
ನವದೆಹಲಿ: ಟಿ20 ವಿಶ್ವಕಪ್ ಅನ್ನು ಭಾರತದಲ್ಲಿ ಆಯೋಜಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವ ಬಗ್ಗೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ಯಲ್ಲಿ ಗಡುವು ಕೇಳಿತ್ತು. ವರ್ಚುಯಲ್ ಸಭೆಯ ಮೂಲಕ ಐಸಿಸಿ-ಬಿಸಿಸಿಐ ಸಭೆ ನಡೆಸಿತ್ತು.
ಟಿ20 ವಿಶ್ವಕಪ್ ಭಾರತದಲ್ಲಿ ನಡೆಸುವ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸಲು ಐಸಿಸಿ, ಬಿಸಿಸಿಐಗೆ ಜೂನ್ 28ರ ವರೆಗೆ ನಡುವು ನೀಡಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಅಕ್ಟೋಬರ್-ನವೆಂಬರ್‌ನಲ್ಲಿ ಟಿ20 ವಿಶ್ವಕಪ್ ಭಾರತದಲ್ಲಿ ನಡೆಸಲು ಈ ಮೊದಲು ನಿರ್ಧರಿಸಲಾಗಿತ್ತು. ಆದರೆ ಕೋವಿಡ್-19 ಕಾರಣ ಈಗ ತೊಂದರೆಯಾಗಿದೆ.
ಎಎನ್‌ಎ ಜೊತೆ ಮಾತನಾಡಿದ ಸೌರವ್ ಗಂಗೂಲಿ ಇದೇ ವಿಚಾರವನ್ನು ಖಾತರಿಪಡಿಸಿದ್ದಾರೆ. 'ಟಿ20 ವಿಶ್ವಕಪ್ ಬಗ್ಗೆ ಅಂತಿಮ ನಿರ್ಧಾರ ತಾಳಿ ಐಸಿಸಿಗೆ ತಿಳಿಸಲು ನಮಗೆ ಜೂನ್ 28ರ ವರೆಗೆ ಕಾಲಾವಕಾಶ ಇದೆ' ಎಂದು ಗಂಗೂಲಿ ತಿಳಿಸಿದ್ದಾರೆ.
ಭಾರತದಲ್ಲಿ ಕೋವಿಡ್-19 ದ್ವಿತೀಯ ಅಲೆ ಅರಾಜಕತೆ ಸೃಷ್ಠಿಸಿದೆ. ಕೊರೊನಾ ಕಾರಣದಿಂದಲೇ ನಗದು ಶ್ರೀಮಂತ ಐಪಿಎಲ್ ಟೂರ್ನಿ ಅರ್ಧಕ್ಕೆ ನಿಲ್ಲಿಸಲ್ಪಟ್ಟು, ಈಗ ಯುಎಇಯಲ್ಲಿ ಮುಂದುವರೆಸಲು ನಿರ್ಧರಿಸಲಾಗಿದೆ. ಮುಂದಿನ ತಿಂಗಳು ಕೊರೊನಾ ಸೋಂಕು ಕೊಂಚ ತಗ್ಗುವ ನಿರೀಕ್ಷೆಯಿರುವುದರಿಂದ ಐಸಿಸಿ, ಬಿಸಿಸಿಐಗೆ ಕಾಲಾವಕಾಶ ನೀಡಿದೆ ಎಂದು ತಿಳಿದು ಬಂದಿದೆ.