Team India Family: ಟೀಮ್ ಇಂಡಿಯಾ ಟಿ20 ವಿಶ್ವಕಪ್ 2026 ಪ್ರಯಾಣವನ್ನು ಅಮೆರಿಕ (ಯುಎಸ್ಎ) ವಿರುದ್ಧದ ಜಯದೊಂದಿಗೆ ಆರಂಭಿಸಿದೆ. ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡಕ್ಕೆ ಈ ಗೆಲುವು ಉತ್ತಮ ಆರಂಭ ನೀಡಿದೆ. ಆದರೆ, ವೈಯಕ್ತಿಕ ಮಟ್ಟದಲ್ಲಿ ಆಟಗಾರರಿಗೆ ದೊಡ್ಡ ಹಿನ್ನಡೆಯಾಗಿದೆ. ಹಾಗಾದ್ರೆ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಟೂರ್ನಿಯ ಅವಧಿಯಲ್ಲಿ ಆಟಗಾರರ ಕುಟುಂಬಸ್ಥರು ತಂಡದೊಂದಿಗೆ ಉಳಿಯುವುದನ್ನು ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ನಿಷೇಧಿಸಿದೆ. ಈ ಕುರಿತು ಸ್ಪಷ್ಟತೆಗಾಗಿ ತಂಡದ ಆಟಗಾರರು ಭಾರತೀಯ ತಂಡದ ಮ್ಯಾನೇಜ್‌ಮೆಂಟ್ ಉನ್ನತಾಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಅವರ ಮನವಿಯನ್ನು ತಿರಸ್ಕರಿಸಲಾಗಿದೆ ಎಂದು ವರದಿಯಾಗಿದೆ. ಈ ನಿರ್ಧಾರವು ಆಟಗಾರರ ನಡುವೆ ಚರ್ಚೆಗೆ ಕಾರಣವಾಗಿದ್ದು, ವಿಶ್ವಕಪ್‌ನಂತಹ ದೊಡ್ಡ ಟೂರ್ನಿಯ ಸಂದರ್ಭದಲ್ಲಿ ಕುಟುಂಬದ ಬೆಂಬಲ ದೊರೆಯದಿರುವುದು ಕೆಲವರಿಗೆ ಮಾನಸಿಕವಾಗಿ ದೊಡ್ಡ ಸವಾಲಾಗಬಹುದು ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.

ಬಿಸಿಸಿಐ ನಿಲುವೇನು?: "ಭಾರತೀಯ ತಂಡದ ಮ್ಯಾನೇಜ್‌ಮೆಂಟ್ ಆಟಗಾರರ ಪತ್ನಿಯರು, ಕುಟುಂಬಸ್ಥರು ಹಾಗೂ ನಿಶ್ಚಿತಾರ್ಥ ಮಾಡಿಕೊಂಡಿರುವವರು ತಂಡದೊಂದಿಗೆ ಪ್ರಯಾಣಿಸಿ ಉಳಿಯಬಹುದೇ ಎಂದು ಬಿಸಿಸಿಐಯನ್ನು ಸಂಪರ್ಕಿಸಿತ್ತು. ಆದರೆ, ಕುಟುಂಬಸ್ಥರು ಆಟಗಾರರೊಂದಿಗೆ ಉಳಿಯುವುದಿಲ್ಲ ಎಂಬುದನ್ನು ಮಂಡಳಿ ಸ್ಪಷ್ಟಪಡಿಸಿದೆ. ಒಂದು ವೇಳೆ ಅವರು ಉಳಿದುಕೊಳ್ಳಲು ಬಯಸಿದರೆ, ತಮ್ಮದೇ ಆದ ಪ್ರತ್ಯೇಕ ವ್ಯವಸ್ಥೆಗಳನ್ನು ಮಾಡಿಕೊಳ್ಳಬಹುದು," ಎಂದು ಬಿಸಿಸಿಐ ಮೂಲವೊಂದು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದೆ.
ಪರಿಷ್ಕೃತ ನಿಯಮಗಳ ವಿವರ: ಕುಟುಂಬಸ್ಥರು ತಂಡದೊಂದಿಗೆ ಉಳಿಯುವಿಕೆಯನ್ನು ನಿಯಂತ್ರಿಸುವುದು ಹೊಸ ನಿರ್ಧಾರವಲ್ಲ. ಬಾರ್ಡರ್-ಗವಾಸ್ಕರ್ ಟ್ರೋಫಿ ಪ್ರವಾಸದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಭಾರೀ ಸೋಲು ಅನುಭವಿಸಿದ ನಂತರ, ಬಿಸಿಸಿಐ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಈ ಪರಿಷ್ಕೃತ ನಿಯಮಗಳ ಪ್ರಕಾರ, ವಿದೇಶಿ ಪ್ರವಾಸವು 45 ದಿನಗಳಿಗಿಂತ ಹೆಚ್ಚು ಅವಧಿಯದ್ದಾಗಿದ್ದರೆ ಮಾತ್ರ ಆಟಗಾರರ ಪತ್ನಿಯರು ಅಥವಾ ಕುಟುಂಬ ಸದಸ್ಯರು ಗರಿಷ್ಠ 14 ದಿನಗಳ ಕಾಲ ತಂಡದೊಂದಿಗೆ ಇರಲು ಅವಕಾಶ ಇರುತ್ತದೆ.
ಕೊವಿಡ್-19 ಅವಧಿಯಲ್ಲಿ ಆಟಗಾರರಿಗೆ ಸಂಪೂರ್ಣ ಪ್ರವಾಸದ ಸಮಯದಲ್ಲೂ ಕುಟುಂಬಸ್ಥರನ್ನು ಜೊತೆಯಲ್ಲಿ ಇರಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಆದರೆ, ಕಳೆದ ವರ್ಷದ ಆಸ್ಟ್ರೇಲಿಯಾ ಪ್ರವಾಸದ ನಂತರ ಈ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಲಾಗಿದೆ. ಮೂಲ ಸೌಕರ್ಯಗಳ ಕೊರತೆಯನ್ನು ಸರಿದೂಗಿಸುವ ಉದ್ದೇಶದಿಂದ ಟೂರ್ನಿಯ ಅವಧಿಯಲ್ಲಿ ತಂಡವು ಖಾಸಗಿ ಚಾರ್ಟರ್ ವಿಮಾನಗಳ ಮೂಲಕ ಪ್ರಯಾಣಿಸಲಿದೆ.
ಜೊತೆಗೆ, ಕೆಲವು ಆಟಗಾರರು ತಮ್ಮ ವೈಯಕ್ತಿಕ ಅಡುಗೆಯವರನ್ನು ಉಳಿಸಿಕೊಂಡಿದ್ದರೂ, ಅವರಿಗೆ ತಂಡ ವಾಸಿಸುವ ಹೋಟೆಲ್‌ಗಿಂತ ಸಮೀಪದ ಬೇರೆ ಹೋಟೆಲ್‌ಗಳಲ್ಲಿ ತಂಗುವಂತೆ ಸೂಚಿಸಲಾಗಿದೆ. ಅಲ್ಲಿಂದ ತಯಾರಿಸಲಾದ ಆಹಾರವನ್ನು ತಂಡಕ್ಕೆ ತಲುಪಿಸಲಾಗುತ್ತದೆ. ಈ "ಬಿಸಿನೆಸ್-ಒನ್ಲಿ" ದೃಷ್ಟಿಕೋನವು ಇತ್ತೀಚಿನ ಮಹತ್ವದ ಸೋಲುಗಳ ನಂತರ ಸಂಪೂರ್ಣ ಏಕಾಗ್ರತೆಯನ್ನು ಕಾಯ್ದುಕೊಳ್ಳಲು ಬಿಸಿಸಿಐಯ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ.
ಬಾಹ್ಯ ಗೊಂದಲಗಳನ್ನು ಕಡಿಮೆ ಮಾಡುವ ಮತ್ತು ಆಟಗಾರರ ಪರಿಸರ, ಅವರ ಆಹಾರದವರೆಗೆ ಕಟ್ಟುನಿಟ್ಟಾಗಿ ನಿಯಂತ್ರಿಸಲಾಗಿದೆ. ಈ ಮೂಲಕ, ಮಂಡಳಿ ಸೌಕರ್ಯಕ್ಕಿಂತ ಶಿಸ್ತಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಸ್ಪಷ್ಟವಾಗಿದೆ. ಆದರೆ, ಇಂತಹ ಕಠಿಣ ವಾತಾವರಣವು ಟ್ರೋಫಿ ಗೆಲ್ಲಲು ಎಷ್ಟು ಪ್ರಯೋಜನಕಾರಿಯಾಗಲಿದೆ ಎನ್ನುವ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ ಎನ್ನಲಾಗುತ್ತಿದೆ.