ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿ ಮಾಜಿ ಮುಖ್ಯಸ್ಥ ಚೇತನ್ ಶರ್ಮಾ ನಾಲ್ಕು ತಿಂಗಳ ಹಿಂದೆ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಆದರೆ ಬಿಸಿಸಿಐ ಇನ್ನೂ ಮುಖ್ಯ ಆಯ್ಕೆಗಾರ ಸ್ಥಾನಕ್ಕೆ ಹೆಸರನ್ನು ಅಂತಿಮಗೊಳಿಸಿಲ್ಲ.
ಕುಟುಕು ಕಾರ್ಯಾಚರಣೆಯಲ್ಲಿ ಭಾರತ ತಂಡದ ಮಾಹಿತಿಯನ್ನು ಸೋರಿಕೆ ಮಾಡಿರುವುದು ಬಹಿರಂಗಗೊಂಡ ನಂತರ, ಚೇತನ್ ಶರ್ಮಾ ಅವರು ಒಪ್ಪಂದದ ಅವಧಿ ಮುಗಿಯುವ ಮೊದಲೇ ರಾಜೀನಾಮೆ ನೀಡಿದರು.

ಕುಟುಕು ಕಾರ್ಯಾಚರಣೆ ವಿಡಿಯೋದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಅವರಂತಹ ಆಟಗಾರರ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು.
ಸದ್ಯ ಆಯ್ಕೆ ಸಮಿತಿಯ ಸದಸ್ಯರಲ್ಲಿ ಒಬ್ಬರಾಗಿರುವ ಎಸ್‌ಎಸ್ ದಾಸ್ ಅವರು ಅಂದಿನಿಂದ ಆಯ್ಕೆಗಾರರ ಹಂಗಾಮಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವರದಿಗಳ ಪ್ರಕಾರ, ಬಿಸಿಸಿಐ ಉತ್ತಮ ವ್ಯಕ್ತಿಯ ಹುಡುಕಾಟದಲ್ಲಿದೆ. ಆದರೆ ವಿವರಗಳನ್ನು ಬಹಿರಂಗಗೊಳಿಸುತ್ತಿಲ್ಲ.
ಐಪಿಎಲ್ 2023ರ ನಂತರ ಬಿಸಿಸಿಐ ಅಧಿಕಾರಿಗಳು ಒಂದೆರಡು ದೊಡ್ಡ ಹೆಸರುಗಳನ್ನು ಫೈನಲ್ ಮಾಡಿದ್ದಾರೆ. ಈ ಮಾಜಿ ಆಟಗಾರರು ಉತ್ತರ ವಲಯಕ್ಕೆ ಸೇರಿದವರಾಗಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಈ ಆಟಗಾರರು ಭಾರತ ತಂಡದ ಪರ 100ಕ್ಕೂ ಅಧಿಕ ಪಂದ್ಯಗಳನ್ನು ಆಡಿದವರಾಗಿದ್ದಾರೆ.
2011ರ ಏಕದಿನ ವಿಶ್ವಕಪ್ ವಿಜೇತ ತಂಡದ ಆಟಗಾರರನ್ನು ಬಿಸಿಸಿಐ ಸದಸ್ಯರು ಸಂಪರ್ಕಿಸಿದ್ದಾರೆ ಮತ್ತು ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದಾರೆ ಎಂದು ವರದಿಯಾಗಿದೆ. ಬಿಸಿಸಿಐ ನೀಡುವ ಕಡಿಮೆ ಪ್ಯಾಕೇಜ್‌ನಿಂದಾಗಿ ಕೆಲವು ಮಾಜಿ ಆಟಗಾರರು ಆಯ್ಕೆ ಸಮಿತಿ ಮುಖ್ಯಸ್ಥ ಜವಾಬ್ದಾರಿಯನ್ನು ವಹಿಸಿಕೊಳ್ಳಲು ನಿರಾಕರಿಸಿದ್ದಾರೆ ಎಂದು ವರದಿ ತಿಳಿಸಿದೆ.

2011ರ ವಿಶ್ವಕಪ್ ತಂಡದಲ್ಲಿ ಹದಿನೈದು ಆಟಗಾರರಿದ್ದರು. ಉತ್ತರ ವಲಯದಿಂದ ಗೌತಮ್ ಗಂಭೀರ್, ಯುವರಾಜ್ ಸಿಂಗ್, ಆಶಿಶ್ ನೆಹ್ರಾ, ಹರ್ಭಜನ್ ಸಿಂಗ್ ಮತ್ತು ವೀರೇಂದ್ರ ಸೆಹ್ವಾಗ್ ಇದ್ದಾರೆ. ಈ ಆಟಗಾರರಲ್ಲಿ ಒಬ್ಬರನ್ನು ಸಂಪರ್ಕಿಸಿರುವ ಸಾಧ್ಯತೆಯಿದೆ. ಪಿಯೂಷ್ ಚಾವ್ಲಾ ಮತ್ತು ಸುರೇಶ್ ರೈನಾ ಅವರನ್ನೂ ಕೂಡ ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ಬಿಸಿಸಿಐ ಸಂಪರ್ಕಿಸುವ ಸಾಧ್ಯತೆ ಇದೆ.
ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡದ ಹೀನಾಯ ಪ್ರದರ್ಶನದ ಬಗ್ಗೆ ಬಿಸಿಸಿಐ ಇನ್ನೂ ಪ್ರತಿಕ್ರಿಯಿಸಿಲ್ಲ. ಏಕೆಂದರೆ ಈ ವರ್ಷ ಭಾರತ ಹೆಚ್ಚು ಟೆಸ್ಟ್ ಆಡುತ್ತಿಲ್ಲ.
ಜುಲೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳ ನಂತರ, ಅಂದರೆ 2023ರ ಏಷ್ಯಾ ಕಪ್, ಏಕದಿನ ವಿಶ್ವಕಪ್ ಬಳಿಕ ಭಾರತ ತಂಡವು ಮುಂದಿನ ಟೆಸ್ಟ್ ಸರಣಿಯನ್ನು ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ.
ಹೀಗಿರುವಾಗ, ಬಿಸಿಸಿಐ ಯಾವುದೇ ದೊಡ್ಡ ನಿರ್ಧಾರ ಕೈಗೊಳ್ಳಲು ಆತುರ ತೋರುವಂತೆ ಕಾಣುತ್ತಿಲ್ಲ. ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್‌ನಲ್ಲಿ ಕಳಪೆ ಫಾರ್ಮ್‌ನಲ್ಲಿ ಸಾಗುತ್ತಿದ್ದಾರೆ. ಆದರೂ, ಅವರು ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಮತ್ತು ತಂಡವನ್ನು ಮುನ್ನಡೆಸಲು ಸಿದ್ಧರಾಗಿದ್ದಾರೆ.
ಇನ್ನು ಅನುಭವಿ ಬ್ಯಾಟರ್ ಚೇತೇಶ್ವರ ಪೂಜಾರ ಸ್ಥಾನ ಅಪಾಯದಲ್ಲಿದೆ. ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್‌ಗೆ ಟೆಸ್ಟ್ ತಂಡ ಸೇರುವ ಸಾಧ್ಯತೆ ಇದೆ. ಆದರೂ, ಚೇತೇಶ್ವರ ಪೂಜಾರ ವೆಸ್ಟ್ ಇಂಡೀಸ್ ವಿರುದ್ಧ ಎರಡೂ ಟೆಸ್ಟ್ ಪಂದ್ಯಗಳನ್ನು ಆಡಲಿದ್ದಾರೆ. ಒಂದು ವೇಳೆ ಅಲ್ಲಿ ಅವರ ಪ್ರದರ್ಶನ ಕಳಪೆಯಾಗಿದ್ದರೆ, ತಂಡದಿಂದ ಕೈಬಿಡಬಹುದು.