BGT 2023: ಬೌಲಿಂಗ್ ಮಾಡಿದ ಪೂಜಾರಗೆ ಅಶ್ವಿನ್ ಕ್ಲಾಸ್: ನಾನೇನು ಕೆಲಸ ಬಿಡ್ಲಾ ಎಂದ ಸ್ಪಿನ್ನರ್

ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯನ್ನು ಭಾರತ 2-1 ಅಂತರದಲ್ಲಿ ಗೆಲುವು ಸಾಧಿಸಿದೆ. ಅಹಮದಾಬಾದ್‌ನಲ್ಲಿ ನಡೆದ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು. ವಿಶೇಷ ಎಂದರೆ ಚೇತೇಶ್ವರ ಪೂಜಾರ ಮತ್ತು ಶುಭಮನ್ ಗಿಲ್ ಒಂದು ಓವರ್ ಮಾಡುವ ಮೂಲಕ ಗಮನ ಸೆಳೆದರು.
ಪಂದ್ಯ ಮುಗಿದ ನಂತರ ಭಾರತದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಚೇತೇಶ್ವರ ಪೂಜಾರ ಬೌಲಿಂಗ್ ಬಗ್ಗೆ ಪ್ರತಿಕ್ರಿಯೆ ನೀಡಿದರು. ಪೂಜಾರ ಬೌಲಿಂಗ್ ಮಾಡುವ ಚಿತ್ರವನ್ನು ಹಂಚಿಕೊಂಡಿರುವ ಅವರು "ನಾನು ಈಗ ಕೆಲಸ ಬಿಡ್ಲಾ" ಎಂದು ಪೂಜಾರ ಅವರನ್ನು ಪ್ರಶ್ನೆ ಮಾಡಿದ್ದಾರೆ.
ಚೇತೇಶ್ವರ ಪೂಜಾರ ಲೆಗ್ ಸ್ಪಿನ್ ಬೌಲಿಂಗ್ ಮಾಡಿದ್ದು, ಅಶ್ವಿನ್ ಈ ರೀತಿ ಪ್ರಶ್ನೆ ಕೇಳಲು ಕಾರಣವಾಯಿತು. ಅಶ್ವಿನ್ ಪ್ರಶ್ನೆಗೆ ಉತ್ತರ ನೀಡಿರುವ ಪೂಜಾರ, ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಅಶ್ವಿನ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದಕ್ಕೆ ಕೃತಜ್ಞತೆ ಸಲ್ಲಿಸುವ ಮಾರ್ಗವಾಗಿದೆ ಎಂದು ಹಾಸ್ಯವಾಗಿ ಪ್ರತಿಕ್ರಿಯೆ ನೀಡಿದರು.
ಚೇತೇಶ್ವರ ಪೂಜಾರ ಅವರ ಪ್ರತಿಕ್ರಿಯೆಗೆ ಉತ್ತರ ನೀಡಿರುವ ಅಶ್ವಿನ್ ಮತ್ತೆ ಪೂಜಾರ ಅವರನ್ನು ಪ್ರಶ್ನೆ ಮಾಡಿದರು. "ನಿಮ್ಮ ಉದ್ದೇಶವನ್ನು ಪ್ರಶಂಸಿಸುತ್ತೇನೆ, ಆದರೆ ಇದು ಹೇಗೆ ಮರುಪಾವತಿಯಾಗಿದೆ ಎಂದು ಅಚ್ಚರಿಯಾಗುತ್ತದೆ" ಎಂದರು.
ವೈರಲ್ ಆಯ್ತು ಅಶ್ವಿನ್ ಟ್ವೀಟ್
ಅಶ್ವಿನ್ ಮಾಡಿರುವ ಮೊದಲ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ಟ್ವೀಟ್ ಕೆಲವೇ ಗಂಟೆಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಲೈಕ್ ಗಳಿಸಿಕೊಂಡಿದೆ. 6,000 ಕ್ಕೂ ಹೆಚ್ಚು ಅಭಿಮಾನಿಗಳು ಇದನ್ನು ಇಲ್ಲಿಯವರೆಗೆ ರೀಟ್ವೀಟ್ ಮಾಡಿದ್ದಾರೆ, 735 ಅಭಿಮಾನಿಗಳು ಅದನ್ನು ಉಲ್ಲೇಖಿಸಿದ್ದಾರೆ ಮತ್ತು ಪೋಸ್ಟ್‌ನಲ್ಲಿ ತಮ್ಮದೇ ಆದ ಪ್ರತ್ಯುತ್ತರಗಳನ್ನು ನೀಡಿದ್ದಾರೆ.
ಅಶ್ವಿನ್ ಫೀಲ್ಡ್‌ನಲ್ಲಿ ತಮ್ಮ ಬೌಲಿಂಗ್ ಮತ್ತು ಬ್ಯಾಟಿಂಗ್‌ನಿಂದ ಗಮನ ಸೆಳೆದರೆ, ಮೈದಾನದ ಹೊರಗಡೆ ತಮ್ಮ ವಿಶೇಷ ಹಾಸ್ಯಪ್ರಜ್ಞೆಯಿಂದ ಗಮನ ಸೆಳೆಯುತ್ತಾರೆ. ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯನ್ನು ಭಾರತ ಗೆಲ್ಲುವಲ್ಲಿ ಅವರ ಪಾತ್ರ ಸಾಕಷ್ಟು ಮುಖ್ಯವಾಗಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟ್ರೋಫಿ ಗೆಲ್ಲುವ ಗುರಿ
ಆಸ್ಟ್ರೇಲಿಯಾ ವಿರುದ್ಧದ ಸರಣಿ ಗೆಲ್ಲುವ ಜೊತೆಯಲ್ಲಿ ಯಶಸ್ವಿಯಾದ ಬಳಿಕ ಭಾರತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ. ಭಾರತ ಆಸ್ಟ್ರೇಲಿಯಾ ವಿರುದ್ಧ ಫೈನಲ್ ಪಂದ್ಯವನ್ನು ಆಡಲು ಇಂಗ್ಲೆಂಡ್‌ಗೆ ತೆರಳಲಿದೆ.
ಜೂನ್ 7 ರಂದು ಇಂಗ್ಲೆಂಡ್‌ನ ಓವಲ್ ಅಂಗಳದಲ್ಲಿ ಫೈನಲ್ ಪಂದ್ಯ ಆರಂಭವಾಗಲಿದೆ. ರವಿಚಂದ್ರನ್ ಅಶ್ವಿನ್ ಮತ್ತು ಚೇತೇಶ್ವರ ಪೂಜಾರ ಭಾರತಕ್ಕೆ ಪ್ರಮುಖ ಆಟಗಾರರಾಗಿದ್ದಾರೆ. ಇವರಿಬ್ಬರೂ ಜೂನ್‌ನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತವನ್ನು ಗೆಲ್ಲಿಸುವ ಗುರಿ ಹೊಂದಿದ್ದಾರೆ.
ಕಳೆದ ಬಾರಿ ಕೂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ತಲುಪಿದ್ದ ಭಾರತ ನ್ಯೂಜಿಲೆಂಡ್ ವಿರುದ್ಧ ಸೋಲುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಈ ಬಾರಿ ಚಾಂಪಿಯನ್ ಆಗುವ ವಿಶ್ವಾಸದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications