ರಿಷಭ್ ಪಂತ್‌ಗೆ ಅಗತ್ಯ ಬೆಂಬಲ ಬಿಸಿಸಿಐ ನೀಡಲಿದೆ: ಜಯ್ ಶಾ ಪ್ರತಿಕ್ರಿಯೆ

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರಿಷಭ್ ಪಂತ್ ಕಾರು ಅಪಘಾತಕ್ಕೆ ಒಳಗಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪ್ರತಿಕ್ರಿಯೆ ನೀಡಿದ್ದಾರೆ. ಪಂತ್‌ಗೆ ಅಗತ್ಯವಿರುವ ಎಲ್ಲಾ ನೆರವನ್ನು ನೀಡುವುದಾಗಿ ಬಿಸಿಸಿಐ ಕಾರ್ಯದರ್ಶಿ ಭರವಸೆ ನೀಡಿದ್ದು ಪಂತ್ ಆರೋಗ್ಯದ ಮೇಲೆ ಬಿಸಿಸಿಐ ನಿಗಾವಹಿಸಿದೆ ಎಂದಿದ್ದಾರೆ.
ಡಿಸೆಂಬರ್ 30 ಮುಂಜಾನೆ ರಿಷಭ್ ಪಂತ್ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೆ ಒಳಗಾಗಿದ್ದು ದೆಹಲಿ- ಡೆಹ್ರಾಡೂನ್ ಹೈವೇಯಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕಾರು ತಕ್ಷಣವೇ ಬೆಂಕಿಗೆ ಆಹುತಿಯಾಗಿದೆ. ಈ ಸಂದರ್ಭದಲ್ಲಿ ಪಂತ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಅಪಘಾತದ ಸಂದರ್ಭದಲ್ಲಿ ಪಂತ್ ಏಕಾಂಗಿಯಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.

ಅಗತ್ಯ ನೆರವಿನ ಭರವಸೆ ನೀಡಿದ ಜಯ್ ಶಾ
ಈ ಅಪಘಾತದ ಬಳಿಕ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. "ಅಪಘಾತದಲ್ಲಿ ಗಾಯಗೊಂಡಿರುವ ಪಂತ್ ಚೇತರಿಕೆಗಾಗಿ ನಾನು ಪ್ರಾರ್ಥಿಸುತ್ತೇನೆ" ಎಂದಿರುವ ಜಯ್ ಶಾ ಪಂತ್ ಕುಟುಂಬಸ್ಥರು ಹಾಗೂ ಚಿಕಿತ್ಸೆ ನೀಡುತ್ತಿರುವ ವೈದ್ಯರ ಜೊತೆಗೆ ಮಾತನಾಡಿದ್ದೇನೆ ಎಂದಿದ್ದಾರೆ. "ರಿಷಭ್ ಪಂತ್ ಆರೋಗ್ಯ ಸ್ಥಿರವಾಗಿದ್ದು ಸ್ಕ್ಯಾನ್‌ಗಳನ್ನು ನಡೆಸಲಾಗುತ್ತಿದೆ. ಅವರ ಆರೋಗ್ಯವನ್ನು ನಾವು ನಿಕಟವಾಗಿ ಗಮನಿಸುತ್ತಿದ್ದು ಅಗತ್ಯವಿರುವ ಎಲ್ಲಾ ನೆರವನ್ನು ನೀಡಲಿದ್ದೇವೆ" ಎಂದು ಜಯ್ ಶಾ ಟ್ವೀಟ್ ಮಾಡಿದ್ದಾರೆ.

ಒಂಟಿಯಾಗಿ ಪ್ರಯಾಣಿಸುತ್ತಿದ್ದ ಪಂತ್
ರಿಷಭ್ ಪಂತ್ ಹರಿದ್ವಾರ ಜಿಲ್ಲೆಯ ಮಂಗ್ಲೌರ್ ಹಾಗೂ ನರ್ಸಾನ್ ಮಧ್ಯೆ ಅಪಘಾತಕ್ಕೆ ಒಳಗಾಗಿದ್ದಾರೆ. ಈ ಅಪಘಾತದ ಬಗ್ಗೆ ಉತ್ತರಾಖಂಡ್ ಡಿಜಿಪಿ ಅಶೋಕ್ ಕುಮಾರ್ ಮಾಹಿತಿ ನೀಡಿದ್ದು ಸ್ವತಃ ರಿಷಭ್ ಪಂತ್ ಹೇಳಿರುವಂತೆ ನಿದ್ದೆಯ ಮಂಪರಿಗೆ ಒಳಗಾದ ಕಾರಣ ಕಾರು ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸಿದೆ ಎಂದಿದ್ದಾರೆ. ಅಪಘಾತದ ನಡೆದ ಸಂದರ್ಭದಲ್ಲಿ ರಿಷಭ್ ಪಂತ್ ಮಾತ್ರವೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.

ಪಂತ್ ಗಾಯದ ಬಗ್ಗೆ ಮಾಹಿತಿ
ಇನ್ನು ರಿಷಭ್ ಪಂತ್‌ಗೆ ತುರ್ತು ಚಿಕಿತ್ಸೆ ನೀಡಿದ ಡಾ. ಸುಶಿಲ್ ನಗರ್ ರಿಷಭ್ ಪಂತ್ ಗಾಯದ ಬಗ್ಗೆ ಮಾಹಿತಿ ನೀಡಿದ್ದಾರೆ. "ಹಣೆಯಲ್ಲಿ ಸೀಳು ಗಾಯಗಳಾಗಿದೆ, ಮೊಣಕಾಲಿನ ಅಸ್ಥಿರಜ್ಜು ಘಾಸಿಯಾಗಿದ್ದು ಬೆನ್ನಿನ ಚರ್ಮ ಸವೆದಿದೆ. ಆದರೆ ಎಕ್ಸರೇ ಪ್ರಕಾರ ಯಾವುದೇ ಮೂಳೆಗೆ ಹಾನಿಯಾಗಿಲ್ಲ ಹಾಗೂ ಕೆಲ ಸುಟ್ಟ ಗಾಯಗಳಿಗೆ ಒಳಗಾಗಿದ್ದಾರೆ" ಎಂದು ಡಾ. ಸುಶೀಲ್ ನಗರ್ ಮಾಹಿತಿ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications