ಭಾರತ ವಿರುದ್ಧದ ಟೆಸ್ಟ್ ಸರಣಿ ಆಶಸ್‌ಗಿಂತ ಕಠಿಣ: ಒಪ್ಪಿಕೊಂಡ ಆಸಿಸ್ ಕ್ರಿಕೆಟಿಗರು!

ಭಾರತ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ತಂಡ ಸಿದ್ಧತೆ ನಡೆಸುತ್ತಿದೆ. ನಾಗ್ಪುರದಲ್ಲಿ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಎರಡು ತಂಡಗಳು ಕೂಡ ಬರದ ಸಿದ್ಧತೆ ನಡೆಸುತ್ತಿದೆ. ಭಾರತದ ನೆಲದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಎಂದಿನಂತೆಯೇ ಕಠಿಣ ಸವಾಲು ಇದಾಗಿದ್ದು ಈ ಸವಾಲನ್ನು ಯಾವ ರೀತಿಯಾಗಿ ಎದುರಿಸಲಿದೆ ಎಂಬುದು ಕುತೂಹಲ ಮೂಡಿಸಿದೆ. ಈ ಸಂದರ್ಭದಲ್ಲಿ ಇಂಗ್ಲೆಂಡ್ ವಿರುದ್ಧದ ಆಶಸ್ ಟೆಸ್ಟ ಸರಣಿ ಹಾಗೂ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಮಧ್ಯೆ ಯಾವುದು ಕಠಿಣ ಎಂಬ ವಿಚಾರವಾಗಿ ಆಸ್ಟ್ರೇಲಿಯಾ ಕ್ರಿಕೆಟಿಗರು ಮಾತನಾಡಿದ್ದಾರೆ.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವೆ ನಡೆಯುವ ಆಶಸ್ ಟೆಸ್ಟ್ ಸರಣಿಗೆ ವಿಶೇಷವಾದ ಇತಿಹಾಸವಿದ್ದು ಪ್ರತಿಷ್ಠಿತ ಟೂರ್ನಿ ಎನಿಸಿಕೊಂಡಿದೆ. ಈ ಎರಡು ತಂಡಗಳು ಕೂಡ ಆಶಸ್ ಸರಣಿಯಲ್ಲಿ ಗೆಲುವು ಸಾಧಿಸುವುದನ್ನು ಹಲವು ದಶಕಗಳಿಂದ ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ. ಆದರೆ ಈಗ ಭಾರತದ ವಿರುದ್ಧದ ಟೆಸ್ಟ್ ಸರಣಿಯಾದ ಬಾರ್ಡರ್-ಗವಾಸ್ಕರ್ ಟ್ರೋಫಿ ಆಶಸ್ ಸರಣಿಗಿಂತಲೂ ಕಠಿಣ ಸರಣಿ ಎಂದು ಆಸ್ಟ್ರೇಲಿಯಾ ಆಟಗಾರರು ಅನಿಸಿಕೆ ಹಂಚಿಕೊಂಡಿದ್ದಾರೆ.

ಆಶಸ್ or ಬಾರ್ಡರ್ ಗವಾಸ್ಕರ್ ಟ್ರೋಫಿ
ಆಸ್ಟ್ರೇಲಿಯಾದ ಸ್ಟಾರ್ ಆಟಗಾರರ ವಿಶೇಷ ಮಾತುಕತೆಯಲ್ಲಿ ಭಾರತ ಪ್ರವಾಸ ಹಾಗೂ ಆಶಸ್ ಅವೇ ಸರಣಿಯಲ್ಲಿ ಯಾವುದು ಕಠಿಣ ಎಂಬ ಪ್ರಶ್ನೆಯನ್ನು ಕೇಳಲಾಯಿತು. ಈ ಪ್ರಶ್ನೆಗೆ ಆಸ್ಟ್ರೇಲಿಯಾದ ಸ್ಟಾರ್ ಆಟಗಾರರಾದ ಮಿಚೆಲ್ ಸ್ಟಾರ್ಕ್, ಸ್ಟೀವ್ ಸ್ಮಿತ್, ದೇವಿಡ್ ವಾರ್ನರ್ ಸೇರಿದಂತೆ ಕೆಲ ಪ್ರಮುಖ ಆಟಗಾರರು ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಆಶಸ್ ಸರಣಿಗಿಂತಲೂ ಭಾರತದ ಪ್ರವಾಸವೇ ಅತ್ಯಂತ ಕಠಿಣ ಎಂದಿದ್ದಾರೆ.

ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದರೆ ಆಶಸ್‌ಗಿಂತ ದೊಡ್ಡದು
ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ "ಸರಣಿ ಬಿಟ್ಟು ಬಿಡಿ ಭಾರತದಲ್ಲಿ ಒಂದು ಟೆಸ್ಟ್ ಪಂದ್ಯವನ್ನು ಗೆಲ್ಲುವುದು ಕೂಡ ಬಹಳ ಕಷ್ಟ. ಈ ದುರ್ಗಮ ಪರ್ವತವನ್ನು ಏರಲು ಸಾಧ್ಯವಾದರೆ ಅದು ದೊಡ್ಡ ಸಾಧನೆ. ಭಾರತದಲ್ಲಿ ನಾವು ಟೆಸ್ಟ್ ಸರಣಿಯನ್ನು ಗೆಲ್ಲಲು ಸಾಧ್ಯವಾದರೆ, ಅದು ಆಶಸ್ ಸರಣಿಗಿಂತಲೂ ದೊಡ್ಡ ಸಾಧನೆ" ಎಂದಿದ್ದಾರೆ ಆಸ್ಟ್ರೇಲಿಯಾ ತಂಡದ ಹಿರಿಯ ಆಟಗಾರ ಸ್ಟೀವ್ ಸ್ಮಿತ್.

ಮಿಚೆಲ್ ಸ್ಟಾರ್ಕ್ ಹೇಳಿದ್ದಿಷ್ಟು
ಇನ್ನು ಆಸ್ಟ್ರೇಲಿಯಾದ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ "ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದರೆ ಅದು ನಮ್ಮ ತಂಡಕ್ಕೆ ಬಹಳ ವಿಶೇಷವಾಗಿರಲಿದೆ. ಇದು ವಿದೇಶದಲ್ಲಿ ಆಡುವ ತಾಣಗಳ ಪೈಕಿ ಟೆಸ್ಟ್ ಗೆಲ್ಲಲು ಅತ್ಯಂತ ಕಠಿಣ ಸ್ಥಳವಾಗಿದೆ. ಇಂಥಾ ಪ್ರದೇಶದಲ್ಲಿ ಬಲಿಷ್ಠವಾಗಿರುವ ಭಾರತ ತಂಡದ ವಿರುದ್ಧ ಗೆಲುವು ಸಾಧಿಸಿದರೆ ಅದು ಅತ್ಯಂತ ವಿಶೇಷವಾಗಿರುತ್ತದೆ" ಎಂದಿದ್ದಾರೆ.

ಕಳೆದ ಬಾರಿ ಅತ್ಯುತ್ತಮ ಅವಕಾಶವಿತ್ತು ಎಂದ ಹೇಜಲ್‌ವುಡ್
ಇನ್ನು ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಮತ್ತೋರ್ವ ಸ್ಟಾರ್ ವೇಗಿ ಜೋಶ್ ಹೇಜಲ್‌ವುಡ್ ಕಳೆದ ಬಾರಿ ಭಾರತ ಪ್ರವಾಸ ಕೈಗೊಂಡಿದ್ದಾಗ ಟೆಸ್ಟ್ ಸರಣಿ ಗೆಲ್ಲಲು ಅತ್ಯುತ್ತಮ ಅವಕಾಶವಿತ್ತು ಎಂದಿದ್ದಾರೆ. "ನಾವು ಕಳೆದ ಬಾರಿ ಒಂದು ಟೆಸ್ಟ್ ಪಂದ್ಯವನ್ನು ಗೆದ್ದಿದ್ದೆವು. ಆ ಸಂದರ್ಭದಲ್ಲಿ ಸರಣಿ ಗೆಲ್ಲಲು ಅದ್ಭುತವಾದ ಅವಕಾಶವಿತ್ತು. ಆದರೆ ಆ ಅವಕಾಶವನ್ನು ನಾವು ಸರಿಯಾಗಿ ಬಳಸಿಕೊಳ್ಳಲಿಲ್ಲ. ಹೀಗಾಗಿ ಈ ಬಾರಿ ಅದಕ್ಕಾಗಿ ನಾವು ಎದುರು ನೋಡುತ್ತಿದ್ದೇವೆ" ಎಂದಿದ್ದಾರೆ.
ಇನ್ನು ಆಸ್ಟ್ರೇಲಿಯಾದ ಆರಂಬಿಕ ಆಟಗಾರ ಡೇವಿಡ್ ವಾರ್ನರ್ ಪ್ರತಿಕ್ರಿಯೆ ನೀಡಿದ್ದು "ಕಳೆದ ಆಶಸ್ ಸರಣಿಯಲ್ಲಿ ಭಾಗವಾಗಿದ್ದು ಅದ್ಭುತವಾದ ಅನುಭವ. ಆದರೆ ಭಾರತ ಪ್ರವಾಸ ಕೈಗೊಂಡು ಭಾರತವನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಸೋಲಿಸುವುದೆಂದರೆ ಅದು ನಮ್ಮ ಪಾಲಿಗೆ ಬಹಳ ಕಠಿಣವಾದ ಸವಾಲಾಗಿದೆ" ಎಂದಿದ್ದಾರೆ ಡೇವಿಡ್ ವಾರ್ನರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications