ಬಿಸಿಸಿಐ ಆಯ್ಕೆ ಸಮಿತಿ: ಐವರು ಅಭ್ಯರ್ಥಿಗಳಿಗೆ ಸಂದರ್ಶನದಲ್ಲಿ ಕೇಳಿದ್ದು ಈ ಒಂದು ಪ್ರಶ್ನೆಯನ್ನು

ಬಿಸಿಸಿಐ ಆಯ್ಕೆ ಸಮಿತಿಗೆ, ಕರ್ನಾಟಕದ ಗದಗ ಮೂಲದ ಸುನಿಲ್ ಜೋಶಿ ಆಯ್ಕಯಾಗಿದ್ದಾರೆ. ಮುಂಬರುವ ಸರಣಿಗಳಿಗೆ ಟೀಂ ಇಂಡಿಯಾ ತಂಡವನ್ನು ಆಯ್ಕೆ ಮಾಡುವ ಜವಾಬ್ದಾರಿ ಇವರ ಹೆಗಲೇರಿದೆ.
ಸುಮಾರು ನಾಲ್ಕು ವರ್ಷಗಳ ಕಾಲ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದ ಎಂ.ಎಸ್.ಕೆ ಪ್ರಸಾದ್ ಸ್ಥಾನವನ್ನು ಜೋಶಿ ತುಂಬಲಿದ್ದಾರೆ. ಇವರ ಜೊತೆಗೆ, ಹರ್ವೀಂದರ್ ಸಿಂಗ್ ಕೂಡಾ ಆಯ್ಕೆ ಸಮಿತಿಯಲ್ಲಿ ಇರಲಿದ್ದಾರೆ.
ಮದನ್ ಲಾಲ್, ಆರ್.ಪಿ.ಸಿಂಗ್ ಮತ್ತು ಸುಲಕ್ಷಣಾ ನಾಯಕ್ ಅವರನ್ನೊಳಗೊಂಡ ಸಿಎಸಿ, ಜೋಶಿ ಅವರನ್ನು ಆಯ್ಕೆ ಮಾಡಿತ್ತು. ಜೋಶಿ, ಭಾರತದ ಪರ ಹದಿನೈದು ಟೆಸ್ಟ್ ಮತ್ತು 69 ಏಕದಿನ ಪಂದ್ಯವನ್ನಾಡಿದ್ದಾರೆ.
ರಾಷ್ಟ್ರೀಯ ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಒಟ್ಟು ಐವರು ಅಂತಿಮ ರೇಸ್ ನಲ್ಲಿದ್ದರು. ಈ ಐವರಿಗೂ, ಸಲಹಾ ಸಮಿತಿಯ ಸದಸ್ಯರು ಕೇಳಿದ್ದು ಒಂದೇ ಒಂದು ಕಾಮನ್ ಪ್ರಶ್ನೆಯನ್ನು. ಆ ಪ್ರಶ್ನೆಯಾವುದು, ಮುಂದೆ ಓದಿ..

ಎಂ.ಎಸ್.ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ
ಎಂ.ಎಸ್.ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿಯ ಅವಧಿ ಕಳೆದ ನವೆಂಬರ್ ನಲ್ಲಿ ಅಂತ್ಯವಾಗಿತ್ತು. ಆದರೆ, ಹೊಸ ಆಯ್ಕೆ ಸಮಿತಿ ರಚನೆಯಾಗದ ಹಿನ್ನೆಲೆಯಲ್ಲಿ ಪ್ರಸಾದ್ ಮತ್ತು ರಾಜಸ್ಥಾನದ ಬ್ಯಾಟ್ಸ್ ಮ್ಯಾನ್ ಗಗನ್ ಖೋಡಾ ಸಮಿತಿಯಲ್ಲಿ ಮುಂದುವರಿದಿದ್ದರು.

ಸುನಿಲ್ ಜೋಶಿ
ಸುನಿಲ್ ಜೋಶಿ ಅಲ್ಲದೇ, ಹರ್ವೀಂದರ್ ಸಿಂಗ್. ವೆಂಕಟೇಶ್ ಪ್ರಸಾದ್, ರಾಜೇಶ್ ಚೌಹಾಣ್ ಮತ್ತು ಲಕ್ಷ್ಮಣ್ ಶಿವರಾಮಕೃಷ್ಣನ್. ಈ ಐವರು ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕಾಗಿ ಸಂದರ್ಶನದಲ್ಲಿ ಭಾಗವಹಿಸಿದ್ದರು. ಈ ಐವರಿಗೂ, ಸಿಎಸಿ (ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿ) ಕೇಳಿದ್ದು ಒಂದು ಕಾಮನ್ ಪ್ರಶ್ನೆಯನ್ನು ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಟೀಂ ಇಂಡಿಯಾದಲ್ಲಿ ಧೋನಿ ಭವಿಷ್ಯ
"ಭಾರತೀಯ ಕ್ರಿಕೆಟ್ ತಂಡದಲ್ಲಿ ಮಹೇಂದ್ರ ಸಿಂಗ್ ಧೋನಿಯ ಭವಿಷ್ಯ ನಿಮ್ಮ ಪ್ರಕಾರ ಏನಾಗಿರಬೇಕು" ಎನ್ನುವ ಪ್ರಶ್ನೆಯನ್ನು ಐವರಲ್ಲೂ ಕೇಳಲಾಗಿತ್ತು ಎಂದು ಬಿಸಿಸಿಐ ಹಿರಿಯ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಆದರೆ, ಈ ಐವರು, ಈ ಪ್ರಶ್ನೆಗೆ ಏನು ಉತ್ತರ ನೀಡಿದರು ಎನ್ನುವುದು ಬಹಿರಂಗವಾಗಲಿಲ್ಲ.

ಧೋನಿ ಐಪಿಎಲ್ ನಲ್ಲಿ ಚೆನ್ನೈ ತಂಡದ ನಾಯಕ
ಮುಂಬರುವ ಟಿ20 ವಿಶ್ವಕಪ್ ಗೆ ಹೊಸ ಸಮಿತಿಯ ಅಧ್ಯಕ್ಷರು ತಂಡವನ್ನು ಆಯ್ಕೆ ಮಾಡಬೇಕಾಗಿರುವುದರಿಂದ ಸಲಹಾ ಸಮಿತಿ ಈ ಪ್ರಶ್ನೆಯನ್ನು ಕೇಳಿದೆ ಎಂದು ಹೇಳಲಾಗುತ್ತಿದೆ. ಕಳೆದ ವಿಶ್ವಕಪ್ ಸೆಮಿಫೈನಲ್ ನಂತರ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ ಆಡಲಿಲ್ಲ. ಧೋನಿ ಐಪಿಎಲ್ ನಲ್ಲಿ ಚೆನ್ನೈ ತಂಡದ ನಾಯಕರಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications