ವಿಶ್ವದ ಕ್ರಿಕೆಟ್ ಅಭಿಮಾನಿಗಳ ಚಿತ್ತ ಈಗ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಆಶಸ್ ಸರಣಿಯ ಮೇಲೆ ನೆಟ್ಟಿದೆ. ಈ ಸರಣಿ ನವೆಂಬರ್ 21 ರಿಂದ ಆರಂಭವಾಗಲಿದೆ. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಸಹ ಕಾತುರದಿಂದ ಕಾಯುತ್ತಿದ್ದಾರೆ. ಈ ಸರಣಿಯಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡವನ್ನು ಬೆನ್ ಸ್ಟೋಕ್ಸ್ ಮುನ್ನಡೆಸುತ್ತಿದ್ದಾರೆ. ಈ ವೇಳೆ ಸ್ಟೋಕ್ಸ್ ದಾಖಲೆಯೊಂದನ್ನು ಬರೆಯುವ ಕನಸಿನಲ್ಲಿದ್ದಾರೆ.
ಐದು ಪಂದ್ಯಗಳ ಆಶಸ್ ಸರಣಿಯ ಮೊದಲ ಪಂದ್ಯ ಪರ್ತ್‌ನಲ್ಲಿ ನಡೆಯಲಿದೆ. ಇದಕ್ಕಾಗಿ ಉಭಯ ತಂಡಗಳು ಸಿದ್ಧತೆ ನಡೆಸಿವೆ. ಈ ವೇಳೆ ಬೆನ್ ಸ್ಟೋಕ್ಸ್ ಕಣ್ಣುಗಳು ಮಾತ್ರ ದಾಖಲೆಯ ಮೇಲೆ ನೆಟ್ಟಿದೆ. ಬೆನ್ ಸ್ಟೋಕ್ಸ್ ನಾಯಕತ್ವದಲ್ಲಿ ಇಂಗ್ಲೆಂಡ್ ಹಲವು ಮೈಲುಗಲ್ಲನ್ನು ತಲುಪಿದೆ. ಈ ಬಾರಿ ಬೆನ್ ಸ್ಟೋಕ್ಸ್ ವೈಯಕ್ತಿಕ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ.

ಬೆನ್ ಸ್ಟೋಕ್ಸ್ 34 ವರ್ಷ ಆಟಗಾರ. ಇವರು ನಾಯಕತ್ವ ಹಾಗೂ ಆಲ್‌ರೌಂಡರ್ ಪ್ರದರ್ಶನದಿಂದ ತಂಡಕ್ಕೆ ನೆರವಾಗಿದ್ದಾರೆ. ಇವರು ಈ ವರೆಗೆ 115 ಟೆಸ್ಟ್ ಪಂದ್ಯಗಳ, 206 ಇನಿಂಗ್ಸ್‌ನಲ್ಲಿ ಬ್ಯಾಟ್ ಮಾಡಿದ್ದಾರೆ. ಈ ವೇಳೆ ಇವರು 7032 ರನ್‌ಗಳನ್ನು 35ರ ಸರಾಸರಿಯಲ್ಲಿ ರನ್ ಕಲೆ ಹಾಕಿದ್ದಾರೆ. ಈ ವೇಳೆ ಇವರು 810 ಬೌಂಡರಿ, 136 ಸಿಕ್ಸರ್ ಸಿಡಿಸಿದ್ದಾರೆ. ಮುಂಬರುವ 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಬೆನ್ ಸ್ಟೋಕ್ಸ್ ಇನ್ನು 14 ಸಿಕ್ಸರ್ ಬಾರಿಸುವಲ್ಲಿ ಸಫಲರಾದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 150 ಸಿಕ್ಸರ್ ಬಾರಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಬೆನ್ ಸ್ಟೋಕ್ಸ್, ಇಂಗ್ಲೆಂಡ್, 136 ಸಿಕ್ಸರ್
ಬ್ರೆಂಡನ್ ಮೆಕಲಮ್, ನ್ಯೂಜಿಲೆಂಡ್, 107 ಸಿಕ್ಸರ್
ಆಡಂ ಗಿಲ್‌ಕ್ರಿಸ್ಟ್, ಆಸ್ಟ್ರೇಲಿಯಾ, 100 ಸಿಕ್ಸರ್
ಟೀಮ್ ಸೌಥಿ, ನ್ಯೂಜಿಲೆಂಡ್, 98 ಸಿಕ್ಸರ್
ಕ್ರಿಸ್ ಗೇಲ್, ವೆಸ್ಟ್ ಇಂಡೀಸ್, 98 ಸಿಕ್ಸರ್

ಆಶಸ್ ಸರಣಿಯ ವೇಳೆ ಎಲ್ಲರ ಕಣ್ಣುಗಳು ಇಂಗ್ಲೆಂಡ್ ನಾಯಕನ ಮೇಲೆ ನೆಟ್ಟಿರಲಿವೆ. ಇವರು ಆಶಸ್ ಸರಣಿಯಲ್ಲಿ ಆಡಿದ 45 ಇನಿಂಗ್ಸ್‌ಗಳಲ್ಲಿ 36.32 ಸರಾಸರಿಯಲ್ಲಿ 1562 ರನ್ ಗಳಿಸಿದ್ದಾರೆ. ಇದರಲ್ಲಿ 4 ಶತಕ, 8 ಅರ್ಧಶತಕಗಳು ಸೇರಿವೆ. ಆಸ್ಟ್ರೇಲಿಯಾದಲ್ಲಿ ಇವರ ಪ್ರದರ್ಶನ ಕೊಂಚ ನೀರಸವಾಗಿದೆ. ಇವರು ಆಡಿದ 9 ಪಂದ್ಯಗಳಲ್ಲಿ 515 ರನ್ ಸಿಡಿಸಿದ್ದು, 1 ಶತಕ, 2 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ ಸ್ಟೋಕ್ಸ್ ಸ್ಥಿರ ಪ್ರದರ್ಶನ ನೀಡಿದ್ದು ವಿಕೆಟ್ ಬೇಟೆ ನಡೆಸಿದ್ದಾರೆ. ಇವರು 31 ಇನಿಂಗ್ಸ್‌ಗಳಲ್ಲಿ ಬೌಲಿಂಗ್ ನಡೆಸಿ 41 ವಿಕೆಟ್ ಪಡೆದಿದ್ದಾರೆ. ಅಲ್ಲದೆ 2 ಬಾರಿ 5ಕ್ಕೂ ಹೆಚ್ಚು ವಿಕೆಟ್ ಪಡೆದ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾದಲ್ಲೂ ಸ್ಟೋಕ್ಸ್ 19 ವಿಕೆಟ್ ಕಿತ್ತಿದ್ದಾರೆ.