ಇತ್ತೀಚಿನ ಬೆಳವಣಿಗೆಯಲ್ಲಿ, ಮತ್ತೊಂದು ಅವಧಿಗೆ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಮುಂದುವರಿಯುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ರಾಹುಲ್ ದ್ರಾವಿಡ್ ಅವರ ಬಳಿ ಪ್ರಸ್ತಾಪಿಸಿದೆ ಎಂದು ತಿಳಿದುಬಂದಿದೆ.
ಬಿಸಿಸಿಐ ಕಳೆದ ವಾರ ರಾಹುಲ್ ದ್ರಾವಿಡ್ ಅವರನ್ನು ಸಂಪರ್ಕಿಸಿ, ನಿರ್ದಿಷ್ಟ ಅಂತಿಮ ದಿನಾಂಕವನ್ನು ಉಲ್ಲೇಖಿಸದೆ ವಿಸ್ತರಣೆಯ ಆಫರ್ ಅನ್ನು ನೀಡಿದೆ.

ಆದರೆ, ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಈ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದಾರೆಯೇ? ಎಂಬುದು ಇನ್ನೂ ದೃಢಪಟ್ಟಿಲ್ಲ. ರಾಹುಲ್ ದ್ರಾವಿಡ್ ಅವರೇ ಮುಖ್ಯ ಕೋಚ್ ಅಗಿ ಮುಂದುವರೆಯಲು ಬಿಸಿಸಿಐ ಬಯಸುತ್ತಿದೆ.
ಇದಕ್ಕೆ ಮುಖ್ಯ ಕಾರಣವೆಂದರೆ, ಅವರು ಕಳೆದ ಎರಡು ವರ್ಷಗಳಲ್ಲಿ ಸ್ಥಾಪಿಸಿದ ಟೀಮ್ ಇಂಡಿಯಾ ರಚನೆಯನ್ನು ಯಥಾಸ್ಥಿತಿಯಲ್ಲಿ ಕಾಪಾಡುವುದು. ಹೊಸ ಮುಖ್ಯ ಕೋಚ್ ಬಂದರೆ, ಅದು ರಾಹುಲ್ ದ್ರಾವಿಡ್ ಜಾರಿಗೆ ತಂದ ಯೋಜನೆಗಳಿಗೆ ಅಡ್ಡಿಪಡಿಸಬಹುದು.
ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಪ್ರಸ್ತಾಪವನ್ನು ಒಪ್ಪಿಕೊಂಡರೆ, ಈ ವಿಸ್ತೃತ ಪಾತ್ರದಲ್ಲಿ ಅವರ ಮೊದಲ ನಿಯೋಜನೆಯು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ ತಂಡವನ್ನು ಮುನ್ನಡೆಸುವುದಾಗಿದೆ. ಈ ಪ್ರವಾಸವು ತಲಾ ಮೂರು ಟಿ20 ಮತ್ತು ಮೂರು ಏಕದಿನ ಪಂದ್ಯಗಳನ್ನು ಒಳಗೊಂಡಿದೆ. ಆ ಬಳಿಕ ಸೆಂಚುರಿಯನ್ ಮತ್ತು ಕೇಪ್ ಟೌನ್‌ನಲ್ಲಿ ಎರಡು ಟೆಸ್ಟ್ ಪಂದ್ಯಗಳು ನಡೆಯಲಿವೆ.
2021ರಲ್ಲಿ ರವಿಶಾಸ್ತ್ರಿ ನಂತರ ಮುಖ್ಯ ಕೋಚ್ ಜವಾಬ್ದಾರಿ ವಹಿಸಿಕೊಂಡ ರಾಹುಲ್ ದ್ರಾವಿಡ್ ಅವರ ಆರಂಭಿಕ ಎರಡು ವರ್ಷಗಳ ಅವಧಿಯು 2023ರ ಏಕದಿನ ವಿಶ್ವಕಪ್‌ನೊಂದಿಗೆ ಕೊನೆಗೊಂಡಿತು. ಈ ವೇಳೆ ಭಾರತ ತಂಡ ರನ್ನರ್-ಅಪ್ ಆಗಿ ಅಭಿಯಾನ ಮುಗಿಸಿತು.
ಮುಖ್ಯ ಕೋಚ್ ಪಾತ್ರದಲ್ಲಿ ರಾಹುಲ್ ದ್ರಾವಿಡ್ ಮುಂದುವರಿದರೆ, 2021ರಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ ಅದೇ ಸಹಾಯಕ ಕೋಚಿಂಗ್ ಸಿಬ್ಬಂದಿಯನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಅವರ ಅಧಿಕಾರಾವಧಿಯಲ್ಲಿ ವಿಕ್ರಮ್ ರಾಥೋರ್ ಭಾರತ ತಂಡದ ಬ್ಯಾಟಿಂಗ್ ಕೋಚ್ ಆಗಿದ್ದರು, ಪಾರಸ್ ಮಾಂಬ್ರೆ ಬೌಲಿಂಗ್ ಕೋಚ್ ಆಗಿದ್ದರು ಮತ್ತು ಟಿ ದಿಲೀಪ್ ಫೀಲ್ಡಿಂಗ್ ಕೋಚ್ ಆಗಿದ್ದರು.
ಇತ್ತೀಚಿನ ಏಕದಿನ ವಿಶ್ವಕಪ್ ಫೈನಲ್‌ನ ನಂತರ, ರಾಹುಲ್ ದ್ರಾವಿಡ್ ಎಲ್ಲಾ ಸ್ವರೂಪಗಳಲ್ಲಿ ಭಾರತದ ಪ್ರಾಬಲ್ಯದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಆದರೆ ಐಸಿಸಿ ಟ್ರೋಫಿಯನ್ನು ಗೆಲ್ಲದಿರುವ ಬಗ್ಗೆ ನಿರಾಶೆಗೊಂಡರು.
ಮುಖ್ಯ ಕೋಚ್ ಆಗಿ ಮುಂದುವರಿಯುವ ಬಗ್ಗೆ ಪ್ರಶ್ನಿಸಿದಾಗ, ಅದರ ಬಗ್ಗೆ ಯೋಚಿಸಲು ಸಮಯವಿರಲಿಲ್ಲ. ಏಕೆಂದರೆ, ತಮ್ಮ ಗಮನವು ಕೇವಲ ವಿಶ್ವಕಪ್ ಅಭಿಯಾನದ ಮೇಲಿತ್ತು ಎಂದು ಹೇಳಿದ್ದರು.
"ನಾನು ಭಾರತ ತಂಡದಲ್ಲಿ ಕೋಚ್ ಭವಿಷ್ಯದ ಬಗ್ಗೆ ಯೋಚಿಸಿಲ್ಲ. ಈ ಬಗ್ಗೆ ಯೋಚಿಸಲು ನನಗೆ ಸಮಯವಿರಲಿಲ್ಲ. ನನಗೆ ಯೋಚಿಸಲು ಸಮಯ ಸಿಕ್ಕಾಗ ನಾನು ಮಾಡುತ್ತೇನೆ. ಆದರೆ ಈ ಸಮಯದಲ್ಲಿ, ನಾನು ಸಂಪೂರ್ಣವಾಗಿ ಈ ಅಭಿಯಾನದ ಮೇಲೆ ಕೇಂದ್ರೀಕರಿಸಿದ್ದೆ," ಎಂದು ರಾಹುಲ್ ದ್ರಾವಿಡ್ ತಿಳಿಸಿದ್ದರು.