ಮಾಜಿ ಕ್ರಿಕೆಟಿಗರು, ಸಿಬ್ಬಂದಿಗಳ ಮಾಸಿಕ ಪಿಂಚಣಿ ಹೆಚ್ಚಳ ಮಾಡಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರು ಸೋಮವಾರ ಮಾಜಿ ಕ್ರಿಕೆಟಿಗರು ಮತ್ತು ಪಂದ್ಯದ ಸಿಬ್ಬಂದಿಗಳ ಮಾಸಿಕ ಪಿಂಚಣಿ ಹೆಚ್ಚಳವನ್ನು ಘೋಷಿಸಿದ್ದಾರೆ.
ಜಯ್ ಶಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ಕುರಿತು ಘೋಷಣೆ ಮಾಡಿದ್ದು, ಈ ನಿರ್ಧಾರದಿಂದಾಗಿ ಸುಮಾರು 900 ಸಿಬ್ಬಂದಿಗೆ ಪ್ರಯೋಜನವಾಗಲಿದೆ ಎಂದು ಹೇಳಿದ್ದಾರೆ.
"ಮಾಜಿ ಕ್ರಿಕೆಟಿಗರು (ಪುರುಷ ಮತ್ತು ಮಹಿಳೆಯರು) ಮತ್ತು ಪಂದ್ಯದ ಅಧಿಕಾರಿಗಳ ಮಾಸಿಕ ಪಿಂಚಣಿ ಹೆಚ್ಚಳವನ್ನು ಘೋಷಿಸಲು ನನಗೆ ಅತೀವ ಸಂತೋಷವಾಗಿದೆ. ಸುಮಾರು 900 ಸಿಬ್ಬಂದಿ ಈ ಪ್ರಯೋಜನವನ್ನು ಪಡೆಯುತ್ತಾರೆ ಮತ್ತು ಸುಮಾರು 75% ಸಿಬ್ಬಂದಿಗಳು 100% ಹೆಚ್ಚಳದ ಫಲಾನುಭವಿಗಳಾಗುತ್ತಾರೆ,'' ಎಂದು ಜಯ್ ಶಾ ಟ್ವೀಟ್ ಮಾಡಿದ್ದಾರೆ.
ಆಟಗಾರರು ಕ್ರಿಕೆಟ್‌ನ ಮತ್ತು ಮಂಡಳಿಯ ಜೀವನಾಡಿ
"ನಮ್ಮ ಮಾಜಿ ಕ್ರಿಕೆಟಿಗರ ಆರ್ಥಿಕ ಯೋಗಕ್ಷೇಮವನ್ನು ನೋಡಿಕೊಳ್ಳುವುದು ಬಹಳ ಮುಖ್ಯ. ಆಟಗಾರರು ಕ್ರಿಕೆಟ್‌ನ ಮತ್ತು ಮಂಡಳಿಯ ಜೀವನಾಡಿಯಾಗಿ ಉಳಿಯುತ್ತಾರೆ. ಅವರ ಆಟದ ದಿನಗಳು ಮುಗಿದ ನಂತರ ಅವರ ಜೊತೆಗಿರುವುದು ನಮ್ಮ ಕರ್ತವ್ಯ. ಅಂಪೈರ್‌ಗಳು ಅನ್‌ಸಂಗ್ ಹೀರೋಗಳು ಮತ್ತು ಬಿಸಿಸಿಐ ಅವರ ಕೊಡುಗೆಯನ್ನು ನಿಜವಾಗಿಯೂ ಗೌರವಿಸುತ್ತದೆ," ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಐಪಿಎಲ್ ಮಾಧ್ಯಮ ಹಕ್ಕುಗಳಿಗಾಗಿ ನಡೆದ ಇ-ಹರಾಜಿನ 2ನೇ ದಿನದಂದು ಜಯ್ ಶಾ ಅವರು ಈ ಪ್ರಕಟಣೆ ಹೊರಡಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ 2023 ಸೀಸನ್‌ನಿಂದ 2027ರ ಸೀಸನ್‌ವರೆಗಿನ ಟಿವಿ ಮತ್ತು ಡಿಜಿಟಲ್ ಪ್ರಸಾರ ಹಕ್ಕು ಬರೋಬ್ಬರಿ 44,075 ಕೋಟಿ ರೂಪಾಯಿಗೆ ಹರಾಜಾಗಿದೆ ಎಂದು ಪ್ರಾಥಮಿಕ ವರದಿ ಬಹಿರಂಗಗೊಂಡಿದೆ.

ಗ್ರೌಂಡ್ಸ್‌ಮೆನ್ ಮತ್ತು ಕ್ಯುರೇಟರ್‌ಗಳಿಗೆ 1.25 ಕೋಟಿ ರೂ.
2023-2027ರ ಅವಧಿಯಲ್ಲಿ ನಡೆಯಲಿರುವ 410 ಪಂದ್ಯಗಳಿಗೆ ನಡೆದ ಹರಾಜಿನಲ್ಲಿ ಪ್ಯಾಕೇಜ್ ಎ (TV) ಪ್ರಸಾರದ ಹಕ್ಕು 23,575 ಕೋಟಿ ರೂಪಾಯಿಗೆ ಹರಾಜಾಗಿದೆ. ಕಳೆದ ಬಾರಿ ಸ್ಟಾರ್ ಇಂಡಿಯಾ 2017ರಲ್ಲಿ 16,347 ಕೋಟಿ ರೂ. ನೀಡಿತ್ತು. ಆದರೀಗ ಅದಕ್ಕಿಂತ 7 ಸಾವಿರ ಕೋಟಿಗೂ ಅಧಿಕ ಮೊತ್ತಕ್ಕೆ ಹರಾಜಾಗಿದ್ದು, ಪ್ರತಿ ಪಂದ್ಯಕ್ಕೆ 57.5 ಕೋಟಿ ರೂಪಾಯಿ ದಾಖಲಾಗಿದೆ.
ಕಳೆದ ತಿಂಗಳು ಐಪಿಎಲ್ 2022 ಅನ್ನು ಆಯೋಜಿಸಿದ ಎಲ್ಲಾ ಆರು ಸ್ಥಳಗಳ ಗ್ರೌಂಡ್ಸ್‌ಮೆನ್ ಮತ್ತು ಕ್ಯುರೇಟರ್‌ಗಳಿಗೆ 1.25 ಕೋಟಿ ರೂಪಾಯಿ ಬಹುಮಾನವನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಘೋಷಿಸಿದ್ದರು.
"TATAIPL 2022ರಲ್ಲಿ ನಮಗೆ ಅತ್ಯುತ್ತಮ ಆಟಗಳನ್ನು ನೀಡಿದ ಗ್ರೌಂಡ್ಸ್‌ಮೆನ್ ಮತ್ತು ಕ್ಯುರೇಟರ್‌ಗಳಿಗೆ 1.25 ಕೋಟಿ ರೂ.ಗಳ ಬಹುಮಾನ ಘೋಷಿಸಲು ನನಗೆ ಸಂತೋಷವಾಗಿದೆ. ಈ ಋತುವಿನ 6 ಐಪಿಎಲ್ ಸ್ಥಳಗಳಲ್ಲಿ ನಮ್ಮ ಕ್ಯುರೇಟರ್‌ಗಳು ಮತ್ತು ಗ್ರೌಂಡ್ಸ್‌ಮನ್‌ಗಳು ಉತ್ತಮ ಪಿಚ್ ನಿರ್ಮಾಣ ಮಾಡಿದ್ದರು," ಎಂದು ಜಯ್ ಶಾ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದರು.

ಕಠಿಣ ಪರಿಶ್ರಮಕ್ಕಾಗಿ ಪ್ರತಿಯೊಬ್ಬರಿಗೂ ಧನ್ಯವಾದ
"ನಾವು ಕೆಲವು ಪೈಪೋಟಿಯುಕ್ತ ಆಟಗಳನ್ನು ವೀಕ್ಷಿಸಿದ್ದೇವೆ ಮತ್ತು ಅವರ ಕಠಿಣ ಪರಿಶ್ರಮಕ್ಕಾಗಿ ನಾನು ಪ್ರತಿಯೊಬ್ಬರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಸಿಸಿಐ, ವಾಂಖೆಡೆ, ಡಿವೈ ಪಾಟೀಲ್ ಮತ್ತು ಎಂಸಿಎ, ಪುಣೆ, ಈಡನ್ ಗಾರ್ಡನ್ ಮತ್ತು ನರೇಂದ್ರ ಮೋದಿ ಕ್ರೀಡಾಂಗಣದ ಕ್ಯುರೇಟರ್‌ಗಳು ಮತ್ತು ಗ್ರೌಂಡ್ಸ್‌ಮನ್‌ಗಳಿಗೆ ತಲಾ 12.5 ಲಕ್ಷ," ಎಂದು ಘೋಷಿಸಿದ್ದರು.
ಐಪಿಎಲ್ 2022ರ ಲೀಗ್ ಹಂತದ ಪಂದ್ಯಗಳನ್ನು ಮಹಾರಾಷ್ಟ್ರದ ನಗರಗಳಲ್ಲಿ ಆಡಿಸಲಾಯಿತು. ಕ್ವಾಲಿಫೈಯರ್ 1 ಮತ್ತು ಎಲಿಮಿನೇಟರ್ ಪಂದ್ಯಗಳು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದರೆ, ಕ್ವಾಲಿಫೈಯರ್ 2 ಮತ್ತು ಫೈನಲ್ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದವು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications