
ಜನವರಿ 1 ರಂದು ನಡೆದ ಬಿಸಿಸಿಐ ವಿಶೇಷ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. 2023ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗಾಗಿ 20 ಆಟಗಾರರ ಹೆಸರನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದ್ದು, ಅವರ ಬಗ್ಗೆ ವಿಶೇಷ ಗಮನ ಹರಿಸಲು ಸೂಚನೆ ನೀಡಲಾಗಿದೆ.
ಆಟಗಾರರ ಹೊರೆಯನ್ನು ನಿರ್ವಹಣೆ ಮಾಡಲು ಐಪಿಎಲ್ ಫ್ರಾಂಚೈಸಿಗಳ ಜೊತೆ ನಿಕಟವಾಗಿ ಕೆಲಸ ಮಾಡುವಂತೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಗೆ ಕೇಳಿಕೊಂಡಿದೆ. ಪಂದ್ಯಾವಳಿ ಸಮೀಪವಿದ್ದಾಗ ಆಯ್ಕೆಯಲ್ಲಿನ ಗೊಂದಲ ತಪ್ಪಿಸಲು ಬಿಸಿಸಿಐ ಈಗಿನಿಂದಲೇ ತಂಡದ ಆಟಗಾರರನ್ನು ಆಯ್ಕೆ ಮಾಡಿದೆ.
ಬಿಗ್ ಬ್ಯಾಷ್ ಲೀಗ್‌ನಲ್ಲಿ ಒಂದೇ ಓವರ್ನಲ್ಲಿ 28 ರನ್ ಸಿಡಿಸಿದ ಲಕ್ನೋ ಸೂಪರ್ ಜೈಂಟ್ಸ್ ಆಲ್‌ರೌಂಡರ್
ವಿಶ್ವಕಪ್‌ಗಾಗಿ ಶಾರ್ಟ್‌ಲಿಸ್ಟ್ ಮಾಡಿರುವ 20 ಆಟಗಾರರು ನಿಗದಿತವಾಗಿ ವಿವಿಧ ಸರಣಿಗಳಲ್ಲಿ ಆಡಲಿದ್ದಾರೆ. ಮುಂದಿನ ಎರಡು ತಿಂಗಳಲ್ಲಿ ಟೀಂ ಇಂಡಿಯಾ 18 ಪಂದ್ಯಗಳನ್ನು ಆಡಲಿದೆ. ಈ ವರ್ಷದಲ್ಲಿ ಇದೇ ರೀತಿ ಬಿಡುವಿಲ್ಲದ ಕ್ರಿಕೆಟ್ ವೇಳಾಪಟ್ಟಿಯನ್ನು ಹೊಂದಿದೆ. ಅಲ್ಲದೆ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ, ಏಷ್ಯಾಕಪ್ ಕೂಡ ಭಾರತ ತಂಡಕ್ಕೆ ಮುಖ್ಯವಾಗಿದೆ.

ಎನ್‌ಸಿಎಗೆ ಡೇಟಾ ಹಂಚಿಕೊಳ್ಳಲು ಹಿಂದೇಟು
ಹಲವು ಮೂಲಗಳ ಐಪಿಎಲ್ ಫ್ರಾಂಚೈಸಿಗಳು ಎನ್‌ಸಿಎ ಜೊತೆ ಡೇಟಾವನ್ನು ಹಂಚಿಕೊಳ್ಳಲು ಹಿಂದೇಟು ಹಾಕುತ್ತಿವೆ. ಅಲ್ಲದೆ ನಿರ್ದಿಷ್ಟ ಆಟಗಾರರಿಗೆ ವಿಶ್ರಾಂತಿ ನೀಡುವ ವಿಚಾರವನ್ನು ಫ್ರಾಂಚೈಸಿಗಳು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಭಾರತದ ಪ್ರಮುಖ ಆಟಗಾರರೆ ಐಪಿಎಲ್‌ನ ಪ್ರಮುಖ ಆಕರ್ಷಣೆಯಾಗಿದ್ದಾರೆ, ಅವರೆ ಆಡಲಿಲ್ಲ ಎಂದರೆ ಐಪಿಎಲ್ ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳುವ ಅಪಾಯವಿದೆ.
"ಐಪಿಎಲ್‌ನ ಯಾವುದೇ ಪಂದ್ಯಕ್ಕೆ ಆಟಗಾರನಿಗೆ ವಿಶ್ರಾಂತಿ ನೀಡುವಂತೆ ಫ್ರಾಂಚೈಸಿಗಳಿಗೆ ನಿರ್ದೇಶನ ನೀಡುವ ಅಧಿಕಾರ ಬಿಸಿಸಿಐಗೆ ಇಲ್ಲ. ಅವರು ಕೆಲಸದ ಹೊರೆಯನ್ನು ಮೇಲ್ವಿಚಾರಣೆ ಮಾಡಬಹುದು, ಡೇಟಾವನ್ನು ಹಂಚಿಕೊಳ್ಳಲು ಕೇಳಬಹುದು. ಆದರೆ ಐಪಿಎಲ್‌ನಲ್ಲಿ ಭಾಗವಹಿಸದಂತೆ ತಡೆಯಲು ಸಾಧ್ಯವಿಲ್ಲ. ನಿರ್ದಿಷ್ಟ ಸಂಖ್ಯೆಯ ಪಂದ್ಯಗಳಲ್ಲಿ ಆಡಬೇಕು, ಅಥವಾ ಇಂತಿಷ್ಟೇ ಓವರ್ ಬೌಲಿಂಗ್ ಮಾಡಬೇಕು ಎಂದು ಬಿಸಿಸಿಐ ಸೂಚನೆ ನೀಡುವಂತಿಲ್ಲ" ಎಂದು ಫ್ರಾಂಚೈಸಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಮಾರ್ಚ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಬಳಿಕೆ ಬಹು ನಿರೀಕ್ಷಿತ ಐಪಿಎಲ್‌ಗೆ ಚಾಲನೆ ಸಿಗಲಿದೆ. ಐಪಿಎಲ್ ಮುಕ್ತಾಯವಾದ ನಂತರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕನಿಷ್ಠ 2 ಪಂದ್ಯಗಳನ್ನು ಗೆದ್ದರೂ ಭಾರತ ಫೈನಲ್‌ಗೆ ಅರ್ಹತೆ ಪಡೆಯಲಿದ್ದು, ಅದರ ಬಗ್ಗೆ ಕೂಡ ಆಟಗಾರರು ಗಮನ ಹರಿಸಬೇಕಿದೆ.