
ಭಾರತೀಯ ಕ್ರಿಕೆಟ್ ತಂಡದ ಆಟಗಾರರ ಹೊಸ ಕೇಂದ್ರೀಯ ಒಪ್ಪಂದ ಪಟ್ಟಿಯನ್ನು ಬಿಸಿಸಿಐ ಬಿಡುಗಡೆಗೊಳಿಸಿದೆ. ನಿರೀಕ್ಷೆಯಂತೆಯೇ ಹಾರ್ದಿಕ್ ಪಾಂಡ್ಯ ಈ ಒಪ್ಪಂದದಲ್ಲಿ ಭಾರೀ ಹಿನ್ನಡೆಯನ್ನು ಅನುಭವಿಸಿದ್ದಾರೆ. ಲಭ್ಯತೆ ಹಾಗೂ ಫಿಟ್‌ನೆಸ್‌ನ ಕಾರಣದಿಂದಾಗಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಗ್ರೇಡ್ ಎ ವಿಭಾಗದಿಂದ ಗ್ರೇಡ್ ಸಿ ಗೆ ಹಿಂಬಡ್ತಿ ಪಡೆದುಕೊಂಡಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಇತ್ತೀಚೆಗಷ್ಟೇ ಟೆಸ್ಟ್ ತಂಡದಿಂದ ಹೊರಬಿದ್ದಿರುವ ಅನುಭವಿಗಳಾದ ಅಜಿಂಕ್ಯಾ ರಹಾನೆ, ಚೇತೇಶ್ವರ್ ಪೂಜಾರ, ವೃದ್ಧೀಮಾನ್ ಸಾಹ ಹಾಗೂ ಇಶಾಂತ್ ಶರ್ಮಾ ಕೂಡ ಹೊಸ ಒಪ್ಪಂದಲ್ಲಿ ಹಿಂಬಡ್ತಿಯನ್ನು ಪಡೆದಿದ್ದಾರೆ.
ಎ+ ಮುಂದುವರಿದ ಮೂವರು ಆಟಗಾರರು: ಇನ್ನು ಈ ಹೊಸ ಒಪ್ಪಂದದಲ್ಲಿ ಅಗ್ರ ಶ್ರೇಣಿಯಾದ ಎ+ ವಿಭಾಗದಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ವೇಗಿ ಜಸ್ಪ್ರೀತ್ ಬೂಮ್ರಾ ಈ ಅಗ್ರ ಶ್ರೇಣಿಉಲ್ಲಿ ಈ ಬಾರಿಯೂ ಮುಂದುವರಿದಿದ್ದಾರೆ. ಇತರ ಯಾವ ಆಟಗಾರರು ಕೂಡ ಈ ಶ್ರೇಣಿಗೆ ಭಡ್ತ ಪಡೆಯಲು ವಿಫಲವಾಗಿದ್ದಾರೆ.
ಹಾರ್ದಿಕ್ ಪಾಂಡ್ಯಗೆ ಭಾರೀ ನಷ್ಟ: ಇನ್ನು ಟೀಮ್ ಇಂಡಿಯಾದ ಎಲ್ಲಾ ಮಾದರಿಯಲ್ಲಿಯೂ ಪ್ರಮುಖ ಆಟಗಾರನಾಗಿದ್ದ ಹಾರ್ದಿಕ್ ಪಾಂಡ್ಯ ಈ ಮೊದಲು ಗ್ರೇಡ್ ಎ ನಲ್ಲಿ ಸ್ಥಾನ ಪಡೆದುಕೊಂಡಿದ್ದರು. ಆದರೆ ಅವರು ಈಗ ಗ್ರೇಡ್ ಸಿಗೆ ಕುಸಿತ ಕಂಡಿದ್ದಾರೆ. ಅಂದರೆ ವಾರ್ಷಿಕವಾಗಿ 5 ಕೋಟಿ ಸಂಭಾವನೆ ಪಡೆಯುತ್ತಿದ್ದ ಪಾಂಡ್ಯ ಇನ್ನು ಮುಂದಿನ ವರ್ಷದ ಒಪ್ಪಂದದವರೆಗೆ 1 ಕೋಟಿ ಪಡೆಯಲಿದ್ದಾರೆ.
ಇನ್ನು ಈ ಒಪ್ಪಂದ ಪಟ್ಟಿಯಲ್ಲಿನ ಮಹತ್ವದ ಬದಲಾವಣೆಯೆಂದರೆ ಅನುಭವಿಗಳಾದ ಅಜಿಂಕ್ಯಾ ರಹಾನೆ ಹಾಗೂ ಚೇತೇಶ್ವರ್ ಪೂಜಾರಾಗೆ ಹಿಂಬಡ್ತಿ. ಭಾರತೀಯ ಕ್ರಿಕೆಟ್ ತಂಡದ ಸ್ವರೂಪದಲ್ಲಿ ಬದಲಾವಣೆ ತರಬೇಕಿ ಎನ್ನುವ ದೃಷ್ಟಿಕೋನದಿಂದಾಗಿ ಈ ಬದಲಾವಣೆಗೆ ಬಿಸಿಸಿಐ ಮುಂದಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಪೂಜಾರ ಹಾಗೂ ರಹಾನೆ ಇಬ್ಬರು ಕೂಡ ಗ್ರೇಡ್ ಎ ವಿಭಾಗದಲ್ಲಿದ್ದರು. ಆದರೆ ಈಗ ಅವರನ್ನು ಗ್ರೇಡ್ ಬಿಗೆ ಹಿಂಬಡ್ತಿ ನೀಡಲಾಗಿದೆ.
ನಾಲ್ಕು ವಿಭಾಗದಲ್ಲಿ ಬಿಸಿಸಿಐ ಕೇಂದರೀಯ ಒಪ್ಪಂದ: ಬಿಸಿಸಿಐ ತನ್ನ ವಾರ್ಷಿಕ ಕೇಂದ್ರೀಯ ಒಪ್ಪಂದವನ್ನು ನಾಲ್ಕು ವಿಭಾಗಗಳಲ್ಲಿ ಮಾಡಿಕೊಳ್ಳುತ್ತದೆ. ಇದರಲ್ಲಿ ಅಗ್ರ ಶ್ರೇಣೀ ಎ+ ಆಗಿದ್ದು ಇದರಲ್ಲಿರುವ ಆಟಗಾರರು 7 ಕೋಟಿ ಮೊತ್ತದ ವಾರ್ಷಿಕ ಸಂಭಾವನೆ ಪಡೆಯುತ್ತಾರೆ. ಎ ಎರಡನೇ ಶ್ರೇಣಿಯಾಗಿದ್ದು ಈ ಒಪ್ಪಂದದಲ್ಲಿ ಬರುವ ಆಟಗಾರರು 5 ಕೋಟಿ ವಾರ್ಷಿಕವಾಗಿ ಬಿಸಿಸಿಐನಿಂದ ಪಡೆದರೆ ಬಿ ಹಾಗೂ ಸಿ ವಿಭಾಗದಲ್ಲಿ ಒಪ್ಪಂದವನ್ನು ಹೊಂದಿರುವ ಆಟಗಾರರು ಕ್ರಮವಾಗಿ 3 ಕೋಟಿ ಹಾಗೂ 1 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ.
ಒಪ್ಪಂದದ ವಿಭಾಗ ಮೌಲ್ಯ ಹಾಗೂ ಆಟಗಾರರ ಪಟ್ಟಿ
ಗ್ರೇಡ್ A+ (7 ಕೋಟಿ ಮೌಲ್ಯ)
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ.
ಗ್ರೇಡ್ ಎ (ರೂ. 5 ಕೋಟಿ ಮೌಲ್ಯ)
ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಕೆಎಲ್ ರಾಹುಲ್, ಮೊಹಮ್ಮದ್ ಶಮಿ ಮತ್ತು ರಿಷಬ್ ಪಂತ್.
ಗ್ರೇಡ್ ಬಿ (3 ಕೋಟಿ ಮೌಲ್ಯ)
ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಶ್ರೇಯಸ್ ಅಯ್ಯರ್, ಮೊಹಮ್ಮದ್ ಸಿರಾಜ್ ಮತ್ತು ಇಶಾಂತ್ ಶರ್ಮಾ.
ಗ್ರೇಡ್ ಸಿ (ರೂ 1 ಕೋಟಿ ಮೌಲ್ಯ)
ಶಿಖರ್ ಧವನ್, ಉಮೇಶ್ ಯಾದವ್, ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಶುಬ್ಮನ್ ಗಿಲ್, ಹನುಮ ವಿಹಾರಿ, ಯುಜ್ವೇಂದ್ರ ಚಹಾಲ್, ಸೂರ್ಯಕುಮಾರ್ ಯಾದವ್, ವೃದ್ಧಿಮಾನ್ ಸಹಾ, ಮಯಾಂಕ್ ಅಗರ್ವಾಲ್ ಮತ್ತು ದೀಪಕ್ ಚಾಹರ್.