
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಇನ್ನು ಕೇವಲ ನಾಲ್ಕು ದಿನಗಳು ಮಾತ್ರವೇ ಇದೆ. ಕೊರೊನಾ ವೈರಸ್‌ನಿಂದಾಗಿ ಭಾರತದಲ್ಲಿ ಕ್ರಿಕೆಟ್ ಚಟುವಟಿಕೆ ಸ್ಥಗಿತವಾದ ಬಳಿಕ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿ ಇದಾಗಿದೆ. ಆದರೆ ಕೊರೊನಾ ವೈರಸ್‌ನ ಕಾರಣದಿಂದಾಗಿ ಚೆನ್ನೈನಲ್ಲಿ ನಡೆಯಲಿರುವ ಮೊದಲ ಎರಡು ಪಂದ್ಯಗಳಿಗೆ ಪ್ರೇಕ್ಷಕರಿಗೆ ಅವಕಾಶವಿಲ್ಲ ಎಂದು ಅಧಿಕೃತವಾಗಿ ಹೇಳಿಕೆ ನೀಡಲಾಗಿತ್ತು. ಈ ಮಧ್ಯೆ ಬಿಸಿಸಿಐ ಟೆಸ್ಟ್ ಸರಣಿಗೆ ಪ್ರೇಕ್ಷಕರನ್ನು ಬರಮಾಡಿಕೊಳ್ಳುವ ಪ್ರಯತ್ನದಲ್ಲಿರುವುದು ತಿಳಿದುಬಂದಿದೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯವೂ ಕೂಡ ಚೆನ್ನೈನಲ್ಲಿಯೇ ನಡೆಯಲಿದೆ. ಈ ಪಂದ್ಯಕ್ಕೆ ಪ್ರೇಕ್ಷಕರಿಗೆ ಅವಕಾಶ ನೀಡಲು ಇರುವ ಸಾಧ್ಯತೆಗಳನ್ನು ಬಿಸಿಸಿಐ ಹುಡುಕುತ್ತಿದೆ ಎನ್ನಲಾಗಿದೆ. ಈ ಬಗ್ಗೆ ತಮಿಳುನಾಡು ಕ್ರಿಕೆಟ್ ಅಸೊಸಿಯೇಶನ್‌ನ ಕಾರ್ಯದರ್ಶಿ ಎಸ್ ರಾಮಸ್ವಾಮಿ ಕ್ರಿಕ್‌ಬಜ್‌ಗೆ ಹೇಳಿಕೆ ನೀಡಿದ್ದಾರೆ.
"ನಾವು ಲಿಖಿತವಾಗಿ ಯಾವುದೇ ಅಧಿಕೃತ ಸಂವಹನವನ್ನು ನಡೆಸಿಲ್ಲ. ಆದರೆ ಬಿಸಿಸಿಐನಿಂದ ಭಾನುವಾರ ಕರೆಯನ್ನು ಸ್ವೀಕರಿಸಿದ್ದು ಪ್ರೇಕ್ಷಕರನ್ನು ಕರೆತರಲು ಇರುವ ಸಾಧ್ಯತೆಗಳನ್ನು ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ ಎಂದಿದ್ದಾರೆ" ಎಂದು ಎಸ್ ರಾಮಸ್ವಾಮಿ ಹೇಳಿಕೆ ನೀಡಿದ್ದಾರೆ.
"ನಾವು ನಾಳೆ ಭೇಟಿ ಮಾಡುತ್ತೇವೆ ಹಾಗೂ ಈ ಬಗ್ಗೆ ಯಾವ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ನೋಡುತ್ತೇವೆ. ಮೊದಲ ಮತ್ತು ಎರಡನೇ ಟೆಸ್ಟ್ ಪಂದ್ಯಗಳ ಮಧ್ಯೆ ಬಹಳ ಕಡಿಮೆ ಅವಧಿಯಿದೆ. ನಮ್ಮಲ್ಲಿ ಟಿಕೆಟ್ ಮಾರಾಟಗಾರರು ಇಲ್ಲ. ಟಿಕೆಟ್‌ಗಳನ್ನು ಕೂಡ ನಾವು ಮುದ್ರಿಸಿಲ್ಲ. ಹೀಗಾಗಿ ಇವುಗಳ ಸಾಧ್ಯತೆಗಳ ಬಗ್ಗೆ ನೋಡುತ್ತೇವೆ" ಎಂದು ತಮಿಳುನಾಡು ಕ್ರಿಕೆಟ್ ಅಸೊಸಿಯೇಶನ್‌ನ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಆರಂಬದಲ್ಲಿ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಪ್ರೇಕ್ಷಕರಿಗೆ ಅವಕಾಶ ನೀಡುವುದನ್ನು ನಿರಾಕರಿಸಲಾಗಿತ್ತು. ಸ್ವತಃ ಈ ಬಗ್ಗೆ ಟಿಎನ್‌ಸಿಎ ಅಧಿಕೃತವಾದ ಹೇಳಿಕೆಯನ್ನು ನೀಡಿತ್ತು. ಆದರೆ ಈಗ ಬಿಸಿಸಿಐ ತನ್ನ ಮನಸನ್ನು ಬದಲಿಸಿದ್ದು ಎರಡನೇ ಟೆಸ್ಟ್ ಪಂದ್ಯದಿಂದ ಪ್ರೇಕ್ಷಕರಿಗೆ ಅವಕಾಶ ನೀಡುವ ಬಗ್ಗೆ ಉತ್ಸಾಹ ತೋರಿದೆ.