ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲೆ ಹತ್ಯೆ ಖಂಡಿಸಿದ್ದ ಭಾರತದ ಅನೇಕ ನಾಯಕರು ಹಾಗೂ ಸಂಸ್ಥೆಗಳು ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮುಷ್ತಾಫಿಜುರ್ ರಹಮಾನ್ ಅವರನ್ನು ಕೈ ಬಿಡುವಂತೆ ಸೂಚಿಸಿದ್ದವು. ಆದರೆ ಈಗ ಬಿಸಿಸಿಐ ಈ ಬಗ್ಗೆ ಬಿಗ್ ಅಪ್‌ಡೇಟ್ ನೀಡಿದೆ. ಕೆಕೆಆರ್ ತಂಡಕ್ಕೆ ಬಿಸಿಸಿಐ ಬಾಂಗ್ಲಾದೇಶದ ಆಟಗಾರ ಮುಷ್ತಾಫಿಜುರ್ ರಹಮಾನ್ ಅವರನ್ನು ತಂಡದಿಂದ ಕೈ ಬಿಡುವಂತೆ ಸೂಚಿಸಿದೆ.
ಮುಷ್ತಾಫಿಜುರ್ ರಹಮಾನ್ ಅವರು ಐಪಿಎಲ್‌ನಲ್ಲಿ ಆಡಬಾರದು ಎಂಬ ಕೂಗು ಹೆಚ್ಚಾದ ಬೆನ್ನಲ್ಲೆ, ಬಿಸಿಸಿಐ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ. ಈ ಬಗ್ಗೆ ಬಿಸಿಸಿಐ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಸೂಚನೆಯನ್ನು ನೀಡಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಸುದ್ದಿ ಸಂಸ್ಥೆಗೆ ಎಎನ್‌ಐಗೆ ಧೃಡಪಡಿಸಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಮುಷ್ತಾಫಿಜುರ್ ರಹಮಾನ್ ಭಾಗವಹಿಸುತ್ತಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ.

ಇತ್ತೀಚಿನ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು, ಕೆಕೆಆರ್ ತಂಡಕ್ಕೆ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಂಡದಿಂದ ಕೈ ಬಿಡುವಂತೆ ಬಿಸಿಸಿಐ ತಿಳಿಸಿದೆ. ಕೆಕೆಆರ್ ಫ್ರಾಂಚೈಸಿ ಬಯಸಿದಲ್ಲಿ ಬೇರೆ ಆಟಗಾರರಿಗೆ ಬದಲಿ ಆಟಗಾರನಾಗಿ ಆಡುವ ಅವಕಾಶವನ್ನು ಬಿಸಿಸಿಐ ಕಲ್ಪಿಸಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿದ್ದಾರೆ.
ಕೆಲ ತಿಂಗಳುಗಳಲ್ಲಿ ಬಾಂಗ್ಲಾದೇಶದಲ್ಲಿ ಅಲ್ಪ ಸಂಖ್ಯಾತ ಹಿಂದೂಗಳ ದಾಳಿಯನ್ನು ಖಂಡಿಸಿ ಭಾರತದಲ್ಲಿ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಗಿತ್ತು. ಈ ಬೆನ್ನಲ್ಲೆ ಬಿಜೆಪಿ ಮತ್ತು ಶಿವಸೇನಾ ನಾಯಕರು ಐಪಿಎಲ್‌ನಲ್ಲಿ ಬಾಂಗ್ಲಾದೇಶಿ ಆಟಗಾರರನ್ನು ಸೇರಿಸಿಕೊಂಡಿದ್ದನ್ನು ಪ್ರಶ್ನಿಸಿದ್ದರು. ಕೋಲ್ಕತ್ತ ನೈಟ್ ರೈಡರ್ಸ್ ಅಬುಧಾಬಿಯಲ್ಲಿ ನಡೆದಿದ್ದ ಮಿನಿ ಹರಾಜಿನಲ್ಲಿ ಮುಷ್ತಾಫಿಜುರ್ ರಹಮಾನ್ ಅವರಿಗೆ 9.2 ಕೋಟಿ ನೀಡಿ ಖರೀದಿಸಿತ್ತು. ಇವರನ್ನು ತಂಡದಿಂದ ಕೈ ಬಿಡುವಂತೆ ಕೂಗ ಸಹ ಕೇಳಿ ಬಂದಿತ್ತು.
ಬಾಂಗ್ಲಾ ಆಟಗಾರನನ್ನು ಐಪಿಎಲ್‌ನಿಂದ ಕೈ ಬಿಡಬೇಕು ಎಂದು ಬಿಸಿಸಿಐ ಸೂಚಿಸುವ ಒಂದು ದಿನದ ಮೊದಲು, ಬಾಂಗ್ಲಾ ತನ್ನ ತವರು ವೇಳಾಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈ ವೇಳೆ ಭಾರತ, ಬಾಂಗ್ಲಾದೇಶ ನಡುವಣ ಮೂರು ಏಕದಿನ ಹಾಗೂ 2 ಟಿ20 ಸರಣಿಗಳನ್ನು ಸೇರಿಸಲಾಗಿತ್ತು. ಆದರೆ ಈ ಬಗ್ಗೆ ಬಿಸಿಸಿಐ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಈ ವೇಳಾಪಟ್ಟಿ ಬಿಡುಗಡೆಯಾದ 24 ಗಂಟೆಯೊಳಗೆ ಬಿಸಿಸಿಐ ದೊಡ್ಡ ನಿರ್ಧಾರವನ್ನು ಕೈ ಗೊಂಡಿದೆ.
ಮುಷ್ತಾಫಿಜುರ್ ರಹಮಾನ್ ವಿಶ್ವದಲ್ಲಿ ಹಲವು ಲೀಗ್‌ಗಳಲ್ಲಿ ಆಡುವ ಬೌಲರ್. ಇವರು ತಮ್ಮ ಬಿಗುವಿನ ದಾಳಿಯಿಂದಲೇ ಹೆಸರುವಾಸಿಯಾಗಿದ್ದಾರೆ. ಪವರ್ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಬೌಲಿಂಗ್ ಮಾಡುವ ಕಲೆಯನ್ನು ಇವರು ಕರಗತ ಮಾಡಿಕೊಂಡಿದ್ದಾರೆ. ಅಲ್ಲದೆ ಇವರ ಕಟರ್ ಎಸೆತಗಳನ್ನು ಎದುರಿಸಲು ಬ್ಯಾಟರ್‌ಗಳ ಕಷ್ಟ ಪಡುತ್ತಾರೆ. ಈಗಾಗಲೇ ಇವರು ಐಪಿಎಲ್‌ನಲ್ಲಿ ಹಲವು ಫ್ರಾಂಚೈಸಿ ಪರ ಆಡಿದ ಅನುಭವ ಹೊಂದಿದ್ದರಿಂದ ಇವರಿಗೆ ಕೆಕೆಆರ್ ಭಾರೀ ಮೊತ್ತ ನೀಡಿ ತಮ್ಮ ತಂಡಕ್ಕೆ ಸೇರಿಸಿಕೊಂಡಿತ್ತು. ಬಿಸಿಸಿಐ ದೊಡ್ಡ ನಿರ್ಧಾರದಿಂದ ಕೆಕೆಆರ್‌ಗೆ ಪೆಟ್ಟು ಬಿದ್ದಂತೆ ಆಗಿದೆ.