ಭಾರತ ಕ್ರಿಕೆಟ್ ತಂಡದಲ್ಲಿ ಪ್ರಮುಖ ಬದಲಾವಣೆಗಳ ಬಗ್ಗೆ ಊಹಾಪೋಹಗಳಿವೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಟಗಾರರಿಗೆ ಸಂಬಂಧಿಸಿದ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ವಿದೇಶಿ ಪ್ರವಾಸದ ಸಂದರ್ಭದಲ್ಲಿ ಆಟಗಾರರು ಕುಟುಂಬಸ್ಥರೊಂದಿಗೆ ಉಳಿಯುವುದಕ್ಕೆ ಬಿಸಿಸಿಐ ಬ್ರೇಕ್ ಹಾಕಿದೆ. ಇದೀಗ ಮುಂಬರುವ ದಿನಗಳಲ್ಲಿ ಆಟಗಾರರಿಗೆ ಪ್ರದರ್ಶನಕ್ಕೆ ತಕ್ಕಂತೆ ವೇತನ ನೀಡುವ ಬಗ್ಗೆ ಚರ್ಚಿಸಲಾಗಿದೆ.
ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗಳ ಸೋಲಿನ ಬಳಿಕ ಟೀಮ್ ಇಂಡಿಯಾ ಆಟಗಾರರಿಗೆ ಬಿಸಿ ಮಟ್ಟಿಸಲು ಬಿಸಿಸಿಐ ಮುಂದಾಗಿದೆ. ನೂತನ ಬಿಸಿಸಿಐ ಕಾರ್ಯದರ್ಶಿ ಮತ್ತು ಖಜಾಂಚಿ ದೇವಜಿತ್ ಸಯ್ಯದ್ ಮತ್ತು ಪ್ರಭತೇಜ್ ಸಿಂಗ್ ಭಾಟಿಯಾ ಅವರ ಆಗಮನದೊಂದಿಗೆ ಬಿಸಿಸಿಐ ಕಾರ್ಯನಿರ್ವಹಿಸುವ ಮತ್ತು ಟೀಮ್ ಇಂಡಿಯಾ ಆಟಗಾರರನ್ನು ನಿರ್ವಹಿಸುವ ವಿಧಾನಗಳಲ್ಲಿ ಅನೇಕ ಬದಲಾವಣೆಗಳಾಗುತ್ತಿವೆ.

ವರದಿಗಳ ಪ್ರಕಾರ, ಟೀಮ್ ಇಂಡಿಯಾ ಆಟಗಾರರು ಪಂದ್ಯದಲ್ಲಿ ನೀಡುವ ಅವರ ಪ್ರದರ್ಶನಕ್ಕೆ ತಕ್ಕಂತೆ ಸಂಭಾವನೆ ನೀಡುವ ಬಗ್ಗೆ ಬಿಸಿಸಿಐ ಅಧಿಕಾರಿಗಳು ಚರ್ಚಿಸಿದ್ದಾರೆ. ಇನ್ನು ಮುಂದೆ ಆಟಗಾರರು ಚೆನ್ನಾಗಿ ಆಡಿದರೆ ಮಾತ್ರ ಉತ್ತಮ ಸಂಭಾವನೆ ಪಡೆಯಲಿದ್ದಾರೆ. ಇಲ್ಲದಿದ್ದರೆ, ಕಳಪೆ ಪ್ರದರ್ಶನ ನೀಡುವ ಆಟಗಾರರ ವೇತನ ಕಡಿತವಾಗಲಿದೆ.
ಆಟಗಾರರ ಪ್ರದರ್ಶನಕ್ಕೆ ಅನುಗುಣವಾಗಿ ಸಂಭಾವನೆ ನೀಡುವ ವ್ಯವಸ್ಥೆಯು ಈಗಾಗಲೇ ಜಾರಿಯಲ್ಲಿದೆ. ಇದರಲ್ಲಿ 2022-23 ರಿಂದ ಒಂದು ಋತುವಿನಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡುವ ಆಟಗಾರರಿಗೆ ಪ್ರತಿ ಪಂದ್ಯಕ್ಕೆ 30 ಲಕ್ಷ ರೂ.ಗಳ ಆರ್ಥಿಕ ಪ್ರೋತ್ಸಾಹವನ್ನು ನೀಡಲಾಗುತ್ತದೆ. ಒಬ್ಬ ಆಟಗಾರನು ಒಂದು ಋತುವಿನಲ್ಲಿ ಕನಿಷ್ಠ 75 ಪಂದ್ಯಗಳಲ್ಲಿ ಭಾಗವಹಿಸಿದರೆ, ಅವನು ಪ್ರತಿ ಪಂದ್ಯಕ್ಕೆ 45 ಲಕ್ಷ ರೂ ಗಳಿಸಬಹುದು.
ಇಷ್ಟೆಲ್ಲ ಪ್ರೋತ್ಸಾಹ ಮೊತ್ತವನ್ನು ಆಟಗಾರಿಗೆ ನೀಡಿದರೂ, ಅವರಿಂದ ನಿರೀಕ್ಷಿತ ಪ್ರದರ್ಶನ ಬಂದಿಲ್ಲ. ಹೀಗಾಗಿ ಟೀಮ್ ಇಂಡಿಯಾ ಆಟಗಾರರಿಗೆ ಬಿಸಿ ಮುಟ್ಟಿಸಲು ಕಠಿಣ ಕ್ರಮಕ್ಕೆ ಬಿಸಿಸಿಐ ಮುಂದಾಗಿದೆ. ಇದಕ್ಕೆ ಹಲವರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.
ಟೀಮ್ ಇಂಡಿಯಾ ಆಟಗಾರರಿಗೆ ಬಿಸಿಸಿಐ ಉತ್ತಮ ಸಂಭಾವನೆ ನೀಡುತ್ತಿದೆ. ಭಾರತ ಟೆಸ್ಟ್ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಆಟಗಾರರು ಪ್ರತಿ ಪಂದ್ಯಕ್ಕೆ 15 ಲಕ್ಷ ರೂ.ಗಳನ್ನು ಸಂಭಾವನೆ ರೂಪದಲ್ಲಿ ಪಡೆಯಲಿದ್ದಾರೆ. ಆಡುವ ಹನ್ನೊಂದರ ಬಳಗದಿಂದ ಹೊರಗುಳಿಯುವ ಆಟಗಾರರು 7.5 ಲಕ್ಷ ರೂ. ಪಡೆಯಲಿದ್ದಾರೆ. ಅದರಂತೆ ಭಾರತ ಏಕದಿನ ತಂಡದಲ್ಲಿ ಆಡುವ ಆಟಗಾರರಿಗೆ ಪ್ರತಿ ಪಂದ್ಯಕ್ಕೆ 6 ಲಕ್ಷ ರೂ. ಸಿಗಲಿದೆ. ಆಡುವ ಹನ್ನೊಂದರ ಬಳಗದಿಂದ ಹೊರಗುಳಿಯುವ ಆಟಗಾರರು 3 ಲಕ್ಷ ರೂ.ಗಳನ್ನು ಪಡೆಯಲಿದ್ದಾರೆ.