ಜೈಪುರ: ಪ್ರಸಕ್ತ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರು ಬೆಂಗಳೂರು ಬುಲ್ಸ್ ತಾನಾಡಿದ 10ನೇ ಪಂದ್ಯದಲ್ಲಿ 5ನೇ ಸೋಲು ಕಂಡಿದೆ. 12ನೇ ಅವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯ 49ನೇ ಪಂದ್ಯ ನಿಗದಿತ ಸಮಯದ ಮುಕ್ತಾಯಕ್ಕೆ 36-36 ಅಂಕಗಳಿಂದ ಬುಲ್ಸ್, ಯುಪಿ ಯೋಧಾಸ್ ವಿರುದ್ಧ ಸಮಬಲ ಸಾಧಿಸಿತು. ಹೊಸ ನಿಯಮದನ್ವಯ ನಡೆದ ರೇಡಿಂಗ್‌ನಲ್ಲಿ ಯೋಧಾಸ್ ಮೇಲುಗೈ ಸಾಧಿಸಿತು. ಈ ಮೂಲಕ ಬೆಂಗಳೂರು ಬುಲ್ಸ್ ವಿರೋಚಿತ ಸೋಲು ಕಂಡಿದೆ.
ಪಂದ್ಯ ಮುಕ್ತಾಯಕ್ಕೆ ಇನ್ನು 5 ನಿಮಿಷ ಬಾಕಿ ಇದ್ದಾಗ ಬೆಂಗಳೂರು ಬುಲ್ಸ್ 3 ಅಂಕಗಳ ಹಿನ್ನಡೆಯನ್ನು ಅನುಭವಿಸುತ್ತಿತ್ತು. ಕೊನೆಯಲ್ಲಿ ಬುಲ್ಸ್ ಆಟಗಾರರು ನೀಡಿದ ಸ್ಥಿರ ಪ್ರದರ್ಶನದ ಪರಿಣಾಮ ಪಂದ್ಯ ಟೈ ಆಯಿತು. ಆದರೆ ಯುಪಿ ಯೋಧಾಸ್ ಸಮಯೋಚಿತ ದಾಳಿ ನಡೆಸಿ ಅಂಕವನ್ನು ಕಲೆ ಹಾಕಿತು.

ಮೊದಲಾವಧಿಯ ಆಟದಲ್ಲಿ ಬುಲ್ಸ್ ಭರ್ಜರಿ ಪ್ರದರ್ಶನ ನೀಡಿ ಗಮನ ಸೆಳೆಯಿತು. ಈ ವೇಳೆ ಬುಲ್ಸ್ ಆರಂಭದಿಂದಲೂ ಅಂಕಗಳ ಬೇಟೆಯಲ್ಲಿ ಮುನ್ನಡೆ ಸಾಧಿಸಿತ್ತು. ಇದೇ ಅವಧಿಯ 11ನೇ ನಿಮಿಷದಲ್ಲಿ ಬುಲ್ಸ್ ಯುಪಿ ತಂಡದ ಅಂಗಳವನ್ನು ಖಾಲಿ ಮಾಡಿತು. ಮೊದಲ 20 ನಿಮಿಷದ ಆಟದಲ್ಲಿ ಬೆಂಗಳೂರು ಬುಲ್ಸ್ 1 ಅಂಕದ ಮುನ್ನಡೆ ಕಂಡಿತ್ತು. ಬುಲ್ಸ್ ಈ ಅವಧಿಯಲ್ಲಿ 20-19 ಅಂಕಗಳಿಂದ ಮುನ್ನಡೆ ಸಾಧಿಸಿತ್ತು. ಇದೇ ಅವಧಿಯಲ್ಲಿ ಬೆಂಗಳೂರು ಸಹ ಒಮ್ಮೆ ಆಲೌಟ್ ಆಗಿತ್ತು. ಬೆಂಗಳೂರು ಹಾಗೂ ಯುಪಿ ತಂಡದ ರೈಡರ್‌ಗಳು ಭರ್ಜರಿ ರೈಡ್ ನಡೆಸಿ ಮಿಂಚಿದರು.
ಇನ್ನು ಎರಡನೇ ಅವಧಿಯ ಆಟದಲ್ಲಿ ಉಭಯ ತಂಡಗಳು ಕೆಚ್ಚೆದೆಯ ಆಟವನ್ನು ಆಡಿದವು. ಈ ವೇಳೆ ಬುಲ್ಸ್ ಸವಾಲನ್ನು ಮೆಟ್ಟಿನಿಂತ ಯುಪಿ ಅಂಕ ಬೇಟೆಗೆ ಚುರುಕು ಮುಟ್ಟಿಸಿತು. ಪಂದ್ಯದ 32ನೇ ನಿಮಿಷದಲ್ಲಿ ಬೆಂಗಳೂರು ಮತ್ತೊಮ್ಮೆ ಅಂಗಳವನ್ನು ಖಾಲಿ ಮಾಡಿತು. ಪರಿಣಾಮ ಯುಪಿ ಅಂಕ ಬೇಟೆಯಲ್ಲಿ ಕೊಂಚ ಮುನ್ನಡೆ ಸಾಧಿಸಿತು ಈ ಹಂತದಲ್ಲಿಎಚ್ಚರಿಕೆ ಆಟಕ್ಕೆ ಮಣೆ ಹಾಕಿದ ಬುಲ್ಸ್, ದಾಳಿ ಮತ್ತು ಟ್ಯಾಕಲ್ ಎರಡರಲ್ಲೂ ಪುಟಿದೇಳುವ ಮೂಲಕ 29-32ರಲ್ಲಿ ಹಿನ್ನಡೆ ತಗ್ಗಿಸಿತು. ಕೊನೆಯಲ್ಲಿ ಉತ್ತಮ ಆಟದ ಪ್ರದರ್ಶನ ನೀಡಿದ ಯುಪಿ ಗೆಲುವು ದಾಖಲಿಸಿತು. ಬೆಂಗಳೂರು ಬುಲ್ಸ್ ತನ್ನ ಮುಂದಿನ ಪಂದ್ಯದಲ್ಲಿಅಕ್ಟೋಬರ್ 2ರಂದು ಪುಣೇರಿ ಪಲ್ಟನ್ ತಂಡದ ಸವಾಲು ಎದುರಿಸಲಿದೆ.
ವಿಜೇತ ತಂಡದ ಪರ ಭವಾನಿ ರಜಪೂತ್ 10 ಅಂಕ ಕಲೆ ಹಾಕಿದರು. ಪರಾಜಿತ ತಂಡದ ಪರ ಅಲಿರಾಜ್ ಮಿರ್ಜೈನ್ (11) ಹಾಗೂ ಆಕಾಶ್ ಶಿಂದೆ (7) ಭರ್ಜರಿ ಪ್ರದರ್ಶನ ನೀಡಿ ಮಿಂಚಿದರು.