Champions Trophy 2025: ನ್ಯೂಜಿಲೆಂಡ್ ತಂಡಕ್ಕೂ ಗಾಯದ ಬರೆ; ಸ್ಟಾರ್ ಬೌಲರ್ ಹೊರಗೆ
ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯೂ 2017ರ ನಂತರ ಮೊದಲ ಬಾರಿಗೆ ಆಯೋಜನೆಗೊಳ್ಳುತ್ತಿದೆ. ಇದರ ಸಂಭ್ರಮದಲ್ಲಿರುವ ಟಾಪ್ 8 ತಂಡಗಳ ಆಟಗಾರರಿಗೆ ಗಾಯದ ಸಮಸ್ಯೆ ಎದುರಾಗಿದೆ. ಈಗಾಗಲೇ ಕೆಲವು ತಂಡಗಳ ಸ್ಟಾರ್ ಆಟಗಾರರು ಗಾಯದ ಸಮಸ್ಯೆಯಿಂದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಹೊರಗುಳಿದಿದ್ದಾರೆ. ಇದೀಗ ನ್ಯೂಜಿಲೆಂಡ್‌ನ ಸ್ಟಾರ್ ವೇಗದ ಬೌಲರ್ ಕೂಡ ಇಡೀ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಫೆಬ್ರವರಿ 19 ರಂದು ಪಾಕಿಸ್ತಾನ ಮತ್ತು ಯುಎಇಯಲ್ಲಿ ಪ್ರಾರಂಭವಾಗಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರಿಂದ ನ್ಯೂಜಲೆಂಡ್ ತಂಡದ ಸ್ಟಾರ್ ವೇಗಿ ಬೆನ್ ಸಿಯರ್ಸ್ ಮಂಡಿರಜ್ಜು ಗಾಯದಿಂದಾಗಿ ಹೊರಗುಳಿದಿದ್ದಾರೆ. ಈ ಕುರಿತು ಮಾಹಿತಿಯನ್ನು ನ್ಯೂಜಿಲೆಂಡ್ ಕ್ರಿಕೆಟ್ (ಎನ್‌ಸಿ) ಶುಕ್ರವಾರ ಹಂಚಿಕೊಂಡಿದೆ.

ಬುಧವಾರ ಕರಾಚಿಯಲ್ಲಿ ನಡೆದ ನ್ಯೂಜಿಲೆಂಡ್‌ನ ಮೊದಲ ತರಬೇತಿ ಅವಧಿಯಲ್ಲಿ ಬೆನ್ ಸಿಯರ್ಸ್ ಅವರ ಎಡ ಮಂಡಿರಜ್ಜು ನೋವು ಕಾಣಿಸಿಕೊಂಡಿತು. ನಂತರದ ಸ್ಕ್ಯಾನ್‌ಗಳಲ್ಲಿ ಸಣ್ಣ ಗಾಯವಾಗಿರುವುದು ತಿಳಿದು ಬಂದಿದ್ದು, ಇದಕ್ಕೆ ಕನಿಷ್ಠ ಎರಡು ವಾರಗಳ ಪುನರ್ವಸತಿ ಅಗತ್ಯವಿರುತ್ತದೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ತಿಳಿಸಿದೆ.
ವರದಿಗಳ ಪ್ರಕಾರ, ದುಬೈನಲ್ಲಿ ಭಾರತ ವಿರುದ್ಧ ನಡೆಯಲಿರುವ ಕೊನೆಯ ಗ್ರೂಪ್ ಎ ಪಂದ್ಯಕ್ಕೆ ಮಾತ್ರ ಬೆನ್ ಸಿಯರ್ಸ್ ಲಭ್ಯವಿರಲಿದ್ದಾರೆ. ಆದ್ದರಿಂದ ಅವರನ್ನು ಇಡೀ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗಿಡಲು ನಿರ್ಧರಿಸಲಾಗಿದೆ. ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ತ್ರಿಕೋನ ಸರಣಿಯ ಭಾಗವಾಗಿ ಈಗಾಗಲೇ ತಂಡದಲ್ಲಿರುವ ಜಾಕೋಬ್ ಡಫಿ, ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಬೆನ್ ಸಿಯರ್ಸ್ ಬದಲಿಗೆ ಅಧಿಕೃತವಾಗಿ ಸ್ಥಾನ ಪಡೆಯಲಿದ್ದಾರೆ. ಆಟಗಾರನನ್ನು ಬದಲಾಯಿಸಲು ನ್ಯೂಜಿಲೆಂಡ್ ಮ್ಯಾನೇಜ್ಮೆಂಟ್ ನಿರ್ಧಾರ ಕೈಗೊಳ್ಳಲಿದೆ. ಇದಾದ ನಂತರವೇ ಜಾಕೋಬ್ ಡಫಿ ಅವರನ್ನು ಅಧಿಕೃತವಾಗಿ ತಂಡಕ್ಕೆ ಸೇರಿಸಿಕೊಳ್ಳಬಹುದಾಗಿದೆ.
ಕೋಚ್ ಹೇಳಿದ್ದೇನು?
ನ್ಯೂಜಿಲೆಂಡ್ ಹೆಡ್ ಕೋಚ್ ಗ್ಯಾರಿ ಸ್ಟೀಡ್ ಮಾತನಾಡಿದ್ದು, ಜಾಕೋಬ್ ಡಫಿ ಅವರನ್ನು ತಂಡದಲ್ಲಿ ಬೆನ್ ಸಿಯರ್ಸ್‌ಗೆ ಬಲಿಷ್ಠ ಬದಲಿ ಆಟಗಾರ ಎಂದು ಬಣ್ಣಿಸಿದ್ದಾರೆ. ಇತ್ತೀಚೆಗೆ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಜಾಕೋಬ್ ಡಫಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಫೆಬ್ರವರಿ 19 ರಂದು ಕರಾಚಿಯಲ್ಲಿ ಆತಿಥೇಯ ಪಾಕಿಸ್ತಾನ ವಿರುದ್ಧ ನಡೆಯಲಿರುವ ಪಂದ್ಯದೊಂದಿಗೆ ನ್ಯೂಜಿಲೆಂಡ್ ಚಾಂಪಿಯನ್ಸ್ ಟ್ರೋಫಿಯಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ.
ನ್ಯೂಜಿಲೆಂಡ್ ತಂಡ
ಮಿಚೆಲ್ ಸ್ಯಾಂಟ್ನರ್ (ನಾಯಕ), ಮೈಕೆಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್‌ಮನ್, ಡೆವೊನ್ ಕಾನ್ವೇ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಟಾಮ್ ಲ್ಯಾಥಮ್, ಡ್ಯಾರಿಲ್ ಮಿಚೆಲ್, ವಿಲ್ ಒ'ರೂರ್ಕ್, ಗ್ಲೆನ್ ಫಿಲಿಪ್ಸ್, ರಾಚಿನ್ ರವೀಂದ್ರ, ನಾಥನ್ ಸ್ಮಿತ್, ಕೇನ್ ವಿಲಿಯಮ್ಸನ್, ವಿಲ್ ಯಂಗ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications