ತಂಡವಾಗಿದೆ.
"ಪರಿಣಾಮಕಾರಿ ಯೋಜನೆ, ಸಂವಹನ ಮತ್ತು ಸಮನ್ವಯದ ಮೂಲಕ ಬಿಸಿಸಿಐ ಈ ಸವಾಲುಗಳನ್ನು ಯಶಸ್ವಿಯಾಗಿ ನೀಗಿಸುವ ಗುರಿಯನ್ನು ಹೊಂದಿದೆ. ಭಾರತ ಸರ್ಕಾರದ ನಿರ್ದೇಶನಗಳಿಗೆ ಅನುಗುಣವಾಗಿ ಪುರುಷರು ಮತ್ತು ಮಹಿಳೆಯರ ವಿಭಾಗದಲ್ಲಿ ತಂಡವನ್ನು ಕಳುಹಿಸುವ ಮೂಲಕ ರಾಷ್ಟ್ರೀಯ ಉದ್ದೇಶಕ್ಕೆ ಕೊಡುಗೆ ನೀಡಲಿದೆ," ಎಂದು ಬಿಸಿಸಿಐ ತಿಳಿಸಿದೆ.