ಗಂಗೂಲಿ ಅಥವಾ ಕೊಹ್ಲಿ, ನಾಯಕತ್ವದ ಕುರಿತಾಗಿ ಸುಳ್ಳು ಹೇಳಿದ್ಯಾರು? ಸತ್ಯ ಬಾಯ್ಬಿಟ್ಟ ಚೇತನ್ ಶರ್ಮಾ

ಕಳೆದ ವರ್ಷ ಅತಿ ಹೆಚ್ಚು ವಿವಾದಕ್ಕೀಡಾದ ಕ್ರಿಕೆಟಿಗ ಎಂದರೆ ಅದು ವಿರಾಟ್ ಕೊಹ್ಲಿ. ಹೌದು, ಕಳೆದ ವರ್ಷ ಆರಂಭದಲ್ಲಿ ಭಾರತ ಏಕದಿನ, ಟಿ ಟ್ವೆಂಟಿ ಮತ್ತು ಟೆಸ್ಟ್ ಈ ಮೂರೂ ಮಾದರಿಯ ತಂಡಗಳಿಗೂ ನಾಯಕನಾಗಿದ್ದ ವಿರಾಟ್ ಕೊಹ್ಲಿ ವರ್ಷಾಂತ್ಯಕ್ಕೆ ಕೇವಲ ಭಾರತ ಟೆಸ್ಟ್ ತಂಡದ ನಾಯಕನಾಗಿ ಮಾತ್ರ ಉಳಿದುಕೊಂಡಿದ್ದರು. ಈ ಮೂಲಕ ವಿರಾಟ್ ಕೊಹ್ಲಿ ಕಳೆದ ವರ್ಷ ಭಾರತ ಟಿ ಟ್ವೆಂಟಿ ಹಾಗೂ ಏಕದಿನ ತಂಡದ ನಾಯಕತ್ವವನ್ನು ಕಳೆದುಕೊಂಡು ವಿವಾದದ ಕೇಂದ್ರ ಬಿಂದುವಾಗಿದ್ದರು.
ಮೊದಲಿಗೆ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಸ್ವಇಚ್ಛೆಯಿಂದ ತೀರ್ಮಾನವನ್ನು ಕೈಗೊಂಡ ವಿರಾಟ್ ಕೊಹ್ಲಿ ನಂತರದ ದಿನಗಳಲ್ಲಿ ಭಾರತ ಏಕದಿನ ತಂಡದ ನಾಯಕತ್ವವನ್ನು ಕೂಡ ಕಳೆದುಕೊಂಡರು. ಹೌದು, ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭವಾಗುವುದಕ್ಕೂ ಮುನ್ನ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಕೊಹ್ಲಿ ಘೋಷಣೆ ಹೊರಡಿಸಿದ್ದರು. ನಂತರ ಭಾರತ ಏಕದಿನ ತಂಡದ ನಾಯಕತ್ವದಿಂದ ಕೂಡ ವಿರಾಟ್ ಕೊಹ್ಲಿ ಕೆಳಗಿಳಿಸಲ್ಪಟ್ಟರು. ಈ ವಿಚಾರವಾಗಿಯೇ ದಕ್ಷಿಣ ಆಫ್ರಿಕಾ ಸರಣಿ ಆರಂಭವಾಗುವುದಕ್ಕೂ ಮುನ್ನ ದೊಡ್ಡ ಮಟ್ಟದ ವಿವಾದ ಹುಟ್ಟಿಕೊಂಡಿತ್ತು. ಮೊದಲಿಗೆ ಕೊಹ್ಲಿ ನಾಯಕತ್ವದ ವಿಚಾರವಾಗಿ ಮಾತನಾಡಿದ ಸೌರವ್ ಗಂಗೂಲಿ ವಿರಾಟ್ ಕೊಹ್ಲಿ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿಯಲು ತೀರ್ಮಾನ ಕೈಗೊಂಡಾಗ ಬಿಸಿಸಿಐ ವಿರೋಧ ವ್ಯಕ್ತಪಡಿಸಿತ್ತು ಆದರೆ ಕೊಹ್ಲಿ ತಮ್ಮ ನಿರ್ಧಾರದಲ್ಲಿಯೇ ಮುಂದುವರಿದರು ಎಂದು ಹೇಳಿಕೆಯನ್ನು ನೀಡಿದ್ದರು.
ಆದರೆ ಗಂಗೂಲಿ ಅವರ ಈ ಹೇಳಿಕೆಗಳನ್ನು ತಳ್ಳಿ ಹಾಕಿದ ವಿರಾಟ್ ಕೊಹ್ಲಿ ತಾನು ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿಯುತ್ತೇನೆ ಎಂದು ನಿರ್ಧಾರವನ್ನು ಕೈಗೊಂಡಾಗ ಬಿಸಿಸಿಐ ಯಾವುದೇ ರೀತಿಯ ಪ್ರತಿರೋಧವನ್ನು ತೋರದೇ ತನ್ನ ನಿರ್ಧಾರವನ್ನು ಪ್ರೋತ್ಸಾಹಿಸಿತು ಎಂದರು. ಹಾಗೂ ಏಕದಿನ ನಾಯಕತ್ವದಿಂದ ತೆಗೆದು ಹಾಕುವ ಮುನ್ನ 90 ನಿಮಿಷಗಳ ಹಿಂದಷ್ಟೇ ತನಗೆ ಬಿಸಿಸಿಐ ವಿಷಯವನ್ನು ತಿಳಿಸಿತ್ತು ಎಂಬ ಹೇಳಿಕೆಯನ್ನು ಸಹ ವಿರಾಟ್ ಕೊಹ್ಲಿ ನೀಡಿದರು. ಹೀಗೆ ವಿರಾಟ್ ಕೊಹ್ಲಿ ಮಾಧ್ಯಮಗೋಷ್ಠಿಯಲ್ಲಿ ಈ ಹೇಳಿಕೆಗಳನ್ನು ನೀಡಿದ ನಂತರ ಬಿಸಿಸಿಐ ವಿರುದ್ಧ ಹಾಗೂ ಸೌರವ್ ಗಂಗುಲಿ ವಿರುದ್ಧ ಕೊಹ್ಲಿ ಅಭಿಮಾನಿಗಳು ಕಿಡಿ ಕಾರಿದರು. ಸೌರವ್ ಗಂಗೂಲಿ ಕೊಹ್ಲಿ ಕುರಿತಾಗಿ ಸುಳ್ಳು ಹೇಳಿಕೆಗಳನ್ನು ನೀಡಿದ್ದರು ಎಂದು ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ನಂತರ ಕೊಹ್ಲಿ ಹೇಳಿಕೆಗಳ ಕುರಿತಾಗಿ ನಿಮ್ಮ ಪ್ರತಿಕ್ರಿಯೆ ಏನು ಎಂಬ ಪ್ರಶ್ನೆ ಎದುರಾದಾಗ ಬಿಸಿಸಿಐ ಇದನ್ನು ನಿಭಾಯಿಸಲಿದೆ ಬಿಡಿ ಎಂದು ಗಂಗೂಲಿ ಹೇಳಿದ್ದರು.
ಹೀಗೆ ವಿರಾಟ್ ಕೊಹ್ಲಿ ಮತ್ತು ಸೌರವ್ ಗಂಗೂಲಿ ಈ ಇಬ್ಬರು ನೀಡಿದ ಹೇಳಿಕೆಗಳಲ್ಲಿ ಯಾರು ಹೇಳಿದ್ದು ನಿಜ ಮತ್ತು ಯಾರು ಹೇಳಿದ್ದು ಸುಳ್ಳು ಎಂಬ ಗೊಂದಲ ಹುಟ್ಟಿಕೊಂಡವು. ಈ ಇಬ್ಬರನ್ನು ಹೊರತುಪಡಿಸಿ ಮೂರನೇ ವ್ಯಕ್ತಿ ಈ ಕುರಿತು ಮಾತನಾಡಿದರೆ ಸತ್ಯಾಂಶ ಹೊರಬೀಳಲಿದೆ ಎಂದು ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದರಂತೆ ಇದೀಗ ಭಾರತ ಕ್ರಿಕೆಟ್ ತಂಡದ ಆಯ್ಕೆಗಾರ ಚೇತನ್ ಶರ್ಮಾ ಮಾತನಾಡಿದ್ದು ವಿರಾಟ್ ಕೊಹ್ಲಿ ನಾಯಕತ್ವದ ಕುರಿತಾಗಿ ನಡೆದ ಘಟನೆಗಳ ಕುರಿತು ಈ ಕೆಳಕಂಡಂತೆ ಬಾಯ್ಬಿಟ್ಟಿದ್ದಾರೆ.

ಕೊಹ್ಲಿ ಟಿ ಟ್ವೆಂಟಿ ನಾಯಕತ್ವವನ್ನು ತ್ಯಜಿಸಲು ಮುಂದಾದಾಗ ಎಲ್ಲರೂ ವಿರೋಧ ವ್ಯಕ್ತಪಡಿಸಿದ್ದೆವು ಎಂದ ಚೇತನ್ ಶರ್ಮಾ
ವಿರಾಟ್ ಕೊಹ್ಲಿ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರವನ್ನು ಕೈಗೊಂಡಾಗ ಎಲ್ಲರೂ ಸಭೆಯಲ್ಲಿ ಬೇಡ ಎಂದು ವಿರೋಧವನ್ನು ವ್ಯಕ್ತಪಡಿಸಿದ್ದೆವು ಎಂದು ಚೇತನ್ ಶರ್ಮಾ ಹೇಳಿಕೊಂಡಿದ್ದಾರೆ. ವಿರಾಟ್ ಕೊಹ್ಲಿಯ ಈ ನಿರ್ಧಾರ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಮೇಲೆ ಪ್ರಭಾವ ಬೀಳಲಿದ್ದು ಟೂರ್ನಿ ಮುಗಿದ ನಂತರ ಈ ಕುರಿತು ಚರ್ಚಿಸೋಣ ಇದು ಕೊಹ್ಲಿ ಬಳಿ ಮಾತನಾಡಿದ್ದೆವು ಎಂದು ಚೇತನ್ ಶರ್ಮಾ ಹೇಳಿದ್ದಾರೆ.

ಯಾರ ಮಧ್ಯೆಯೂ ಬಿರುಕಿಲ್ಲ ಎಂದ ಚೇತನ್ ಶರ್ಮಾ
ಇನ್ನು ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಆಟಗಾರರು ಮತ್ತು ಬಿಸಿಸಿಐ ನಡುವೆ ಬಿರುಕಿದೆ ಹಾಗೂ ಕೆಲ ಆಟಗಾರರ ನಡುವೆಯೂ ಸಹ ಬಿರುಕಿದೆ ಎಂಬ ಸುದ್ದಿಗಳು ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಚೇತನ್ ಶರ್ಮಾ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ಯಾವುದೇ ರೀತಿಯ ಬಿರುಕಿಲ್ಲ, ಇಬ್ಬರೂ ಸಹ ಒಟ್ಟಿಗೆ ಊಟ ಮಾಡುತ್ತಾರೆ, ಒಟ್ಟಿಗೆ ಅಭ್ಯಾಸಗಳಲ್ಲಿ ಪಾಲ್ಗೊಳ್ಳುತ್ತಾರೆ ಮತ್ತು ಒಟ್ಟಿಗೆ ಪಂದ್ಯವನ್ನು ಗೆಲ್ಲಲು ಯೋಜನೆಗಳನ್ನು ಮಾಡುತ್ತಾರೆ. ದಯವಿಟ್ಟು ಈ ಎಲ್ಲಾ ವಿವಾದಗಳನ್ನು 2021ಕ್ಕೆ ಬಿಟ್ಟು 2022ರ ಹೊಸ ವರ್ಷದ ಹೊಸ ದಿನದಿಂದ ಟೀಮ್ ಇಂಡಿಯಾವನ್ನು ಬೆಂಬಲಿಸಿ ಎಂದು ಚೇತನ್ ಶರ್ಮಾ ಕೇಳಿಕೊಂಡಿದ್ದಾರೆ. ಹಾಗೂ ವಿರಾಟ್ ಕೊಹ್ಲಿಯನ್ನು ಭಾರತ ಏಕದಿನ ತಂಡದ ನಾಯಕತ್ವದಿಂದ ತೆಗೆದು ಹಾಕುವ ಮುನ್ನ ಆತನಿಗೆ ವಿಷಯವನ್ನು ತಿಳಿಸಿದ್ದೆ ಹಾಗೂ ಇದಕ್ಕೆ ಕೊಹ್ಲಿ ಕೂಡ ಯಾವುದೇ ಪ್ರತಿರೋಧ ವ್ಯಕ್ತಪಡಿಸದೇ ಒಪ್ಪಿಗೆ ನೀಡಿದ್ದರು ಎಂಬ ವಿಷಯವನ್ನು ಸಹ ಚೇತನ್ ಶರ್ಮಾ ಬಿಚ್ಚಿಟ್ಟಿದ್ದಾರೆ.

ಗಂಗೂಲಿ ಪರ ಬ್ಯಾಟ್ ಬೀಸಿದ ಚೇತನ್ ಶರ್ಮಾ
ಟಿ ಟ್ವೆಂಟಿ ನಾಯಕತ್ವ ವಿಚಾರದ ಕುರಿತಾಗಿ ಸೌರವ್ ಗಂಗೂಲಿ ಮತ್ತು ವಿರಾಟ್ ಕೊಹ್ಲಿ ವಿಭಿನ್ನ ಹೇಳಿಕೆಗಳನ್ನು ನೀಡಿದ್ದರು. ಹೀಗಾಗಿ ಇಬ್ಬರಲ್ಲಿ ಯಾರು ಹೇಳಿದ್ದು ನಿಜ ಎಂಬ ಗೊಂದಲ ಹುಟ್ಟಿಕೊಂಡಿತ್ತು. ಇದೀಗ ಈ ವಿಷಯದ ಕುರಿತಾಗಿ ಬಿಸಿಸಿಐ ಆಯ್ಕೆಗಾರ ಚೇತನ್ ಶರ್ಮಾ ನೀಡಿರುವ ಮೇಲಿನ ಹೇಳಿಕೆಗಳನ್ನು ಗಮನಿಸಿದರೆ ಎಲ್ಲಾ ಹೇಳಿಕೆಗಳೂ ಸಹ ಸೌರವ್ ಗಂಗೂಲಿ ಅವರ ಹೇಳಿಕೆಗಳಂತೆಯೇ ಇವೆ. ಕೊಹ್ಲಿ ಟಿ ಟ್ವೆಂಟಿ ನಾಯಕತ್ವದಿಂದ ಕೆಳಗಿಳಿಯಲು ತೀರ್ಮಾನ ಕೈಗೊಂಡಾಗ ಬಿಸಿಸಿಐ ವಿರೋಧವನ್ನು ವ್ಯಕ್ತಪಡಿಸಿತ್ತು ಎಂದು ಗಂಗೂಲಿ ಹೇಳಿದ್ದರು ಅದೇ ರೀತಿ ಚೇತನ್ ಶರ್ಮಾ ಕೂಡ ಹೇಳಿಕೆ ನೀಡಿದ್ದಾರೆ. ಆದರೆ ವಿರಾಟ್ ಕೊಹ್ಲಿ ಮಾತ್ರ ತಾನು ಟಿ ಟ್ವೆಂಟಿ ನಾಯಕತ್ವದಿಂದ ಕೆಳಗಿಳಿಯಲು ತೀರ್ಮಾನ ಕೈಗೊಂಡಾಗ ಬಿಸಿಸಿಐ ವಿರೋಧವನ್ನು ವ್ಯಕ್ತಪಡಿಸಲಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದರು. ಇದೀಗ ಚೇತನ್ ಶರ್ಮಾ ಹೇಳಿಕೆ ಕೊಹ್ಲಿ ಹೇಳಿಕೆಗೆ ವಿರುದ್ಧವಾಗಿದ್ದು ಇದು ಯಾವ ರೀತಿಯ ವಿವಾದಕ್ಕೆ ಕಾರಣವಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications