ISL Semi-Final BFC: ಬೆಂಗಳೂರು ಎಫ್‌ಸಿಗೆ 2-0 ಗೋಲುಗಳ ಭರ್ಜರಿ ಜಯ
ಬುಧವಾರ ನಿನ್ನೆ ಬೆಂಗಳೂರು ಕ್ರೀಡಾ ಅಭಿಮಾನಿಗಳಿಗೆ ಹಬ್ಬ. ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಹಾಗೂ ಜಿಟಿ ತಂಡಗಳು ಕಾದಾಟವನ್ನು ನಡೆಸಿದರೆ, ಕಂಠೀರವಾ ಕ್ರೀಡಾಂಗಣದಲ್ಲಿ ಬೆಂಗಳೂರು ಫುಟ್ವಾಲ್ ಕ್ಲಬ್ ಅಖಾಡ ಪ್ರವೇಶಿಸಿತ್ತು. ಈ ವೇಳೆ ಚಿನ್ನಸ್ವಾಮಿ ಅಂಗಳದಲ್ಲಿ ಆರ್‌ಸಿಬಿ ಸೋಲು ಕಂಡರೆ, ಇತ್ತ ಕಂಠೀರವಾದಲ್ಲಿ ಬೆಂಗಳೂರು ಎಫ್‌ಸಿ ತಂಡ ಅಂಮೋಘ ಜಯ ದಾಖಲಿಸಿದೆ. ಐಎಸ್‌ಎಲ್ ಸೆಮಿಫೈನಲ್‌ನ ಮೊದಲ ಚರಣದಲ್ಲಿ ಬಿಎಫ್‌ಸಿ ಗೆಲುವು ದಾಖಲಿಸಿದೆ.
ಬೆಂಗಳೂರಿನ ಶ್ರೀ ಕಂಠೀರವಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬಿಎಫ್‌ಸಿ ತಂಡ ಗೋವಾ ತಂಡವನ್ನು ಎದುರಿಸಿತು. ಈ ವೇಳೆ ಆರಂಭದಿಂದಲೂ ಕೆಚ್ಚೆದೆಯ ಆಟವನ್ನು ಪ್ರದರ್ಶಿಸಿದ ಬೆಂಗಳೂರು ತಂಡ ಅರ್ಹ ಜಯ ದಾಖಲಿಸಿದೆ. ಆಡಿದ ಎರಡೂ ಅವಧಿಯಲ್ಲಿ ತಲಾ ಒಂದು ಗೋಲು ದಾಖಲಿಸಿರುವ ಬೆಂಗಳೂರು ಮೊದಲು ಸೆಮಿಫೈನಲ್‌ನಲ್ಲಿ ಗೆಲುವು ತನ್ನದಾಗಿಸಿಕೊಂಡಿದೆ. ಈ ಮೂಲಕ ಎರಡನೇ ಸೆಮಿಫೈನಲ್‌ಗೆ ಹುಮ್ಮಸಿನಿಂದ ಇಳಿಯುವ ಲೆಕ್ಕಾಚಾರವನ್ನು ಹಾಕಿಕೊಂಡಿದೆ. ಎರಡನೇ ಸೆಮಿಫೈನಲ್ ಪಂದ್ಯ ಗೋವಾದಲ್ಲಿ ಭಾನುವಾರ (ಏ.6 ರಂದು) ನಡೆಯಲಿದೆ.

ಬಿಎಫ್‌ಸಿ ಗೋಲಿನ ಉಡುಗೊರೆ
ಉಭಯ ತಂಡಗಳು ಮೊದಲಾವಧಿಯಲ್ಲಿ ಉತ್ತಮ ಆಟದ ಪ್ರದರ್ಶನ ನೀಡಿದವು. ಈ ವೇಳೆ ಗೋಲು ಬಾರಿಸುವ ಲೆಕ್ಕಾಚಾರ ಹಾಕಿಕೊಂಡಿದ್ದವು. ಈ ಅವಧಿಯಲ್ಲಿ ಉಭಯ ತಂಡಗಳು ಆಕ್ರಮಣಕಾರಿ ಆಟವನ್ನು ಆಡಿದವು. ಆದರೆ ಗೋಲು ದಾಖಲಾಗಲಿಲ್ಲ. ಈ ಅವಧಿಯ ಕೊನೆಯ ಕ್ಷಣದಲ್ಲಿ ಬೆಂಗಳೂರು ತಂಡ ಆಕ್ರಣಕಾರಿ ಆಟಕ್ಕೆ ಮಣೆ ಹಾಕಿತು. ಈ ಅವಧಿಯ ಕೊನೆಯ ಕ್ಷಣದಲ್ಲಿ ಬಿಎಫ್‌ಸಿ ಪರ ಎಡ್ಗರ್ ಮೆಂಡೆಜ್ ಗೋಲು ಪೆಟ್ಟಿಗೆಯ ಎಡಭಾಗದಿಂದ ತಳ್ಳಿದ ಚೆಂಡನ್ನು ಗೋವಾ ಆಟಗಾರ ಸಂದೇಶ್ ಜಿಂಗನ್ ಡೈವ್ ಬಿದ್ದು ತಡೆಯಲು ಮುಂದಾದರು. ಈ ವೇಳೆ ಅವರ ತಲೆಗೆ ಬಿದ್ದ ಚೆಂಡು ಗೋಲು ಪೆಟ್ಟಿಗೆ ಸೇರಿತು. ಪರಿಣಾಮ ಬೆಂಗಳೂರು 1-0 ಮುನ್ನಡೆ ಸಾಧಿಸಿತು.
ಎರಡನೇ ಅವಧಿಯಲ್ಲಿ ಅಬ್ಬರ
ಬೆಂಗಳೂರು ತಂಡ ಇದೇ ಉತ್ಸಾಹದಿಂದಲೇ ಅಂಗಳಕ್ಕೆ ಇಳಿಯಿತು. ಈ ವೇಳೆಗೆ ಆರಂಭದಲ್ಲೇ ಬೆಂಗಳೂರು ತಂಡ ಮತ್ತೊಂದು ಗೋಲು ಬಾರಿಸುವ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡಿತು. ತಂಡದ ನಮ್‌ಗ್ಯಾಲ್ ಭುಟಿಯಾ ಗೋಲು ಪೆಟ್ಟಿಗೆ ಎಡಭಾಗದಿಂದ ಒದ್ದ ಚೆಂಡನ್ನು ಎಡ್ಗರ್ ಮೆಂಡೆಜ್ ಗೋಲು ಪೆಟ್ಟಿಗೆಯ ಒಳಗೆ ತಳ್ಳುವಲ್ಲಿ ಸಫಲವಾದರು. ಕಂಠೀರವಾ ಕ್ರೀಡಾಂಗಣದಲ್ಲಿ ಹೊಸ ಉತ್ಸಾಹ ಕಂಡು ಬಂದಿತು. ಈ ಮೂಲಕ ಬೆಂಗಳೂರು ತಂಡ 2-0 ಗೋಲುಗಳ ಮುನ್ನಡೆ ಸಾಧಿಸಿತು.
ಕೊನೆಯ ಕ್ಷಣದ ವರೆಗೂ ಗೋವಾ ಗೋಲುಗಳ ಸಂಖ್ಯೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಶ್ರಮಿಸಿತು. ಆದರೆ ಫಲ ಲಭಿಸಲಿಲ್ಲ. ಈ ಪಂದ್ಯ ಮುಗಿದ ಬಳಿಕ ಪಂದ್ಯದ ಬಗ್ಗೆ ಮಾತನಾಡಿರುವ ಗೋವಾ ಕೋಚ್ ಮ್ಯಾನುಯೆಲ್ ಮಾರ್ಕ್ವೆಜ್, ಬೆಂಗಳೂರಿನಲ್ಲಿ ನಮ್ಮ ತಂಡ ಎದುರಿಸಿದ ಮೊದಲ ಸೋಲು. ನಾವು ಈ ಸೋಲಿನಿಂದ ಪಾಠ ಕಲಿತು ಭಾನುವಾರದ ಪಂದ್ಯಕ್ಕೆ ಸಿದ್ಧತೆ ನಡೆಸಲಿದ್ದೇವೆ ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications