ವೈಟ್‌ಬಾಲ್ ಮಾದರಿಯಲ್ಲಿ ಇನ್ನೆಂದೂ ಕಾಣಿಸಿಕೊಳ್ಳಲ್ವಾ ರೋಹಿತ್?
ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಫೈನಲ್‌ನಲ್ಲಿ ಎಡವುವ ಮೂಲಕ ಮತ್ತೊಂದು ಐಸಿಸಿ ಟೂರ್ನಿಯಲ್ಲಿ ಆಘಾತ ಅನುಭವಿಸಿದೆ. ಇದಾದ ಬೆನ್ನಲ್ಲೇ ಈಗ ಟೀಮ್ ಇಂಡಿಯಾ ನಾಯಕನಾಗಿರುವ ರೋಹಿತ್ ಶರ್ಮಾ ಅವರ ಭವಿಷ್ಯದ ಬಗ್ಗೆ ಪ್ರಶ್ನೆಗಳು ಏಳಲು ಆರಂಭವಾಗಿದೆ. ರೋಹಿತ್ ಶರ್ಮಾ ಅವರನ್ನು ಭವಿಷ್ಯದಲ್ಲಿ ಏಕದಿನ ಹಾಗೂ ಟಿ20 ಮಾದರಿಗೆ ಪರಿಗಣಿಸಬೇಕೋ ಬೇಡವೋ ಎನ್ನುವ ಬಗ್ಗೆ ಆಯ್ಕೆ ಸಮಿತಿಯಲ್ಲಿಯೂ ಚರ್ಚೆ ಆರಂಭವಾಗಿದೆ.
ಟೀಮ್ ಇಮಡಿಯಾ ನಾಯಕ ರೋಹಿತ್ ಶರ್ಮಾ ಪ್ರಸ್ತುತ 36ರ ಹರೆಯದಲ್ಲಿದ್ದಾರೆ. ಹೀಗಾಗಿ 2025ರಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಹಾಗೂ 2027ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನೂತನ ನಾಯಕ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಮಂಡಳಿ ವೈಟ್‌ಬಾಲ್ ಮಾದರಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭವಿಷ್ಯದ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಮುಂದಿನ ಏಕದಿನ ವಿಶ್ವಕಪ್ ಟೂರ್ನಿ 2027ರಲ್ಲಿ ನಡೆಯಲಿದ್ದು ದಕ್ಷಿಣ ಆಫ್ರಿಕಾ ಹಾಗೂ ಜಿಂಬಾಬ್ವೆ ಆತಿಥ್ಯದಲ್ಲಿ ಈ ಟೂರ್ನಿ ಆಯೋಜನೆಯಾಗಲಿದೆ. ಆದರೆ ಈ ಸಂದರ್ಭದಲ್ಲಿ ರೋಹಿತ್ ಶರ್ಮಾ 40ರ ಹರೆಯದಲ್ಲಿರಲಿದ್ದಾರೆ. ಇನ್ನು 2024ರ ಜೂನ್ ತಿಂಗಳಿನಲ್ಲಿ ಯುಎಸ್‌ಎ ಮತ್ತು ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ಟಿ20 ವಿಶ್ವಕಪ್ ಟೂರ್ನಿ ಆಯೋಜನೆಯಾಗಲಿದ್ದು ಆ ಸಂದರ್ಭದಲ್ಲಿ ರೋಹಿತ್ ಶರ್ಮಾ 37 ವರ್ಷವಾಗಲಿದೆ. ಕಳೆದ 2022ರಲ್ಲಿ ಅಂತ್ಯದಲ್ಲಿ ನಡೆದ ಟಿ20 ವಿಶ್ವಕಪ್‌ನ ಬಳಿಕ ರೋಹಿತ್ ಶರ್ಮಾ ಚುಟುಕು ಮಾದರಿಯಲ್ಲಿ ಕಣಕ್ಕಿಳಿದಿಲ್ಲ. ಹೀಗಾಗಿ ಟಿ20 ಮಾದರಿಯಲ್ಲಿಯೂ ರೋಹಿತ್ ಶರ್ಮಾ ಭವಿಷ್ಯದ ಬಗ್ಗೆ ಸ್ಪಷ್ಟತೆಯಿಲ್ಲ.
ಆದರೆ ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ ಟಿ20 ಮಾದರಿಯಲ್ಲಿ ತನ್ನನ್ನು ಪರಿಗಣಿಸದಂತೆ ಸ್ವತಃ ರೋಹಿತ್ ಶರ್ಮಾ ಆಯ್ಕೆ ಮಂಡಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಟಿ20 ಮಾದರಿಯಲ್ಲಿ ಯುವ ಆಟಗಾರರ ಮೇಲೆ ಹೆಚ್ಚಿನ ಚಿತ್ತ ನೆಡುತ್ತಿರುವ ಕಾರಣ ಇದನ್ನು ರೋಹಿತ್ ಶರ್ಮಾ ಕೂಡ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
"ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಆಯ್ಕೆ ಮಂಡಳಿಯಲ್ಲಿ ರೋಹಿತ್ ಶರ್ಮಾ ಟಿ20 ಮಾದರಿಗೆ ಪರಿಗಣಿಸದಿರುವುದಕ್ಕೆ ಒಪ್ಪಿಗೆ ನೀಡಿದ್ದಾರೆ. ಕಳೆದ ವರ್ಷ ಆಯ್ಕೆಗಾರರು ಯುವ ಆಟಗಾರರ ಮೇಲೆ ಹೆಚ್ಚು ವ್ಯಯ ಮಾಡಿದ್ದರು. ಮುಂದಿನ ಜೂನ್ ತಿಂಗಳಿನಲ್ಲಿ ಟಿ20 ವಿಶ್ವಕಪ್ ಆಯೋಜನೆಯಾಗಲಿದ್ದು ಸುದೀರ್ಘ ಕಾಲದ ಈ ಯೋಜನೆಯಿಂದ ವಿಮುಖರಾಗಲು ಆಯ್ಕೆಗಾರರು ಕೂಡ ಬಯಸುವುದಿಲ್ಲ" ಎಂದು ಬಿಸಿಸಿಐ ಅಧಿಕಾರಿಯೊಬ್ಬರ ಹೇಳಿಯಲ್ಲಿ ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಮುಂದುವರಿಯಲಿದ್ದಾರೆ ರೋಹಿತ್?
ಹಾರ್ದಿಕ್ ಪಾಂಡ್ಯ ಗಾಯಕ್ಕೆ ತುತ್ತಾಗಿರುವ ಕಾರಣ ದಕ್ಷಿಣ ಆಫ್ರಿಕಾ ಪ್ರವಾಸದ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಕೊನೆಯ ಬಾರಿಗೆ ಏಕದಿನ ಮಾದರಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ ರೋಹಿತ್ ಶರ್ಮಾ ಟೆಸ್ಟ್ ಮಾದರಿಯಲ್ಲಿ ಮುಂದುವರಿಯಲಿದ್ದು 2025ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂತ್ಯವಾಗುವವರೆಗೂ ಮುಂದುವರಿಯಲಿದ್ದಾರೆ ಎನ್ನಲಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications