ಭರವಸೆಯ ಆಟಗಾರ ನವೀನ್ ಎಂಜಿ (ಅಜೇಯ 33) ಹಾಗೂ ಸುರಜ್ ಆಹುಜ್ (ಅಜೇಯ 27) ಇವರುಗಳ ಭರ್ಜರಿ ಜೊತೆಯಾಟದ ಕಾರಣದಿಂದ ಬೆಂಗಳೂರು ಬ್ಲಾಸ್ಟರ್ಸ್ ಮಹಾರಾಜ ಟ್ರೋಫಿಯಲ್ಲಿ 3 ವಿಕೆಟ್‌ಗಳಿಂದ ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಮಣಿಸಿತು.
ಮೈಸೂರಿನ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಮೈದಾನದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಹುಬ್ಬಳ್ಳಿ ಟೈಗರ್ಸ್ ತಂಡದ ಆರಂಭ ಕಳಪೆಯಾಗಿತ್ತು. ಪ್ರಖತ್ ಚರ್ತುವೇದಿ (9), ಮೊಹಮ್ಮದ್ ತಹಾ (0), ದೇವದತ್ ಪಡಿಕ್ಕಲ್ (8) ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ. ಇನ್ನು ಕೃಷ್ಣಾ ಶ್ರೀಜೇತ್ 1 ಬೌಂಡರಿ, 1 ಸಿಕ್ಸರ್ ಸಹಾಯದಿಂದ 20 ರನ್ ಸಿಡಿಸಿ ಔಟ್ ಆದರು. ಉಳಿದಂತೆ ಮನ್ವಂತ್ ಕುಮಾರ್ 16, ಕೆಸಿ ಕಾರ್ಯಪ್ಪ 13 ರನ್ ಬಾರಿಸಿ ಮಿಂಚಿದರು.

ಹುಬ್ಬಳ್ಳಿ ತಂಡದ ಪರ ವಿಕೆಟ್ ಕೀಪರ್ ಬ್ಯಾಟರ್ ಶಿವಕುಮಾರ್ ರಕ್ಷಿತ್ ಭರ್ಜರಿ ಬ್ಯಾಟಿಂಗ್ ನಡೆಸಿದರು. ಇವರು 42 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ಸಹಾಯದಿಂದ ಅಜೇಯ 61 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ಹುಬ್ಬಳ್ಳಿ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 141 ರನ್ ಸೇರಿಸಿತು.
ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಬೆಂಗಳೂರು ತಂಡದ ಆರಂಭ ಕಳಪೆಯಾಗಿತ್ತು ರೋಹನ್ ಪಾಟೀಲ್ (1), ಮಯಾಂಕ್ ಅಗರ್‌ವಾಲ್ (11), ಭುವನ್ ರಾಜು (7) ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಭರವಸೆಯ ಆರಂಭಿಕ ಆಟಗಾರ ಎಲ್ ಆರ್ ಚೇತನ್ 24 ಎಸೆತಗಳಲ್ಲಿ 32 ರನ್ ಬಾರಿಸಿದರು. ನಾಯಕ ಶುಭಮನ್ ಹೆಗ್ಡೆ 24 ರನ್ ಸಿಡಿಸಿದರು. ಭರವಸೆಯ ಆಟಗಾರ ನವೀನ್ ಎಂಜಿ 12 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್ ಸಹಾಯದಿಂದ 33 ರನ್ ಬಾರಿಸಿ ಗೆಲುವಿನಲ್ಲಿ ಮಿಂಚಿದರು. ಇನ್ನು ಸುರಜ್ ಅಹುಜಾ 20 ಎಸೆತಗಳಲ್ಲಿ 27 ರನ್ ಬಾರಿಸಿದರು. ಅಂತಿಮವಾಗಿ ಬೆಂಗಳೂರು ಬ್ಲಾಸ್ಟರ್ಸ್ 19.2 ಓವರ್‌ಗಳಲ್ಲಿ 7 ವಿಕೆಟ್‌ಗೆ 145 ರನ್ ಸೇರಿಸಿ ಜಯ ಸಾಧಿಸಿತು.

ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಗುಲ್ಬರ್ಗ್ ಮಿಸ್ಟೇಕ್ಸ್ ವಿರುದ್ಧ ಬ್ಯಾಟ್ ಮಾಡಿದ ಮೈಸೂರು ವಾರಿಯರ್ಸ್ ತಂಡದ ಪರ ಎಂ ವೆಂಕಟೇಶ್ ಅಮೋಘ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾದರು. ಇವರು 53 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್ ಸಹಾಯದಿಂದ ಅಜೇಯ 93 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ಮನೀಷ್ ಪಾಂಡೆ 29, ಯಶೋವರ್ಧನ್ ಪ್ರತಾಪ್ 48 ರನ್ ಬಾರಿಸಿದರು. ಅಂತಿಮವಾಗಿ ಮೈಸೂರು ವಾರಿಯರ್ಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 209 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಗುಲ್ಬರ್ಗ್ ತಂಡದ ಆರಂಭಿಕರಾದ ಲುವನಿತ್ ಸಿಸೊಡಿಯಾ (37), ನಿಕಿನ್ ಜೋಸ್ (21) ಮೊದಲ ವಿಕೆಟ್‌ಗೆ 52 ರನ್ ಸೇರಿಸಿದರು. ಸ್ಮರಣ್ ರವಿಚಂದ್ರನ್ (38), ಕೆ ಸಿದ್ಧಾರ್ಥ್ (ಅಜೇಯ 49), ಪ್ರವೀಣ್ ದುಬೆ (ಅಜೇಯ 53) ಗೆಲುವಿನಲ್ಲಿ ಮಿಂಚಿದರು. ಅಂತಿಮವಾಗಿ ಗುಲ್ಬರ್ಗ್ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 213 ರನ್ ಸೇರಿಸಿತು.