
ಕಳೆದ ವರ್ಷ ಕೊರೋನಾವೈರಸ್ ಭಾರತ ದೇಶದಾದ್ಯಂತ ಅಬ್ಬರಿಸಿದ ಕಾರಣದಿಂದಾಗಿ ಭಾರತ ನೆಲದಲ್ಲಿ ನಡೆಯಬೇಕಿದ್ದ ಹಲವಾರು ಟೂರ್ನಿಗಳು ಹಾಗೂ ಪಂದ್ಯಗಳು ಮುಂದೂಡಲ್ಪಟ್ಟಿದ್ದವು ಹಾಗೂ ರದ್ದಾಗಿದ್ದವು. ಕೇವಲ ಭಾರತ ದೇಶದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಕೊರೋನಾವೈರಸ್ ಕ್ರೀಡೆಗಳ ಮೇಲೆ ಪ್ರಭಾವವನ್ನು ಬೀರಿತ್ತು.
ಹೀಗೆ ಕಳೆದ ವರ್ಷ ಒಲಿಂಪಿಕ್ಸ್, ಅನೇಕ ಫುಟ್‌ಬಾಲ್ ಟೂರ್ನಿಗಳು ಹಾಗೂ ಇಂಡಿಯನ್ ಪ್ರಿಮಿಯರ್ ಲೀಗ್ ರೀತಿಯ ಜನಪ್ರಿಯ ಕ್ರೀಡಾ ಚಟುವಟಿಕೆಗಳು ಕೊರೊನಾ ವೈರಸ್ ಕಾರಣದಿಂದಾಗಿ ಮುಂದೂಡಲ್ಪಟ್ಟಿದ್ದವು. ಅದೇ ರೀತಿ ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ನಡೆಯಬೇಕಿದ್ದ ರಣಜಿ ಟ್ರೋಫಿ ಕೂಡ ಈ ವರ್ಷದ ಜನವರಿ ತಿಂಗಳಿಗೆ ಮುಂದೂಡಲ್ಪಟ್ಟಿತ್ತು.
ಹೌದು, ಕಳೆದ ವರ್ಷ ನವೆಂಬರ್ 16ರಂದು ನಡೆಯಬೇಕಿದ್ದ ರಣಜಿ ಟ್ರೋಫಿಯನ್ನು ಈ ಜನವರಿ 13ರಿಂದ ಆರಂಭಿಸಲು ಬಿಸಿಸಿಐ ತೀರ್ಮಾನವನ್ನು ಮಾಡಿತ್ತು. ಆದರೆ ಇದೀಗ ದೇಶದಾದ್ಯಂತ ಮತ್ತೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಇದೇ ಜನವರಿ 13ರಂದು ಆರಂಭವಾಗಬೇಕಿದ್ದ ರಣಜಿ ಟ್ರೋಫಿಯನ್ನು ಬಿಸಿಸಿಐ ಮತ್ತೊಮ್ಮೆ ಮುಂದೂಡಿದೆ.
ರಣಜಿ ಟ್ರೋಫಿ ಜತೆಗೆ ಕೊಲೊನೆಲ್ ಸಿ ಕೆ ನಾಯುಡು ಟ್ರೋಫಿ ಮತ್ತು ಸೀನಿಯರ್ ಮಹಿಳಾ ಕ್ರಿಕೆಟರ್ಸ್ ಟೂರ್ನಿಯನ್ನು ಕೂಡ ಬಿಸಿಸಿಐ ಮುಂದೂಡಿದೆ. ಇನ್ನು ಮಂಗಳವಾರ ಬೆಳಿಗ್ಗೆ ಮಾತನಾಡಿದ್ದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮುಂಬರುವ ರಣಜಿ ಟ್ರೋಫಿಯಲ್ಲಿ ಯಾವುದೇ ರೀತಿಯ ಬದಲಾವಣೆಗಳನ್ನು ಮಾಡುವುದಿಲ್ಲ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಆದರೆ ವಿವಿಧ ರಾಜ್ಯಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ರಾಜ್ಯ ಕ್ರಿಕೆಟ್ ಮಂಡಳಿಗಳು ಬಿಸಿಸಿಐಗೆ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಕುರಿತು ವರದಿಯನ್ನು ನೀಡಿವೆ. ಈ ವಿದ್ಯಮಾನ ಇದೀಗ ಬಯೋ ಬಬಲ್ ವ್ಯವಸ್ಥೆಯಲ್ಲಿ ರಣಜಿ ಟ್ರೋಫಿಯನ್ನು ಆಯೋಜಿಸುವ ಚಿಂತನೆಯಲ್ಲಿದ್ದ ಬಿಸಿಸಿಐಗೆ ಹಿನ್ನಡೆಯುಂಟುಮಾಡಿದೆ.
ಹೀಗಾಗಿ ಬಿಸಿಸಿಐ ಟೂರ್ನಿಗಳನ್ನು ಆಯೋಜಿಸುವ ಚಿಂತನೆಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಿದ್ದು, ಟೂರ್ನಿ ನಡೆಯಲಿರುವ ಸ್ಥಳಗಳಲ್ಲಿ ಮುಂದಿನ ದಿನಗಳಲ್ಲಿ ಯಾವ ರೀತಿಯ ಪರಿಸ್ಥಿತಿ ಇರಲಿದೆ ಎಂಬುದನ್ನು ಅರಿತ ನಂತರವಷ್ಟೇ ಮುಂದಿನ ನಿರ್ಧಾರವನ್ನು ಪ್ರಕಟಿಸಲಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಐಪಿಎಲ್ ಮೆಗಾ ಹರಾಜಿನ ಮೇಲೂ ಕೊವಿಡ್ ಪ್ರಭಾವ:
ಮುಂಬರಲಿರುವ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 2 ನೂತನ ತಂಡಗಳು ಸೇರ್ಪಡೆಯಾಗುತ್ತಿದ್ದು ಟ್ರೋಫಿಗಾಗಿ ಹತ್ತು ತಂಡಗಳ ನಡುವೆ ಪೈಪೋಟಿ ಏರ್ಪಡಲಿದೆ. ಇತ್ತೀಚೆಗಷ್ಟೇ ನಡೆದ ಫ್ರಾಂಚೈಸಿ ಹರಾಜು ಪ್ರಕ್ರಿಯೆಯಲ್ಲಿ ಅಹಮದಾಬಾದ್ ಮತ್ತು ಲಕ್ನೋ ನಗರಗಳು ನೂತನ ಫ್ರಾಂಚೈಸಿಗಳಾಗಿ ಹೊರಹೊಮ್ಮಿದ್ದವು. ಹೀಗಾಗಿ ಮುಂಬರಲಿರುವ ಐಪಿಎಲ್ ಟೂರ್ನಿ ಆರಂಭವಾಗುವುದಕ್ಕೂ ಮುನ್ನ ಆಟಗಾರರ ಮೆಗಾ ಹರಾಜು ಪ್ರಕ್ರಿಯೆಯನ್ನು ಕಡ್ಡಾಯವಾಗಿ ನಡೆಸಲೇಬೇಕಾಗಿದೆ. ಈ ಹಿಂದೆ ಮೆಗಾ ಹರಾಜು ಪ್ರಕ್ರಿಯೆಯನ್ನು ಜನವರಿ ಮೊದಲನೇ ವಾರದಲ್ಲಿ ನಡೆಸಲಾಗುವುದು ಎಂದು ತೀರ್ಮಾನವನ್ನು ಕೈಗೊಂಡಿದ್ದ ಬಿಸಿಸಿಐ ನಂತರ ಅದನ್ನು ಫೆಬ್ರವರಿ ತಿಂಗಳಿಗೆ ಮುಂದೂಡಿತ್ತು.
ಹೌದು, ಫೆಬ್ರವರಿ ತಿಂಗಳಿಗೆ ಮೆಗಾ ಹರಾಜು ಪ್ರಕ್ರಿಯೆಯನ್ನು ಮುಂದೂಡಿದ್ದ ಬಿಸಿಸಿಐ 12 ಮತ್ತು 13ನೇ ತಾರೀಕಿನಂದು ಬೆಂಗಳೂರು ನಗರದ ಹೋಟೆಲ್ ಒಂದರಲ್ಲಿ ಈ ಕಾರ್ಯಕ್ರಮವನ್ನು ನಡೆಸಲು ತೀರ್ಮಾನಿಸಿತ್ತು. ಹಾಗೂ ಈ ಕುರಿತಾಗಿ ಎಲ್ಲಾ ಫ್ರಾಂಚೈಸಿಗಳಿಗೂ ಸೂಚನೆಯನ್ನು ನೀಡಿದ್ದ ಬಿಸಿಸಿಐ ಫೆಬ್ರವರಿ 11ರ ಸಂಜೆಯಂದೇ ಸಂಬಂಧಪಟ್ಟ ಎಲ್ಲಾ ಫ್ರಾಂಚೈಸಿಗಳ ಮಾಲೀಕರು ಕೂಡ ಬೆಂಗಳೂರು ನಗರವನ್ನು ತಲುಪಿರಬೇಕು ಎಂದು ಆದೇಶವನ್ನು ಹೊರಡಿಸಿತ್ತು. ಹೀಗೆ ಇಷ್ಟೆಲ್ಲಾ ಯೋಜನೆಯನ್ನು ಮಾಡಿಕೊಂಡಿದ್ದ ಬಿಸಿಸಿಐಗೆ ಬೆಂಗಳೂರಿನ ಪರಿಸ್ಥಿತಿ ಕೈ ಕೊಟ್ಟಿದೆ.