ಟೀಮ್ ಇಂಡಿಯಾದ ಅನುಭವಿ ಆಟಗಾರ ಶಿಖರ್ ಧವನ್ ಟೀಮ್ ಇಂಡಿಯಾ ವಿಶ್ವಕಪ್ ಪ್ಲ್ಯಾನ್‌ನಿಂದ ಹೊರಬಿದ್ದಿರುವುದು ಸ್ಪಷ್ಟವಾಗಿದೆ. ಕಳೆದ ಕೆಲ ಏಕದಿನ ಸರಣಿಗಳಲ್ಲಿ ಆಯ್ಕೆಯಾಗದ ಧವನ್ ಭಾರತ ತಂಡಕ್ಕೆ ಮತ್ತೆ ಕಮ್‌ಬ್ಯಾಕ್ ಅಸಾಧ್ಯ ಎನ್ನುವ ಮಾತುಗಳಿವೆ. ಆದರೆ ಈ ಮಧ್ಯೆ ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಟೀಮ್ ಇಂಡಿಯಾದ ನಾಯಕತ್ವವನ್ನು ವಹಿಸುವ ಅವಕಾಶ ಶಿಖರ ಧವನ್‌ಗೆ ದೊರೆಯಲಿದೆ ಎನ್ನುವ ವರದಿಗಳು ಬರುತ್ತಿದೆ ಎಂಬುದು ಗವನಾರ್ಹ.
ಈ ಬಾರಿ ಚೀನಾದ ಹ್ಯಾಂಗ್‌ಜೂನಲ್ಲಿ ಏಷನ್ ಗೇಮ್ಸ್ ಕ್ರೀಡಾಕೂಟ ನಡೆಯಲಿದ್ದು ಈ ಟೂರ್ನಿಯಲ್ಲಿ ಕ್ರಿಕೆಟ್ ಕೂಡ ಸ್ಪರ್ಧೆಯ ಭಾಗವಾಗಿದೆ. ಹೀಗಾಗಿ ಬಿಸಿಸಿಐ ಭಾರತದ ಮಹಿಳಾ ಹಾಗೂ ಪುರುಷರ ತಂಡವನ್ನು ಈ ಕ್ರೀಡಾಕೂಡದಲ್ಲಿ ಆಡಿಸಲು ಒಪ್ಪಿಗೆ ಸೂಚಿಸಿದ್ದು ಭಾರತದ ಪುರುಷರ ಎರಡನೇ ದರ್ಜೆಯ ತಂಡ ಈ ಟೂರ್ನಿಯಲ್ಲಿ ಭಾಗವಹಿಸಲಿದೆ ಎನ್ನಲಾಗುತ್ತಿದೆ. ಈ ತಂಡಕ್ಕೆ ಶಿಖರ್ ಧವನ್ ನಾಯಕತ್ವ ವಹಿಸುವ ಸಾಧ್ಯತೆಗಳು ಇದೆ ಎಂಬುದರ ಬಗ್ಗೆ ಇದೀಗ ವರದಿಯಾಗುತ್ತಿದೆ.

2014ರ ಏಷ್ಯನ್ ಗೇಮ್ಸ್ ಇಂಚಿಯಾನ್‌ನಲ್ಲಿ ನಡೆದಾಗ ಕೊನೆಯ ಬಾರಿಗೆ ಕ್ರಿಕೆಟ್ ಈ ಟೂರ್ನಿಯ ಭಾಗವಾಗಿತ್ತು, ಆಗ ಭಾರತ ಈ ಟೂರ್ನಿಯಲ್ಲಿ ಭಾಗವಹಿಸಲು ನಿರಾಕರಿಸಿತ್ತು. ಆದರೆ ಕಳೆದ ಒಂಬತ್ತು ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗಿದ್ದು ಏಶ್ಯನ್ ಗೇಮ್ಸ್‌ನಲ್ಲಿ ಭಾರತ ಭಾಗವಹಿಸುವುದಕ್ಕೆ ಬಿಸಿಸಿಐ ಸಮ್ಮತಿಸಿದೆ. ಜುಲೈ 7 ರಂದು ಬಿಸಿಸಿಐನ ಮುಂಬರುವ ಅಪೆಕ್ಸ್ ಕೌನ್ಸಿಲ್ ಸಭೆ ನಡೆಯಲಿದ್ದು ಅಲ್ಲಿ ಶಿಖರ್ ಧವನ್ ತಂಡವನ್ನು ಮುನ್ನಡೆಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಟಿ20 ಮಾದರಿಯಲ್ಲಿ ಹಣಾಹಣಿ
ಇನ್ನು ಏಷ್ಯಾಕಪ್‌ನಲ್ಲಿ ಕ್ರಿಕೆಟ್ ಟೂರ್ನಿಯನ್ನು ಟಿ20 ಮಾದರಿಯಲ್ಲಿ ಆಡಿಸಲಾಗುತ್ತದೆ. ಭಾರತ ಸೇರಿದಂತೆ ಏಷ್ಯಾದ ಇತರ ತಂಡಗಳು ಕೂಡ ಈ ಟೂರ್ನಿಯಲ್ಲಿಭಾಗವಹಿಸುತ್ತಿದೆ. ಇನ್ನು ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಈ ಸೆಣೆಸಾಟಗಳು ನಡೆಯಲಿದ್ದು ಮಹಿಳಾ ವಿಭಾಗದಲ್ಲಿ ಭಾರತದ ಮೊದಲ ದರ್ಜೆಯ ತಂಡವೇ ಕಣಕ್ಕಿಳಿಯಲಿದೆ ಎನ್ನಲಾಗಿದೆ.