BBCI: ಐಪಿಎಲ್ 2026 ಉದ್ಘಾಟನಾ ಪಂದ್ಯಕ್ಕೂ ಮುನ್ನ 10 ಫ್ರಾಂಚೈಸಿಗಳಿಗೆ ಬಿಸಿಸಿಐ ಕಟ್ಟುನಿಟ್ಟಿನ ಸೂಚನೆ
BBCI New Rules: ಐಪಿಎಲ್ 19ನೇ ಆವೃತ್ತಿಯು ಮಾರ್ಚ್ 28 ರಂದು ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಇದಕ್ಕೂ ಮುನ್ನ ಬಿಸಿಸಿಐ ಎಲ್ಲಾ ಫ್ರಾಂಚೈಸಿಗಳಿಗೆ ಕಟ್ಟುನಿಟ್ಟಾದ ನಿಯಮಗಳನ್ನ ಹೊರಡಿದೆ. ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಮಾರ್ಚ್ 28 ರಂದು ನಡೆಯಲಿರುವ ಉದ್ಘಾಟನಾ ಪಂದ್ಯವು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಕಳೆದ ವರ್ಷ ತನ್ನ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದ ಆರ್‌ಸಿಬಿ ತಂಡವು, ಈ ಬಾರಿಯೂ ಅದೇ ರೀತಿಯ ಪ್ರಾಬಲ್ಯ ಸಾಧಿಸಿ ಎರಡನೇ ಬಾರಿಗೆ ಚಾಂಪಿಯನ್ ಆಗುವ ಗುರಿ ಹೊಂದಿದೆ.

ಇನ್ನೂ ಟೂರ್ನಿ ಆರಂಭಕ್ಕೂ ಮುನ್ನವೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಎಲ್ಲಾ 10 ಫ್ರಾಂಚೈಸಿಗಳಿಗೆ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಬಾರಿ ಬಿಸಿಸಿಐ ಶಿಸ್ತುಕ್ರಮ, ಆಟಗಾರರ ಲಭ್ಯತೆ ಮತ್ತು ಮೈದಾನದಲ್ಲಿನ ಆಟಗಾರರ ನಡವಳಿಕೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇದು ಪಂದ್ಯದ ಗುಣಮಟ್ಟವನ್ನು ಹೆಚ್ಚಿಸುವ ನಿರೀಕ್ಷೆಯಿದೆ.
ಪಂದ್ಯದ ದಿನ ಅಭ್ಯಾಸಕ್ಕೆ ಬ್ರೇಕ್
* ಲಭ್ಯವಾಗಿರುವ ಮಾಹಿತಿ ಪ್ರಕಾರ, ಈ ಬಾರಿಯ ಐಪಿಎಲ್‌ನಲ್ಲಿ ಬಿಸಿಸಿಐ ಒಂದು ಮಹತ್ವದ ನಿರ್ದೇಶನವನ್ನು ನೀಡಿದೆ. ಅದರಂತೆಯೇ ಯಾವುದೇ ತಂಡವು ಪಂದ್ಯ ನಡೆಯುವ ದಿನದಂದು ಮೈದಾನದಲ್ಲಿ ಅಭ್ಯಾಸ ನಡೆಸುವಂತಿಲ್ಲ.
ಈ ನಿಯಮದ ಹಿಂದಿನ ಮುಖ್ಯ ಉದ್ದೇಶಗಳು
* ಪಿಚ್ ಸಂರಕ್ಷಣೆ: ಪಂದ್ಯದ ದಿನದಂದು ಅಭ್ಯಾಸ ನಡೆಸುವುದರಿಂದ ಪಿಚ್‌ನ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ, ಮುಖ್ಯ ಪಂದ್ಯಕ್ಕಾಗಿ ಪಿಚ್ ಮತ್ತು ವಿಕೆಟ್ ಅನ್ನು ಸುರಕ್ಷಿತವಾಗಿಡಲು ಈ ಕ್ರಮ ಕೈಗೊಳ್ಳಲಾಗಿದೆ. ಪಿಚ್ ಉತ್ತಮ ಸ್ಥಿತಿಯಲ್ಲಿದ್ದರೆ ಮಾತ್ರ ಪಂದ್ಯವು ರೋಚಕವಾಗಿರಲು ಸಾಧ್ಯ. ಅಭ್ಯಾಸದ ಅವಧಿಯಲ್ಲಿ ಪಿಚ್ ಹಾಳಾಗುವುದನ್ನು ತಪ್ಪಿಸಲು ಬಿಸಿಸಿಐ ಈ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಈ ಹೊಸ ನಿಯಮದಿಂದಾಗಿ ಆಟಗಾರರು ಪಂದ್ಯದ ಹಿಂದಿನ ದಿನವೇ ತಮ್ಮ ಸಂಪೂರ್ಣ ಅಭ್ಯಾಸವನ್ನು ಮುಗಿಸಿಕೊಳ್ಳಬೇಕಾಗುತ್ತದೆ. ಪಂದ್ಯದ ದಿನದಂದು ಕೇವಲ 'ವಾರ್ಮ್-ಅಪ್'ಗೆ ಮಾತ್ರ ಅವಕಾಶವಿರಬಹುದು ಎಂದು ಹೇಳಲಾಗುತ್ತಿದೆ.
ಮುಂಬೈ ವಾಂಖೆಡೆಯಲ್ಲಿ ಅಭ್ಯಾಸದ ನಿಯಮಗಳು
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುವ ತಂಡಗಳಿಗಾಗಿ ಬಿಸಿಸಿಐ ವಿಶೇಷ ಸೂಚನೆಗಳನ್ನು ನೀಡಿದೆ. ಪ್ರತಿಯೊಂದು ತಂಡಕ್ಕೂ ಅಭ್ಯಾಸದ ನಡೆಸುವ ಸ್ಥಳದಲ್ಲಿ ಎರಡು ನೆಟ್ಸ್‌ಗಳನ್ನು ಹಂಚಿಕೆ ಮಾಡಲಾಗುತ್ತದೆ. ದೊಡ್ಡ ಹೊಡೆತಗಳ ಅಭ್ಯಾಸಕ್ಕಾಗಿ ಮುಖ್ಯ ಮೈದಾನದ ಪಕ್ಕದಲ್ಲಿರುವ ಸೈಡ್ ವಿಕೆಟ್ ಅನ್ನು ಬಳಸಲು ಅವಕಾಶ ನೀಡಲಾಗುತ್ತದೆ.
ಒಂದು ವೇಳೆ ಎರಡು ತಂಡಗಳು ಒಂದೇ ಸಮಯದಲ್ಲಿ ಒಂದೇ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿದ್ದರೆ, ಆಗ ಪ್ರತಿ ತಂಡಕ್ಕೂ ತಲಾ ಎರಡು ವಿಕೆಟ್‌ಗಳನ್ನು ಅಭ್ಯಾಸಕ್ಕಾಗಿ ನೀಡಲಾಗುತ್ತದೆ. ಈ ವ್ಯವಸ್ಥೆಯು ಆಟಗಾರರು ಪಂದ್ಯದ ಮೊದಲು ಮೈದಾನದ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಮತ್ತು ತಮ್ಮ ಬ್ಯಾಟಿಂಗ್ ಶಕ್ತಿಯನ್ನು ಪರೀಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ. ವಿಶೇಷವಾಗಿ ವಾಂಖೆಡೆಯಂತಹ ಮೈದಾನದಲ್ಲಿ 'ರೇಂಜ್-ಹಿಟ್ಟಿಂಗ್' (ಬಿಗ್ ಶಾಟ್ ಹೊಡೆಯುವ) ಅಭ್ಯಾಸವು ಬ್ಯಾಟರ್‌ಗಳಿಗೆ ಹೆಚ್ಚು ಸಹಕಾರಿಯಾಗಲಿದೆ.
ಅಭ್ಯಾಸ, ಫಿಟ್ನೆಸ್ ಪರೀಕ್ಷೆ ಸಂಬಂಧ ಕಠಿಣ ನಿಯಮಗಳು
ಎದುರಾಳಿ ತಂಡಕ್ಕೆ ನಿಗದಿಪಡಿಸಿದ ಅಭ್ಯಾಸದ ಸ್ಥಳಗಳು ಖಾಲಿ ಇದ್ದರೂ ಸಹ, ಅದನ್ನು ಬಳಸಲು ಇತರ ತಂಡಗಳಿಗೆ ಕಟ್ಟುನಿಟ್ಟಿನ ನಿಷೇಧ ಹೇರಲಾಗಿದೆ. ಈ ಮೂಲಕ ಪಿಚ್ ಬಳಕೆಯನ್ನು ನಿಯಂತ್ರಿಸಲು ಮತ್ತು ಎರಡೂ ತಂಡಗಳಿಗೆ ಸಮಾನ ಅವಕಾಶ ನೀಡಲು ಉದ್ದೇಶಿಸಲಾಗಿದೆ.
ಫಿಟ್ನೆಸ್ ಪರೀಕ್ಷೆಗೆ ನಿರ್ಬಂಧ
ಪಂದ್ಯ ನಡೆಯುವ ದಿನದಂದು ಯಾವುದೇ ತಂಡವು ತನ್ನ ಆಟಗಾರರಿಗೆ ಫಿಟ್ನೆಸ್ ಪರೀಕ್ಷೆಗಳನ್ನು ನಡೆಸುವಂತಿಲ್ಲ. ಆಟಗಾರರ ದೈಹಿಕ ಸಾಮರ್ಥ್ಯದ ಪರೀಕ್ಷೆಗಳನ್ನು ಪಂದ್ಯದ ಹಿಂದಿನ ದಿನವೇ ಪೂರ್ಣಗೊಳಿಸಬೇಕಾಗುತ್ತದೆ. ಈ ನಿಯಮಗಳ ಮುಖ್ಯ ಉದ್ದೇಶವೆಂದರೆ ಪಂದ್ಯದ ದಿನದಂದು ಮೈದಾನದ ಮೇಲೆ ಹೆಚ್ಚಿನ ಒತ್ತಡ ಬೀಳದಂತೆ ನೋಡುವುದು ಮತ್ತು ಆಟಗಾರರು ಕೇವಲ ಪಂದ್ಯದ ಮೇಲೆ ಮಾತ್ರ ಗಮನಹರಿಸುವಂತೆ ಮಾಡುವುದು.
ಆಟಗಾರರ ಕುಟುಂಬದ ಸದಸ್ಯರಿಗೆ ಮಾರ್ಗಸೂಚಿಗಳು
* ಪಂದ್ಯದ ದಿನದಂದು ಅಥವಾ ಅಭ್ಯಾಸದ ಸಮಯದಲ್ಲಿ ತಂಡದ ಸದಸ್ಯರು ಮತ್ತು ಸಂಬಂಧಪಟ್ಟವರು ಮಾತ್ರ ತಂಡದ ಬಸ್‌ನಲ್ಲಿ ಕ್ರೀಡಾಂಗಣಕ್ಕೆ ಪ್ರಯಾಣಿಸಬೇಕು.
* ಅಭ್ಯಾಸದ ಅವಧಿಯಲ್ಲಿ ಆಟಗಾರರ ಕುಟುಂಬದ ಸದಸ್ಯರು ಅಥವಾ ಸ್ನೇಹಿತರಿಗೆ ಆಟದ ಮೈದಾನದೊಳಗೆ ಪ್ರವೇಶಿಸಲು ಅನುಮತಿ ಇರುವುದಿಲ್ಲ.
* ಕುಟುಂಬದವರು ಅಭ್ಯಾಸವನ್ನು ವೀಕ್ಷಿಸಬೇಕೆಂದಿದ್ದರೆ, ಅವರಿಗೆಂದೇ ನಿಗದಿಪಡಿಸಲಾದ ಹಾಸ್ಪಿಟಾಲಿಟಿ ಏರಿಯಾ ಅಥವಾ ಗ್ಯಾಲರಿಗಳಿಂದ ಮಾತ್ರ ವೀಕ್ಷಿಸಬಹುದಾಗಿದೆ. ಈ ನಿಯಮಗಳ ಮುಖ್ಯ ಉದ್ದೇಶವೆಂದರೆ ಆಟಗಾರರು ಅಭ್ಯಾಸದ ಸಮಯದಲ್ಲಿ ಸಂಪೂರ್ಣವಾಗಿ ಆಟದ ಮೇಲೆ ಗಮನಹರಿಸುವಂತೆ ಮಾಡುವುದು ಮತ್ತು ಮೈದಾನದ ಶಿಸ್ತನ್ನು ಕಾಪಾಡುವುದು.
ಡ್ರೆಸ್ ಕೋಡ್, ಆರೆಂಜ್, ಪರ್ಪಲ್ ಕ್ಯಾಪ್ ನಿಯಮಗಳು
* ಪ್ರತಿಯೊಬ್ಬ ಆಟಗಾರನು ಮಂಡಳಿಯು ನಿಗದಿಪಡಿಸಿರುವ ಉಡುಪಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
* ಪಂದ್ಯ ಮುಗಿದ ನಂತರ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆರೆಂಜ್ ಕ್ಯಾಪ್ (ಅತಿ ಹೆಚ್ಚು ರನ್ ಗಳಿಸಿದವರು) ಮತ್ತು ಪರ್ಪಲ್ ಕ್ಯಾಪ್ (ಅತಿ ಹೆಚ್ಚು ವಿಕೆಟ್ ಪಡೆದವರು) ವಿಜೇತರು, ಸೂಚಿಸಿದ ರೀತಿಯಲ್ಲೇ ಆ ಕ್ಯಾಪ್‌ಗಳನ್ನು ಧರಿಸುವುದು ಕಡ್ಡಾಯವಾಗಿದೆ. ಈ ನಿಯಮಗಳು ಐಪಿಎಲ್‌ನ ಬ್ರ್ಯಾಂಡ್ ಮೌಲ್ಯ ಮತ್ತು ಕ್ರೀಡೆಯ ಘನತೆಯನ್ನು ಎತ್ತಿಹಿಡಿಯುವ ಉದ್ದೇಶವನ್ನು ಹೊಂದಿವೆ. ಆಟಗಾರರು ಮೈದಾನದಲ್ಲಿ ಮತ್ತು ಸಮಾರಂಭಗಳಲ್ಲಿ ವೃತ್ತಿಪರತೆಯನ್ನು ತೋರಲು ಬಿಸಿಸಿಐ ಈ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿದುಬಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications