ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ವಿರುದ್ಧದ ಆಶಸ್ ಸರಣಿಯ ಎರಡನೇ ಪಂದ್ಯದ ಕೊನೆಯ ದಿನದಾಟದ ಒಂದು ಘಟನೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಜಾನಿ ಬೈರ್‌ಸ್ಟೋವ್ ಅವರನ್ನು ಆಸ್ಟ್ರೇಲಿಯಾ ಔಟ್ ಮಾಡಿರುವ ರೀತಿಗೆ ಭಾರೀ ಟೀಕೆಗಳು ವ್ಯಕ್ತವಾಗುತ್ತಿದೆ. ಕೆಲವರು ವಿಚಾರವಾಗಿ ಆಸಿಸ್ ತಂಡದ ನಿಲುವನ್ನು ಸಮರ್ಥಿಸಿಕೊಂಡರೆ ಇನ್ನೂ ಕೆಲವು ಅಭಿಮಾನಿಗಳು ಹಾಗೂ ಕ್ರಿಕೆಟ್ ಪಂಡಿತರು ಆಸಿಸ್ ಆಟದ ಬಗ್ಗೆ ತೀವ್ರ ಟೀಕೆ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಪಂದ್ಯದ ಮುಕ್ತಾಯದ ಬಳಿಕ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಸೇರಿದಂತೆ ಇಂಗ್ಲೆಂಡ್ ತಂಡದ ಆಟಗಾರರು ಈ ವಿಚಾರವಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಮಾಧ್ಯಮಗಳ ಮಧ್ಯೆಯೂ ಇದು ಸಮರಕ್ಕೆ ಕಾರಣವಾಗಿದೆ. ಆಸ್ಟ್ರೇಲಿಯಾದ ಪತ್ರಿಕೆಯೊಂದು ಇಂಗ್ಲೆಂಡ್ ತಂಡದ ಆಟಗಾರರು ಬೈರ್‌ಸ್ಟೋವ್ ಔಟ್ ವಿಚಾರವಾಗಿ ನೀಡುತ್ತಿರುವ ಪ್ರತಿಕ್ರಿಯೆಗೆ ಕಟುವಾಗಿ ಮತ್ತು ವ್ಯಂಗ್ಯವಾಗಿ ಟೀಕಿಸಿ ವರದಿ ಮಾಡಿದೆ. ಅಲ್ಲದೆ 'ಅಳುತ್ತಿರುವ ಮಕ್ಕಳು' ಎಂದು ಇಂಗ್ಲೆಂಡ್ ತಂಡವನ್ನು ಕರೆದು ಲೇವಡಿ ಮಾಡಿದೆ ಆಸಿಸ್ ಮಾಧ್ಯಮ.

ಆಸ್ಟ್ರೇಲಿಯಾದ 'ದಿ ವೆಸ್ಟ್ ಆಸ್ಟ್ರೇಲಿಯನ್' ಪತ್ರಿಕೆ ತನ್ನ ಮುಖಪುಟದಲ್ಲಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಅವರು ಮಕ್ಕಳು ಬಾಯಿಯಲ್ಲಿ ಪೆಸಿಫಯರ್ ಇಟ್ಟುಕೊಳ್ಳುವಂಥಾ ವ್ಯಂಗ್ಯವಾಡುವ ಚಿತ್ರವವನ್ನು ಹಂಚಿಕೊಂಡಿದೆ. ಈ ಮೂಲಕ ಇಂಗ್ಲೆಂಡ್ ಬೆಂಬಲಿಗರನ್ನು ಕೆರಳುವಂತೆ ಮಾಡಿದೆ.
ಜಾನಿ ಬೈರ್‌ಸ್ಟೋವ್ ಔಟ್ ವಿಚಾರವಾಗಿ ಇಂಗ್ಲೆಂಡ್ ಮಾಧ್ಯಮಗಳು ಕೂಡ ಸಾಕಷ್ಟು ಕಟುವಾಗಿ ಆಸ್ಟ್ರೇಲಿಯಾವನ್ನು ಟೀಕಿಸಿದೆ. ಕ್ರಿಕೆಟ್‌ನ ಕ್ರೀಡಾ ಸ್ಪೂರ್ತಿಯನ್ನು ಆಸ್ಟ್ರೇಲಿಯಾ ಮಣ್ಣು ಪಾಲು ಮಾಡಿದೆ ಆಸ್ಟ್ರೇಲಿಯಾ ಎಂದು ವರದಿ ಮಾಡಿದ್ದವು. ಇದಕ್ಕೆ ಪ್ರತಿಯಾಗಿ ಆಸ್ಟ್ರೇಲಿಯಾದ ಮಾಧ್ಯಮಗಳು ಕೂಡ ತೀರುಗೇಟು ನೀಡಿದೆ. ಅದರಲ್ಲಿ ವೆಸ್ಟ್ ಆಸ್ಟ್ರೇಲಿಯನ್ ಪತ್ರಿಕೆ ನೀಡಿರುವ ಹೆಡ್‌ಲೈನ್ ಹಾಗೂ ಫೋಟೋ ಇಂಗ್ಲೆಂಡ್ ಆಕ್ರೋಶಕ್ಕೆ ತುಪ್ಪಸುರಿಯುವಂತೆ ಮಾಡಿದೆ.
ಇನ್ನು ಈ ವರದಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ವೈರಲ್ ಆಗಿರುವ ಆಸಿಸ್ ಪತ್ರಿಕೆಯ ಫೋಟೋಗೆ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಪ್ರತಿಕ್ರಿಯೆ ನೀಡಿದ್ದಾರೆ. "ಅದು ಖಂಡಿಯವಾಗಿಯೂ ನಾನಲ್ಲ. ನಾನು ಯಾವತ್ತೂ ಹೊಸ ಚೆಂಡಿನಲ್ಲಿ ಬೌಲಿಂಗ್ ಮಾಡಿಲ್ಲ" ಎಂದು ಬೆನ್ ಸ್ಟೋಕ್ಸ್ ಲಘುವಾಗಿಯೇ ಪ್ರತ್ಯುತ್ತರ ನೀಡಿದ್ದಾರೆ.
ಇನ್ನು ಬೈರ್‌ಸ್ಟೋವ್ ಔಟ್ ವಿಚಾರ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾದ ಹಾಲಿ ಮಾಜಿ ಕ್ರಿಕೆಟಿಗರು ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣ ಮಾತ್ರವಲ್ಲದೆ ಎರಡು ತಂಡಗಳ ಪ್ರಧಾನಮಂತ್ರಿಗಳಿಂದ ಕೂಡ ಈ ವಿಚಾರವಾಗಿ ಪ್ರತಿಕ್ರಿಯೆಗಳು ಹೊರಬಿದ್ದಿದೆ. ಹೀಗಾಗಿ ಈ ಸರಣಿಯ ಮೂರನೇ ಪಂದ್ಯ ಹೆಡಿಂಗ್ಲೆಯಲ್ಲಿ ನಡೆಯಲಿದ್ದು ಅದು ಪಂದ್ಯವನ್ನು ಮತ್ತಷ್ಟು ಕಾವೇರುವಂತೆ ಮಾಡುವುದರಲ್ಲಿ ಅನುಮಾನವಿಲ್ಲ.