ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಶೀಘ್ರದಲ್ಲೇ ಹೊಸ ಕಾರ್ಯದರ್ಶಿ ನೇಮಕಗೊಳ್ಳಲಿದ್ದಾರೆ. ಜಯ್ ಶಾ ಅವರು ಡಿಸೆಂಬರ್ 1 ರಿಂದ ಬಿಸಿಸಿಐ ಕಾರ್ಯದರ್ಶಿ ಹುದ್ದೆಯನ್ನು ತೊರೆಯಲಿದ್ದಾರೆ. ಅದೇ ದಿನದಂದು ಅವರು ಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಹೀಗಿರುವಾಗ ಅವರ ಸ್ಥಾನಕ್ಕೆ ಬಿಸಿಸಿಐ ನೂತನ ಕಾರ್ಯದರ್ಶಿ ಯಾರಾಗಲಿದ್ದಾರೆ ಎಂಬುದು ಬಹಿರಂಗವಾಗಿದೆ.
ನಾಲ್ವರ ಪ್ರಮುಖರ ಹೆಸರುಗಳು ಬಿಸಿಸಿಐ ಕಾರ್ಯದರ್ಶಿ ಹುದ್ದೆಗೆ ರೇಸ್‌ನಲ್ಲಿದ್ದವು. ಇದರಲ್ಲಿ ಬಿಸಿಸಿಐ ಖಜಾಂಚಿ ಆಶಿಶ್ ಶೆಲಾರ್, ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ)ಯ ಅಧ್ಯಕ್ಷ ರೋಹನ್ ಜೇಟ್ಲಿ, ಜಂಟಿ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮತ್ತು ಗುಜರಾತ್ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಅನಿಲ್ ಪಟೇಲ್ ಅವರ ಹೆಸರುಗಳು ಸೇರಿವೆ. ಆದರೆ ಈ ಪೈಕಿ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರೋಹನ್ ಜೇಟ್ಲಿ ಅವರು ಬಿಸಿಸಿಐ ಕಾರ್ಯದರ್ಶಿಯಾಗುವ ಸಾಧ್ಯತೆ ಹೆಚ್ಚಿದೆ.

ವರದಿಗಳ ಪ್ರಕಾರ, ಜಯ್ ಶಾ ಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ರೋಹನ್ ಜೇಟ್ಲಿ ಅವರು ಬಿಸಿಸಿಐನ ಹೊಸ ಕಾರ್ಯದರ್ಶಿಯಾಗಬಹುದು. ಬಿಸಿಸಿಐ ಹೊಸ ಕಾರ್ಯದರ್ಶಿ ರೇಸ್‌ನಲ್ಲಿ ರೋಹನ್ ಮುಂಚೂಣಿಯಲ್ಲಿದ್ದಾರೆ. ರೋಹನ್ ಬಿಸಿಸಿಐ ಕಾರ್ಯದರ್ಶಿಯಾದರೆ ಹಾಲಿ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಅವರೊಂದಿಗೆ ಕಾರ್ಯನಿರ್ವಹಿಸಲಿದ್ದಾರೆ. ರೋಜರ್ ಬಿನ್ನಿ ಸೇರಿದಂತೆ ಇತರ ಉನ್ನತ ಬಿಸಿಸಿಐ ಅಧಿಕಾರಿಗಳು ತಮ್ಮ ಪಾತ್ರಗಳಲ್ಲಿ ಮುಂದುವರಿಯಲಿದ್ದಾರೆ. ಏಕೆಂದರೆ ಅವರು ಅಧಿಕಾರವಧಿ ಇನ್ನೂ ಒಂದು ವರ್ಷ ಉಳಿದಿದೆ.
ರೋಹನ್ ಜೇಟ್ಲಿ ವೃತ್ತಿಯಲ್ಲಿ ವಕೀಲ. ಅಲ್ಲದೆ, ಅವರು ಪ್ರಸ್ತುತ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ರೋಹನ್ ಅವರು ದಿವಂಗತ ಬಿಜೆಪಿಯ ಹಿರಿಯ ನಾಯಕ ಅರುಣ್ ಜೇಟ್ಲಿ ಅವರ ಪುತ್ರ. ದೆಹಲಿ ಕ್ರಿಕೆಟ್ ಅಭಿವೃದ್ದಿಗೆ ಅವರ ಕೊಡುಗೆ ಅಪಾರವಾಗಿದೆ. ಡಿಡಿಸಿಎ ಅಧ್ಯಕ್ಷರಾಗಿ ರೋಹನ್ ಜೇಟ್ಲಿ ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡಿದ್ದಾರೆ. ಅವರಿಗೆ ಕ್ರೀಡಾ ನಿರ್ವಾಹಕರಾಗಿ ಬಹಳ ಅನುಭವಿದೆ. ಜೊತೆಗೆ ಡೆಲ್ಲಿ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಆಯೋಜಿಸುವ ಮೂಲಕ ಅವರು ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಇದೀಗ ಅವರು ಬಿಸಿಸಿಐ ಕಾರ್ಯದರ್ಶಿಯಾಗುವ ಮೂಲಕ ಮತ್ತಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಅಧ್ಯಕ್ಷರಾಗಿ ಜಯ್ ಶಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆಗಸ್ಟ್ 27 ರಂದು ಅವರು ಐಸಿಸಿ ಅಧ್ಯಕ್ಷರ ಹುದ್ದೆಗೆ ಆಯ್ಕೆಯಾಗಿದ್ದಾರೆ. ಆದರೆ ಅವರು ಡಿಸೆಂಬರ್ 1 ರಿಂದ ತಮ್ಮ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ. ಜಯ್ ಶಾ ಐಸಿಸಿ ಅಧ್ಯಕ್ಷರಾದ ಐದನೇ ಭಾರತೀಯರಾಗಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಅವರು ಕ್ರಿಕೆಟ್ ಮಟ್ಟವನ್ನು ಎಷ್ಟು ಎತ್ತರಕ್ಕೆ ಏರಿಸಬಹುದು ಎಂಬುದು ಈಗ ಕುತೂಹಲಕಾರಿಯಾಗಿದೆ.