ಬಾಂಗ್ಲಾದೇಶದಲ್ಲಿ ಈಗ ಸರ್ಕಾರ ಬದಲಾಗಿದೆ. ಹೊಸ ಪ್ರಧಾನಿ ಹಾಗೂ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಈ ವೇಳೆ ಹೊಸ ಕ್ರೀಡಾ ಸಚಿವ ಅಮೀನುಲ್ ಹಕ್, ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ. ಬಿಸಿಸಿಐ ಹಾಗೂ ಭಾರತದೊಂದಿಗಿನ ಸಂಬಂಧವನ್ನು ಸುಧಾರಿಸಲು ಸರ್ಕಾರ ಬಯಸುತ್ತಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಈ ಸಮಸ್ಯೆಯನ್ನು ಆದಷ್ಟು ಶೀಘ್ರದಲ್ಲಿ ಪರಿಹರಿಸುವುದಾಗಿ ನೂತನ ಕ್ರೀಡಾ ಸಚಿವರು ಹೇಳಿದ್ದಾರೆ. ಇದೇ ವೇಳೆ ಅವರು ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ಭಾಗವಹಿಸದ ಬಗ್ಗೆಯೂ ಮಾತನಾಡಿದ್ದಾರೆ.
ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾತನಾಡಿದ ಅಮೀನುಲ್ ಹಕ್, ನಾನು ಸಂಸತ್ತಿನ ಕಟ್ಟಡದಲ್ಲಿ ಭಾರತೀಯ ಉಪ ಹೈಕಮಿಷನರ್ ಅವರನ್ನು ಭೇಟಿಯಾದೆ. ಇದೇ ವೇಳೆ ಟಿ20 ವಿಶ್ವಕಪ್‌ಗೆ ಮಾತುಕತೆ ನಡೆಸಿದ್ದೇವೆ. ಉಭಯ ದೇಶಗಳ ಸ್ನೇಹ ಸಂಬಂಧವನ್ನು ಬೆಳೆಸುವ ಉದ್ದೇಶವನ್ನು ಹೊಂದಲಾಗಿದೆ. ಈ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.

ಭಾರತದಲ್ಲಿ ಭದ್ರತಾ ಕಾರಣಗಳನ್ನು ತಿಳಿಸಿ ಬಾಂಗ್ಲಾದೇಶ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲು ನಿರಾಕರಿಸಿತ್ತು. ಈ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ತನ್ನ ಲೀಗ್ ಹಂತದ ಎಲ್ಲ ಪಂದ್ಯಗಳನ್ನು ಮುಂಬೈ, ಕೋಲ್ಕತ್ತದಲ್ಲಿ ಆಡಬೇಕಿತ್ತು. ಆದರೆ ಬಾಂಗ್ಲಾ ಪ್ರವಾಸ ಬೆಳೆಸಲು ನಿರಾಕರಿಸಿದ್ದರಿಂದ ಐಸಿಸಿ ಬಾಂಗ್ಲಾ ಬದಲಿಗೆ ಸ್ಕಾಟ್ಲೆಂಡ್‌ಗೆ ಅವಕಾಶ ನೀಡಲಾಯಿತು.
ಬಾಂಗ್ಲಾದೇಶದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ಫೆ.13 ರಂದು ಭಾರತದ ಪ್ರಧಾನಿ ನರೇಂದ್ರ ಮೋದಿ, ತಾರಿಕ್ ರೆಹಮಾನ್ ಅವರಿಗೆ ಕರೆ ಮಾಡಿ ಶುಭಾಶಯ ತಿಳಿಸಿದ್ದರು. ಅಲ್ಲದೆ ಉಭಯ ದೇಶಗಳ ನಡುವಿನ ಸಂಬಂಧ ಸುಧಾರಣೆಗೆ ಬಲಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ.
- ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆಗಳನ್ನು ವಿರೋಧಿಸಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್‌ನಿಂದ ಹೊರಹಾಕಿತು. ಬಿಸಿಸಿಐ ಈ ಕ್ರಮವನ್ನು ಬಿಸಿಬಿ ಖಂಡಿಸಿ ಪ್ರತಿಭಟಿಸಿತ್ತು.
- ಬಾಂಗ್ಲಾದೇಶ ಸರ್ಕಾರ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್‌ನಿಂದ ಹೊರಗಿಟ್ಟಿದ್ದಕ್ಕೆ ಆಕ್ರೋಶ ವ್ಯಕ್ತ ಪಡಿಸಿತ್ತು. ಅಲ್ಲದೆ ಬಾಂಗ್ಲಾದೇಶದಲ್ಲಿ ಐಪಿಎಲ್ ನೇರ ಪ್ರಸಾರಕ್ಕೆ ಬ್ರೇಕ್ ಹಾಕಿತು. ಅಲ್ಲದೆ ಭಾರತಕ್ಕೆ ಬಾಂಗ್ಲಾ ಪ್ರವಾಸ ಬೆಳೆಸುವುದಿಲ್ಲ ಎಂದು ಬಿಸಿಬಿ, ಐಸಿಸಿ ಮುಂದೆ ತನ್ನ ಪ್ರಸ್ತಾವನೆ ಇಟ್ಟಿತ್ತು.
ಐಪಿಎಲ್ ಮಿನಿ ಹರಾಜಿನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಬಾಂಗ್ಲಾದೇಶದ ಬೌಲರ್ ಮುಸ್ತಾಫಿಜುರ್ ರೆಹಮಾನ್ ಅವರನ್ನು 9.2 ಕೋಟಿ ನೀಡಿ ಖರೀದಿಸಿತ್ತು. ಆದರೆ ಭಾರತದಲ್ಲಿ ಪ್ರತಿಭಟನೆಗಳು ನಡೆದ ಬಳಿಕ ಅವರನ್ನು ಕೆಕೆಆರ್ ತಂಡದಿಂದ ಕೈ ಬಿಡುವಂತೆ ಬಿಸಿಸಿಐ ಸೂಚನೆ ನೀಡಿತು. ಅಲ್ಲದೆ ಬೇರೆ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲು ಅವಕಾಶವನ್ನು ನೀಡುವುದಾಗಿ ತಿಳಿಸಿತ್ತು. ಇಲ್ಲಿಂದ ಬಾಂಗ್ಲಾದೇಶ ತನ್ನ ಪ್ರತಿಭಟನೆಯನ್ನು ಆರಂಭಿಸಿತು.