ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 17 ವರ್ಷಗಳ ವನವಾಸಕ್ಕೆ ತೆರೆ ಬಿದ್ದಿದೆ. ಈ ಮಹಾನ್ ಸಾಧನೆ ಮಾಡಿರುವ ರಜತ್ ಪಾಟಿದಾರ್ ಪಡೆಗೆ, ತವರಿನಲ್ಲಿ ಅಮೋಘ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಆರ್‌ಸಿಬಿ ಪ್ಲೇಯರ್ಸ್ ಅಹಮದಾಬಾದ್‌ನಿಂದ ಫ್ಲೈಟ್ ಹತ್ತಿದ್ದಾರೆ. ಬೆಂಗಳೂರು ಬರುತ್ತಿದ್ದಂತೆ ಆರ್‌ಸಿಬಿ ಆಟಗಾರರಿಗೆ ಸ್ಮರಣೀಯ ಸ್ವಾಗತ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಆರ್‌ಸಿಬಿ ತಂಡ ಬೆಂಗಳೂರಿಗೆ ಬರುತ್ತಿದ್ದಂತೆ ವಿಜೇತ ತಂಡವನ್ನು ಎರಡು ಬಸ್‌ಗಳಲ್ಲಿ ಕರೆದು ಕೊಂಡು ಹೊಟೇಲ್‌ಗೆ ಹೋಗಲಾಗುತ್ತದೆ. ಈ ವೇಳೆ ಆರ್‌ಸಿಬಿ ಆಟಗಾರರು ಕೆಲಹೊತ್ತು ವಿಶ್ರಮಿಸಿದ ಬಳಿಕ ವಿಧಾನಸೌಧದತ್ತ ಪ್ರಯಾಣ ಬೆಳೆಸಲಿದ್ದಾರೆ. ವಿಧಾನಸೌಧದಲ್ಲಿ ಸರ್ಕಾರದ ಕಡೆಯಿಂದ ಆಟಗಾರರಿಗೆ ಸನ್ಮಾನ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಸರ್ಕಾರದಿಂದ ಗೌರವನ್ನು ಸ್ವೀಕರಿಸಿದ ಬಳಿಕ ಆಟಗಾರರನ್ನು ತೆರೆದ ಬಸ್‌ನಲ್ಲಿ ಚಿನ್ನಸ್ವಾಮಿ ಮೈದಾನದ ವರೆಗೆ ಮೆರವಣಿಗೆ ಮಾಡಲಾಗುತ್ತದೆ. ಈ ಕ್ಷಣವನ್ನು ಕಣ್ಣು ತುಂಬಿಕೊಳ್ಳಲು ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ರಸ್ತೆಯ ಇಕ್ಕೆಲುಗಳಲ್ಲಿ ಜಮಾಯಿಸುವ ಸಾಧ್ಯತೆ ಇದೆ. ಈ ವೇಳೆ ಆಟಗಾರರು ಸಹ ತಮ್ಮ ಅಭಿಮಾನಿಗಳ ಗೌರವವನ್ನು ಸ್ವೀಕರಿಸಲಿದ್ದಾರೆ.
ಇನ್ನು ಚಿನ್ನಸ್ವಾಮಿ ಮೈದಾನ ಪ್ರವೇಶಿಸುತ್ತಿದ್ದಂತೆ ಆರ್‌ಸಿಬಿ ಆಟಗಾರರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ವೇಳೆ ಅಭಿಮಾನಿಗಳಿಗೆ ಟಿಕೆಟ್ ಹೊಂದಿದ್ದರೆ ಮಾತ್ರ ಅವಕಾಶ ನೀಡಲಾಗುತ್ತದೆ. ಇನ್ನು ಈಗಾಗಲೇ ವಾಹನಗಳನ್ನು ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ.
ಮೊದಲ ದಾಖಲೆಯೆಂದರೆ, ಆರ್‌ಸಿಬಿ ಐಪಿಎಲ್ ಇತಿಹಾಸದಲ್ಲಿ ಒಂದು ಋತುವಿನಲ್ಲಿ ತವರಿನಾಚೆ ಆಡಿದ ಪ್ರತಿ ಪಂದ್ಯವನ್ನು ಗೆದ್ದ ಮೊದಲ ತಂಡ.
ಒಂದು ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ದಾಖಲಿಸಿದ ಅತಿ ಹೆಚ್ಚು ಗೆಲುವು 11
6154 ದಿನಗಳ ನಂತರ ಆರ್‌ಸಿಬಿ ಚೆನ್ನೈನಲ್ಲಿ ಸಿಎಸ್‌ಕೆ ತಂಡವನ್ನು ಮಣಿಸಿತು.
3619 ದಿನಗಳ ಬಳಿಕ ಮುಂಬೈನ ವಾಂಖೇಡೆ ಅಂಗಳದಲ್ಲಿ ತವರಿನ ತಂಡ ವಿರುದ್ಧ ಗೆಲುವು
ಐಪಿಎಲ್‌ನ ಒಂದೇ ಆವೃತ್ತಿಯಲ್ಲಿ 9 ಪಂದ್ಯ ಶ್ರೇಷ್ಠ ಪ್ರಶಸ್ತಿಗಳನ್ನು ಪಡೆದ ಹೆಗ್ಗಳಿಕೆ

ಪಂಜಾಬ್ ಕಿಂಗ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಸ್ಟಾರ್ ಆಟಗಾರರು ದೊಡ್ಡ ಮೊತ್ತದ ಇನಿಂಗ್ಸ್ ಕಟ್ಟಲಿಲ್ಲ. ಎಲ್ಲರೂ ತಮಗೆ ತಂಡ ನೀಡಿದ ಜವಾಬ್ದಾರಿಯನ್ನು ಅರಿತು ಆಡಿದರು. ಪರಿಣಾಮ ಆರ್‌ಸಿಬಿ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 190 ರನ್ ಸಿಡಿಸಿತು. ಸ್ಪರ್ಧಾತ್ಮಕ ಮೊತ್ತವನ್ನು ಚೇಸ್ ಮಾಡಿದ ಪಂಜಾಬ್ ತಂಡದ ಆರಂಭ ಉತ್ತಮವಾಗಿದ್ದು, ಆರಂಭಿಕರು ಹಾಕಿಕೊಟ್ಟ ಬುನಾದಿಯ ಮೇಲೆ ಮಹಲ್ ಕಟ್ಟುವಲ್ಲಿ ಮಧ್ಯಮ ಕ್ರಮಾಂಕದ ಆಟಗಾರರು ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಸ್ಪಿನ್ ಬೌಲರ್ ಕೃನಾಲ್ ಪಾಂಡ್ಯ ಅವರ ಬಿಗುವಿನ ದಾಳಿಯನ್ನು ಎದುರಿಸುವಲ್ಲಿ ಪಂಜಾಬ್ ಬ್ಯಾಟರ್‌ಗಳು ವಿಫಲರಾದರು. ಪರಿಣಾಮ ಪಂಜಾಬ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 184 ರನ್ ಸೇರಿಸಿ ಸೋಲು ಕಂಡಿತು. 17 ವರ್ಷದ ಕನಸನ್ನು ಆರ್‌ಸಿಬಿ ಆಟಗಾರರು ನನಸು ಮಾಡಿದ್ದಾರೆ.