ಐಪಿಎಲ್ 2022ಕ್ಕೆ ಮತ್ತೆರಡು ತಂಡಗಳ ಸೇರ್ಪಡೆ ಆಗುತ್ತ?!

ನವದೆಹಲಿ: 2022ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಯ ವೇಳೆ ಎರಡು ಹೆಚ್ಚುವರಿ ತಂಡಗಳನ್ನು ಸೇರ್ಪಡೆಗೊಳಿಸಲು ಯೋಚಿಸಿರುವುದಾಗಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಈ ಹಿಂದೆ ತಿಳಿಸಿತ್ತು. ಆದರೆ ಈ ಬಗ್ಗೆ ಇನ್ನೂ ಸ್ವಲ್ಪ ಕಾದು ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಬಿಸಿಸಿಐ ಹೇಳಿದೆ.
ಸದ್ಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಸನ್ ರೈಸರ್ಸ್ ಹೈದರಾಬಾದ್, ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಹೀಗೆ ಒಟ್ಟು 8 ಫ್ರಾಂಚೈಸಿಗಳಿವೆ. ಇನ್ನೂ 2 ಹೊಸ ಫ್ರಾಂಚೈಸಿಗಳನ್ನು ಸೇರಿಸುವ ಆಲೋಚನೆ ಬಿಸಿಸಿಐಯಲ್ಲಿತ್ತು.
"ಮುಂದಿನ ವರ್ಷ ಐಪಿಎಲ್‌ನಲ್ಲಿ ನಾವು ಮತ್ತೆರಡು ಫ್ರಾಂಚೈಸಿಗಳನ್ನು ಸೇರಿಸಲು ನೋಡುತ್ತಿದ್ದೇವೆ. ಆದರೆ ನಾವು ಮಾರುಕಟ್ಟೆಯನ್ನು ನೋಡಬೇಕಾಗಿದೆ ಮತ್ತು ದೇಶದಲ್ಲಿ ಸದ್ಯದ ಪರಿಸ್ಥಿತಿಯನ್ನು ಸಹ ಗಮನಿಸಿ ನಿರ್ಣಯ ಕೈಗೊಳ್ಳಬೇಕಾಗುತ್ತದೆ. ಮುಂದಿನ ವರ್ಷವೇ 2 ತಂಡ ಸೇರ್ಪಡೆಗೊಳ್ಳುತ್ತವೆ ಎಂದು ನಾವು ಕರಾರುವಾಕ್ ಆಗಿ ಹೇಳಲಾರೆವು. ಯಾಕೆಂದರೆ 2 ಹೆಚ್ಚುವರಿ ತಂಡಗಳ ಸೇರ್ಪಡೆಗೆ ನಾವು ಬಹಳಷ್ಟು ಸಂಗತಿಗಳನ್ನು ಪರಿಗಣಿಸಬೇಕಾಗುತ್ತದೆ," ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಐಎಎನ್‌ಎಸ್‌ಗೆ ತಿಳಿಸಿದ್ದಾರೆ.
ಈ ಬಾರಿಯ ಐಪಿಎಲ್ ಟೂರ್ನಿ ಭಾರತದಲ್ಲಿ ಅರ್ಧದಲ್ಲೇ ನಿಲ್ಲಿಸಲ್ಪಟ್ಟಿತ್ತು. ಕೋವಿಡ್-19 ಪ್ರಕರಣಗಳ ಕಾರಣ ಟೂರ್ನಿಯನ್ನು ಅರ್ಧದಲ್ಲೇ ನಿಲ್ಲಿಸಬೇಕಾಗಿ ಬಂದಿತ್ತು. 29 ಪಂದ್ಯಗಳು ನಡೆದಿದ್ದು, ಇನ್ನು 31 ಪಂದ್ಯಗಳು ಯುಎಇ ಮತ್ತು ಓಮನ್‌ನಲ್ಲಿ ನಡೆಯಲಿವೆ. ಬಿಸಿಸಿಐ 2 ಹೊಸ ಐಪಿಎಲ್ ತಂಡಗಳ ಸೇರ್ಪಡೆಗೆ ಹಿಂದು-ಮುಂದು ನೋಡುತ್ತಿರುವುದಕ್ಕೆ ಕೋವಿಡ್ ಪರಿಸ್ಥಿತಿಗಳೂ ಒಂದು ಕಾರಣ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications