ಭಾರತ ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿದೆ. ಈ ವೇಳೆ ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದು ಪಂದ್ಯಗಳ ಟೆಸ್ಟ್ ಸರಣಿ ಜೂನ್ 20 ರಂದು ಆರಂಭವಾಗಲಿದೆ. ಮೊದಲ ಪಂದ್ಯಕ್ಕೆ ಹೆಡಿಂಗ್ಲಿ ಅಂಗಳ ಸಜ್ಜಾಗಿದೆ. ಈ ವೇಳೆ ಟೀಮ್ ಇಂಡಿಯಾವನ್ನು ಇದೇ ಮೊದಲ ಬಾರಿಗೆ ಶುಭಮನ್ ಗಿಲ್ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಹೀಗಾಗಿ ಈ ಟೆಸ್ಟ್ ಸರಣಿಯ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ. ಜೂನ್ 20 ರಿಂದ ಆರಂಭವಾಗಲಿರುವ ಈ ಸರಣಿಯ ಬಗ್ಗೆ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮಾತನಾಡಿದ್ದಾರೆ.
ಇಂಗ್ಲೆಂಡ್ ಕ್ರಿಕೆಟ್ ಬೆನ್ ಸ್ಟೋಕ್ಸ್ ಅವರ ವಿಡಿಯೋ ಒಂದನ್ನು ಸಾಮಾಹಿಕ ತಾಣದಲ್ಲಿ ಹಾಕಿಕೊಂಡಿದೆ. ಈ ವಿಡಿಯೋದಲ್ಲಿ ಬೆನ್ ಸ್ಟೋಕ್ಸ್ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಆದರೆ ಎಲ್ಲರ ಗಮನ ಸೆಳೆದಿದ್ದು ಮಾತ್ರ ವಿರಾಟ್ ಕೊಹ್ಲಿ ಅವರ ಬಗ್ಗೆ ಅವರು ಆಡಿದ ಮಾತುಗಳು.

"ಟೀಮ್ ಇಂಡಿಯಾ ನಿಜಕ್ಕೂ ವಿರಾಟ್ ಕೊಹ್ಲಿ ಅವರನ್ನು ಮಿಸ್ ಮಾಡಿಕೊಳ್ಳಲಿದೆ. ವಿರಾಟ್ ಕೊಹ್ಲಿ ಅವರ ಹೋರಾಟದ ಮನೋಭಾವ ಮೈದಾನದಲ್ಲಿ ಭಾರತಕ್ಕೆ ಕಾಡಲಿದೆ. ಪಂದ್ಯ ಗೆಲ್ಲಲೇ ಬೇಕು ಎಂಬ ಹುಮ್ಮಸ್ಸು ನಿಜಕ್ಕೂ ಈ ಬಾರಿ ಮಿಸ್ ಮಾಡಿಕೊಳ್ಳಲಿದ್ದೇವೆ. ಅಲ್ಲದೆ ಮೈದಾನದಲ್ಲಿ ಜೆರ್ಸಿ ನಂಬರ್ 18 ಅನುಪಸ್ಥಿತಿ ಎದ್ದು ಕಾಣಲಿದೆ. ಈ ಜೆರ್ಸಿ ನಂಬರ್ ಟೀಮ್ ಇಂಡಿಯಾದ ಯಾವುದೇ ಆಟಗಾರರ ಶರ್ಟ್ ಮೇಲೆ ಕಾಣಲು ಆಗದು. ಅವರು ತಮ್ಮ ಕ್ಲಾಸ್‌ನ್ನು ಬಹು ವರ್ಷಗಳ ಕಾಲ ಕಾಯ್ದುಕೊಂಡು ಬಂದಿದ್ದಾರೆ" ಎಂದು ಬೆನ್ ಸ್ಟೋಕ್ಸ್ ಹೇಳಿದ್ದಾರೆ.
ವಿರಾಟ್ ಕೊಹ್ಲಿ ನಿವೃತ್ತಿಯ ಬಗ್ಗೆಯೂ ಇಂಗ್ಲೆಂಡ್ ನಾಯಕ ಮಾತನಾಡಿದ್ದಾರೆ. ವಿರಾಟ್ ನಿವೃತ್ತಿರಾಗಿದ್ದಾರೆಂದು ತಿಳಿದ ಬಳಿಕ ನಾನು ಅವರಿಗೆ ಮೆಸೇಜ್ ಮಾಡಿದೆ. ನೀವು ಎದುರಾಳಿಯಾಗಿ ಇಲ್ಲದೇ ಅಂಗಳ ಪ್ರವೇಶಿಸುವುದು ಕಷ್ಟ ಎಂದು ತಿಳಿಸಿದೆ. ನಾವಿಬ್ಬರು ಎದುರು ಬದುರು ಆಡಲು ಇಷ್ಟ ಪಡುತ್ತೇವೆ. ಆದರೆ ಇಬ್ಬರೂ ಮೈದಾನದ ಹೊರಗೆ ಒಳ್ಳೆಯ ಸ್ನೇಹಿತರು ಎಂದು ಸ್ಟೋಕ್ಸ್ ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಇವರಿಗೆ ನಾಲ್ಕನೇ ಸ್ಥಾನ. ಇವರು ಟೆಸ್ಟ್‌ನಲ್ಲಿ 46.85ರ ಸರಾಸರಿಯಲ್ಲಿ 9230 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 30 ಶತಕ ಹಾಗೂ 31 ಅರ್ಧಶತಕಗಳು ಸೇರಿವೆ. ಇವರು 2016 ಹಾಗೂ 2019ರ ಅವಧಿಯಲ್ಲಿ ಸರಾಸರಿ 55ಕ್ಕಿಂತ ಕಡಿಮೆ ಆಗಲೇ ಇಲ್ಲ. ಇನ್ನು ಎರಡು ವರ್ಷಗಳಲ್ಲಿ ಇವರು ಪ್ರತಿ ವರ್ಷ 75ಕ್ಕೂ ಹೆಚ್ಚು ಸರಾಸರಿಯಲ್ಲಿ ರನ್ ಕಲೆ ಹಾಕಿದ್ದಾರೆ. ಸಚಿನ್ ತೆಂಡೂಲ್ಕರ್ ನಿವೃತ್ತರಾದ ಬಳಿಕ ಕೊಹ್ಲಿ ಈ ಸ್ಥಾನದಲ್ಲಿ ಬ್ಯಾಟ್ ಮಾಡುತ್ತಿದ್ದಾರೆ. ಇವರು ನಾಲ್ಕನೇ ಕ್ರಮಾಂಕದಲ್ಲಿ ಒಟ್ಟು 160 ಟೆಸ್ಟ್ ಇನಿಂಗ್ಸ್‌ಗಳಲ್ಲಿ ಬ್ಯಾಟ್ ಮಾಡಿದ್ದು, 7564 ರನ್ ಕಲೆ ಹಾಕಿದ್ದಾರೆ.